ಚಿಕ್ಕಮಗಳೂರು: ದಲಿತ ವ್ಯಕ್ತಿಯ ಶವಸಂಸ್ಕಾರಕ್ಕೆ ಭೂ ಮಾಲಕನಿಂದ ಅಡ್ಡಿ ಆರೋಪ
ನಾಡಕಚೇರಿ ಎದುರು ಶವ ಇಟ್ಟು ಕುಟುಂಬಸ್ಥರಿಂದ ಧರಣಿ
ಚಿಕ್ಕಮಗಳೂರು, ಡಿ.22: ಸರಕಾರಿ ಜಾಗದಲ್ಲಿ ದಲಿತ ಮಹಿಳೆಯ ಶವಸಂಸ್ಕಾರಕ್ಕೆ ಜಮೀನು ಮಾಲಕನೊಬ್ಬ ಅಡ್ಡಿ ಪಡಿಸಿದ್ದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಕರ್ನಾಟಕ ಜನಶಕ್ತಿ ಸಂಘಟನೆ ಮುಖಂಡರ ನೇತೃತ್ವದಲ್ಲಿ ನಾಡಕಚೇರಿ ಎದುರು ಮಹಿಳೆಯ ಶವ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಹೇರೂರು ಗ್ರಾಮದ ಹುತ್ತಿನಗದ್ದೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.
ಬುಧವಾರ ಇದೇ ಗ್ರಾಮದಲ್ಲಿ ಮಂಜಯ್ಯ(55) ಎಂಬವರು ಅನಾರೋಗ್ಯದಿಂದ ಮೃತಪಟ್ಟಿದ್ದು, ಕುಟುಂಬಸ್ಥರು ಗ್ರಾಮದಲ್ಲಿರುವ ಸರಕಾರಿ ಜಾಗದಲ್ಲಿ ಶವಸಂಸ್ಕಾರ ಮಾಡಲು ಮುಂದಾಗಿದ್ದಾರೆ. ಈ ವೇಳೆ ಜಾಗ ಒತ್ತುವರಿ ಮಾಡಿದ್ದ ಭೂ ಮಾಲಕನೊನ್ನ ಜಾಗ ತನ್ನದೆಂದು ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ್ದಾರೆನ್ನಲಾಗಿದೆ. ಈ ವೇಳೆ ಗ್ರಾಮಸ್ಥರು ಕರ್ನಾಟಕ ಜನಶಕ್ತಿ ಸಂಘಟನೆಯ ಸ್ಥಳೀಯ ಮುಖಂಡರಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕೆ ಬಂದ ಅವರು ಸಂಘಟನೆಯ ಇತರ ಮುಖಂಡರೊಂದಿಗೆ ಶವವನ್ನು ಜಯಪುರ ಪಟ್ಟಣದಲ್ಲಿರುವ ನಾಡಕಚೇರಿ ಆವರಣಕ್ಕೆ ಕೊಂಡೊಯ್ದು ಶವ ಮುಂದಿಟ್ಟುಕೊಂಡು ಧರಣಿ ಮಾಡಿದ್ದಾರೆ. ಗ್ರಾಮದ ಜನರಿಗೆ ಕೂಡಲೇ ಸ್ಮಶಾನ ಜಾಗ ಮಂಜೂರು ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಅಧಿಕಾರಿಗಳು ಮನವೊಲಿಸಿದರೂ ಪ್ರಯೋಜವಾಗಿಲ್ಲ.
ಧರಣಿ ವಾಪಸ್: ಸ್ಥಳಕ್ಕಾಗಮಿಸಿದ ಕೊಪ್ಪ ತಹಶೀಲ್ದಾರ್ ವಿಮಲಾ, ಎಎಸ್ಪಿ ಗುಂಜನ್ ಆರ್ಯ ಪ್ರತಿಭಟನಾಕಾರರ ಮನವೊಲಿಸಿ ಸ್ಮಶಾನ ಜಾಗ ಮಂಜೂರು ಮಾಡುವ ನಿಟ್ಟಿನಲ್ಲಿ ಶೀಘ್ರ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರಿಂದ ಧರಣಿಯನ್ನು ಹಿಂಪಡೆದು ಅಧಿಕಾರಿಗಳು ಸೂಚಿಸಿದ ಜಾಗದಲ್ಲಿ ಶವಸಂಸ್ಕಾರ ನೆರವೇರಿಸಲಾಗಿದೆ.