ಶತಕದ ದಾಖಲೆ ಬರೆದ ಸುವರ್ಣ ವಿಧಾನಸೌಧ ಅಧಿವೇಶನ
ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ. 22: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನವು ನೂರು ದಿನಗಳನ್ನು ಪೂರ್ಣಗೊಳಿಸಿದ್ದು, 2006ರಲ್ಲಿ ಪ್ರಾರಂಭವಾದ ಅಧಿವೇಶನವು ಇಂದಿಗೆ(ಡಿ.22) ಶತಕದ ದಾಖಲೆ ಬರೆದಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಪ್ರಾರಂಭಿಸಲಾಯಿತು. 12ನೆ ವಿಧಾನಸಭೆಯ ನಾಲ್ಕನೆಯ ಅಧಿವೇಶನವು 2006ರ ಸೆಪ್ಟಂಬರ್ 25ರಿಂದ 29ರವರೆಗೆ ಕೆಎಲ್‍ಇ ಸಂಸ್ಥೆಯಲ್ಲಿ 5 ದಿನಗಳ ಕಾಲ ನಡೆದಿತ್ತು. ಇದು ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಚೊಚ್ಚಲ ಅಧಿವೇಶನವಾಗಿತ್ತು.
ಎರಡನೆಯ ಅಧಿವೇಶನವು 2009ರ ಜನವರಿ 16ರಿಂದ 24ರವರೆಗೆ ಒಟ್ಟು 8 ದಿನಗಳ ಕಾಲ ನಡೆದಿತ್ತು. ಇದರ ಮುಂದುವರೆದ ಅಧಿವೇಶನವು ಮತ್ತೆ ಫೆಬ್ರವರಿ 19ರಿಂದ 27ರವರೆಗೆ ಆರು ದಿನಗಳ ಕಾಲ ನಡೆದಿತ್ತು. ಸುವರ್ಣ ವಿಧಾನಸೌಧ ನಿರ್ಮಾಣವಾದ ನಂತರ 15ನೆ ಅಧಿವೇಶನವು 2012ರ ಡಿಸೆಂಬರ್ 5ರಿಂದ 13ರವರೆಗೆ ಏಳು ದಿನಗಳ ಕಾಲ ನಡೆದಿದೆ. ಇದು ಸುವರ್ಣ ವಿಧಾನಸೌಧದಲ್ಲಿ ನಡೆದ ಮೊದಲ ಅಧಿವೇಶನವಾಗಿದೆ. ಆಗ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದರು.
ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಸೀಮಿತಗೊಂಡಿದೆ. ಯಾವ ಮಹತ್ವದ ಉದ್ದೇಶದಿಂದ ಅಧಿವೇಶನ ನಡೆಸಲು ಆರಂಭಿಸಲಾಯಿತೋ ಆ ಉದ್ದೇಶ ಇದುವರೆಗೆ ಈಡೇರಿಲ್ಲ ಎಂಬ ಕೂಗು ಮಾತ್ರ ನಿಂತಿಲ್ಲ. ಭವ್ಯವಾದ ಸುವರ್ಣ ವಿಧಾನಸೌಧವನ್ನು ನಿರ್ಮಿಸಿದ್ದರೂ ರಾಜಧಾನಿಯಿಂದ ಕೆಲವು ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರ ಮಾಡಬೇಕೆಂಬ ಬೇಡಿಕೆಯು ಇದುವರೆಗೆ ಈಡೇರಿಲ್ಲ.
ಇದನ್ನೂ ಓದಿ: ಈ ದೇಶದ ಅನ್ನದಾತ ಎಂದರೆ, ಅದು ನೆಹರು ಮಾತ್ರ...: ಎಚ್.ವಿಶ್ವನಾಥ್