ನೇಮಕಾತಿ ಅಭಿಯಾನದ ಹೊರತಾಗಿಯು ಐಐಟಿ, ಕೇಂದ್ರೀಯ ವಿ.ವಿಗಳಲ್ಲಿ ಕೇವಲ ಶೇ. 30 ಮೀಸಲಾತಿ ಹುದ್ದೆ ಭರ್ತಿ
![ನೇಮಕಾತಿ ಅಭಿಯಾನದ ಹೊರತಾಗಿಯು ಐಐಟಿ, ಕೇಂದ್ರೀಯ ವಿ.ವಿಗಳಲ್ಲಿ ಕೇವಲ ಶೇ. 30 ಮೀಸಲಾತಿ ಹುದ್ದೆ ಭರ್ತಿ ನೇಮಕಾತಿ ಅಭಿಯಾನದ ಹೊರತಾಗಿಯು ಐಐಟಿ, ಕೇಂದ್ರೀಯ ವಿ.ವಿಗಳಲ್ಲಿ ಕೇವಲ ಶೇ. 30 ಮೀಸಲಾತಿ ಹುದ್ದೆ ಭರ್ತಿ](https://www.varthabharati.in/sites/default/files/images/articles/2022/12/22/360993-1671730974.jpeg)
ಹೊಸದಿಲ್ಲಿ, ಡಿ. 22: ಐಐಟಿ ಹಾಗೂ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಮೀಸಲು ವರ್ಗದ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಒಂದು ವರ್ಷ ಅವಧಿಯ ನೇಮಕಾತಿ ಅಭಿಯಾನ ನಡೆಸಿದ ಹೊರತಾಗಿಯೂ ಕೇವಲ ಶೇ. 30 ಬೋಧಕ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ ಎಂದು ಶಿಕ್ಷಣ ಸಚಿವಾಲಯ ಸಂಸತ್ತಿಗೆ ತಿಳಿಸಿದೆ.
2021 ಸೆಪ್ಟಂಬರ್ 5 ಹಾಗೂ 2022 ಸೆಪ್ಟಂಬರ್ 5ರ ನಡುವೆ 1,439 ಬೋಧಕ ಹುದ್ದೆಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಕೇವಲ 449 ಬೋಧಕರನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗಿದೆ ಎಂದು ಅದು ಹೇಳಿದೆ. ಸಿಪಿಐ (Marxist)ಯ ಎಸ್. ವೆಂಕಟೇಶನ್(S. Venkatesh) ಈ ಪ್ರಶ್ನೆಯನ್ನು ಲೋಕಸಭೆಯಲ್ಲಿ ಕೇಳಿದ ನಂತರ ಶಿಕ್ಷಣದ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ‘ನೇಮಕಾತಿ ಅಭಿಯಾನ’ದ ಬಗ್ಗೆ ದತ್ತಾಂಶವನ್ನು ಪ್ರಸ್ತುತಪಡಿಸಿದರು. ಈ ಮೀಸಲಾತಿ ವರ್ಗಗಳ ಅಡಿಯಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರಕಾರ ದೇಶಾದ್ಯಂತದ 23 ಐಐಟಿಗಳು ಹಾಗೂ 45 ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ ನಿರ್ದೇಶನ ನೀಡಿತ್ತು.
ಆದರೆ, ವರ್ಷಗಳ ಬಳಿಕವೂ 10 ಐಐಟಿಗಳು ಮಾತ್ರ ಈ ವಿಭಾಗಗಳಲ್ಲಿ 342 ಪ್ರಾಧ್ಯಾಪಕರು, ಸಹ ಪ್ರಾದ್ಯಾಪಕರು ಹಾಗೂ ಸಹಾಯಕ ಪ್ರಾದ್ಯಾಪಕರ ಖಾಲಿ ಹುದ್ದೆಗಳನ್ನು ಗುರುತಿಸಲು ಸಮರ್ಥವಾದವು. 19 ಐಐಟಿಗಳು ಈ ವಿಭಾಗಗಳಲ್ಲಿ ಒಟ್ಟು 237 ಹುದ್ದೆಗಳನ್ನು ಭರ್ತಿ ಮಾಡಿದವು. ಈ ನೇಮಕಾತಿಯ ಅಭಿಯಾನದ ಅಂತ್ಯದಲ್ಲಿ 14 ಐಐಟಿಗಳಲ್ಲಿ 358 ಹುದ್ದೆಗಳು ಖಾಲಿ ಉಳಿದಿರುವುದನ್ನು ವಿಶ್ಲೇಷಣೆ ತೋರಿಸಿದೆ.
45ರಲ್ಲಿ ಕೇವಲ 33 ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಮೀಸಲು ವರ್ಗದ ಒಟ್ಟು 1,097 ಹುದ್ದೆಗಳನ್ನು ಗುರುತಿಸಿದ್ದು, ಇದರಲ್ಲಿ ಕೇವಲ 212 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿವೆ ಎಂದು ಸರಕಾರದ ದತ್ತಾಂಶ ಬಹಿರಂಗಪಡಿಸಿದೆ. ಈ 33 ವಿಶ್ವವಿದ್ಯಾನಿಲಯಗಳ ಪೈಕಿ 18 ವಿಶ್ವವಿದ್ಯಾನಿಲಯಗಳು ಎಸ್ಸಿ, ಎಸ್ಟಿ ಹಾಗೂ ಒಬಿಸಿ ಬೋಧಕರನ್ನು ನೇಮಕ ಮಾಡಿದೆ ಎಂದು ದತ್ತಾಂಶ ತಿಳಿಸಿದೆ.