ಇಸ್ರೇಲ್ ದಾಳಿ: ಫೆಲೆಸ್ತೀನ್ ನ ಫುಟ್ಬಾಲ್ ಆಟಗಾರ ಮೃತ್ಯು

ಜೆರುಸಲೇಂ, ಡಿ.22: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲಿ(Israel) ಪಡೆಯ ಗುಂಡಿನ ದಾಳಿಯಲ್ಲಿ ಫೆಲೆಸ್ತೀನ್ ನ 23 ವರ್ಷದ ಫುಟ್ಬಾಲ್ ಆಟಗಾರ ಅಹ್ಮದ್ ದರಘ್ಮೆಹ್(Ahmed Daraghmeh) ಹತನಾಗಿದ್ದು ಇತರ 5 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಪಶ್ಚಿಮ ದಂಡೆಯ ಫೆಲೆಸ್ತೀನ್ ನಗರ ನಬ್ಲಸ್ ನಲ್ಲಿರುವ ‘ಜೋಸೆಫ್ಸ್ರ ಸಮಾಧಿ"(Joseph's Tomb) ಎಂಬ ಸ್ಥಳಕ್ಕೆ ತೆರಳುತ್ತಿದ್ದ ಇಸ್ರೇಲಿ ಯೆಹೂದಿಯರಿಗೆ ಬೆಂಗಾವಲಾಗಿದ್ದ ಇಸ್ರೇಲಿ ಪೊಲೀಸರು ಹಾಗೂ ಫೆಲೆಸ್ತೀನಿಯರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಅಹ್ಮದ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಅಹ್ಮದ್ ಪ್ರತಿಭಾವಂತ ಫುಟ್ಬಾಲ್ ಆಟಗಾರನಾಗಿದ್ದು ವೆಸ್ಟ್ಬ್ಯಾಂಕ್ ಪ್ರೀಮಿಯರ್ ಲೀಗ್ ನ ಥಖಾಫಿ ತುಲ್ಕರೆಮ್ ತಂಡದ ಪರ ಆಡುತ್ತಿದ್ದರು ಎಂದು ಪೆಲೆಸ್ತೀನ್ ಮಾಧ್ಯಮಗಳು ವರದಿ ಮಾಡಿವೆ.
ನಬ್ಲೂಸ್ ನಗರಕ್ಕೆ ಆಗಮಿಸಿದಾಗ ಅಲ್ಲಿದ್ದ ಕೆಲವು ಫೆಲೆಸ್ತೀನೀಯರು ಇಸ್ರೇಲ್ ಭದ್ರತಾ ಪಡೆಯತ್ತ ಸ್ಫೋಟಕ ಎಸೆದು ಗುಂಡುಹಾರಿಸಿದರು. ಇದಕ್ಕೆ ಭದ್ರತಾ ಸಿಬಂದಿ ಪ್ರತ್ಯುತ್ತರ ನೀಡಿದಾಗ ‘ಶಂಕಿತ’ ವ್ಯಕ್ತಿಗೆ ಗುಂಡೇಟು ಬಿದ್ದಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.