ಕೊರೋನ ಆತಂಕ: ಹೊಸದಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರಕಾರ
ಬೆಂಗಳೂರು, ಡಿ.22: ನೆರೆಯ ಚೀನಾದಲ್ಲಿ ಕೊರೋನ ಸೋಂಕಿನ ಹಾವಳಿ ಹೆಚ್ಚಾಗಿದೆ. ಹೀಗಾಗಿ, ಕರ್ನಾಟಕದಲ್ಲೂ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮುಂದಾಗಿದ್ದು,ರಾಜ್ಯ ಸರಕಾರದಿಂದ ಹೊಸದಾಗಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಐಎಲ್‍ಐ/ಎಸ್‍ಎಆರ್‍ಐ ಪ್ರಕರಣಗಳಿಗೆ ಕೋವಿಡ್ ಟೆಸ್ಟ್ ಮಾಡಿಸುವುದು ಕಡ್ಡಾಯ. ಸೋಂಕಿನ ಲಕ್ಷಣ ಹೊಂದಿರುವವರು, ಖಚಿತ ಪ್ರಕರಣಗಳ ಸಂಪರ್ಕಿತರು ಇನ್ಮುಂದೆ ಕೋವಿಡ್ ಪರೀಕ್ಷೆಗೆ ಒಳಪಡುವುದು ಕಡ್ಡಾಯ ಮಾಡಲಾಗಿದೆ. ಸೋಂಕಿತರನ್ನು ಆಸ್ಪತ್ರೆಗೆ ಕರೆತರುವ ತಂಡ ಕಾರ್ಯೋನ್ಮುಖವಾಗಬೇಕು. ಬಿಬಿಎಂಪಿ, ಜಿಲ್ಲಾ ವ್ಯಾಪ್ತಿಯಲ್ಲಿ ತಂಡ ಕಾರ್ಯೋನ್ಮುಖವಾಗಬೇಕು. ಬೆಂಗಳೂರು, ಮಂಗಳೂರು ಏರ್ಪೋರ್ಟ್‍ನಲ್ಲಿ ಕೋವಿಡ್ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ಕೇಂದ್ರದ ನಿಯಮದಂತೆ ಶೇ.2ರಷ್ಟು ಪ್ರಯಾಣಿಕರಿಗೆ ಟೆಸ್ಟ್ ಮುಂದುವರಿಸಬೇಕು. ಪಾಸಿಟಿವ್ ಬಂದರೆ ಜಿನೋಮಿಕ್ ಸೀಕ್ವೆನ್ಸ್ ಕಡ್ಡಾಯ ಮಾಡಲಾಗಿದೆ. ಜಿಲ್ಲಾಸ್ಪತ್ರೆ, ಖಾಸಗಿ ಮತ್ತು ವೈದ್ಯ ಕಾಲೇಜು ಆಸ್ಪತ್ರೆಗಳಲ್ಲಿ ಐಸೋಲೇಷನ್ ಬೆಡ್ ಮೀಸಲಿಡಬೇಕು. ಸೋಂಕು ಹೆಚ್ಚಾದಲ್ಲಿ ಸರಕಾರಿ, ಖಾಸಗಿ ಆಸ್ಪತ್ರೆಗಳು ಸನ್ನದ್ಧವಾಗಿರಬೇಕು. ಆಕ್ಸಿಜನ್, ಬೆಡ್, ಔಷಧ ದಾಸ್ತಾನು ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಆಕ್ಸಿಜನ್ ಪೂರೈಕೆ ಖಚಿತಪಡಿಸಲು 15 ದಿನಕ್ಕೊಮ್ಮೆ ಡ್ರೈರನ್ ಕಡ್ಡಾಯವಾಗಿದೆ. ಆಸ್ಪತ್ರೆ ವೈದ್ಯ ಸಿಬ್ಬಂದಿ, ರೋಗಿಗಳು, ಸಂಬಂಧಿಕರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ.