ರೈಲು ಹಳಿ ತಪ್ಪಲು ಪ್ರಮುಖ ಕಾರಣ ಇದು... ಸಿಎಜಿ ಹೇಳಿದ್ದೇನು?

ಹೊಸದಿಲ್ಲಿ: ರೈಲು ಹಳಿಗಳ ಅಸಮರ್ಪಕ ನಿರ್ವಹಣೆ, ರೈಲು ಗಳಿಗಳ ಆಧುನೀಕರಣದ ನಿಧಾನ ಗತಿ ಮತ್ತು ಹಳಿಗಳ ಮಾನದಂಡದಿಂದ ವಿಮುಖವಾಗಿರುವುದು ಬಹುತೇಕ ರೈಲು ದುರಂತಗಳಿಗೆ ಕಾರಣ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಅಭಿಪ್ರಾಯಪಟ್ಟಿದ್ದಾರೆ.
ಕಾರ್ಯಾಚರಣೆ ವಿಭಾಗ ಸಂಚಾರ ತಡೆಯಬೇಕಾದ ಅಗತ್ಯತೆ ಹಿನ್ನೆಲೆಯಲ್ಲಿ ಟ್ರ್ಯಾಕ್ ಮೆಷಿನ್‌ಗಳು ನಿಷ್ಕ್ರಿಯವಾಗಿ ಉಳಿದಿವೆ. ಈ ವಿಭಾಗ ರೈಲುಗಳನ್ನು ತಡೆಯಲು ಮತ್ತು ಕಾರ್ಯಾಚರಣೆ ಸಮಸ್ಯೆಗಳ ಬಗ್ಗೆ ಸೂಕ್ತ ಯೊಜನೆ ರೂಪಿಸಿಲ್ಲ ಎಂದು ಸಿಎಜಿ ವರದಿಯಲ್ಲಿ ಲೋಪಗಳನ್ನು ಪಟ್ಟಿ ಮಾಡಲಾಗಿದೆ.
ಟ್ರ್ಯಾಕ್ ರೆಕಾರ್ಡಿಂಗ್ ಕಾರು (ಟಿಆರ್‌ಸಿ) ತಪಾಸಣೆಗಳು ಕಡಿಮೆಯಾಗಿರುವುದು ಗುಣಮಟ್ಟದ ಆಸ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದು ಸಂಚರಿಸುವ ರೈಲುಗಳ ಸುರಕ್ಷಿತ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಿದೆ. ಈ ಹಂತದಲ್ಲಿ ರೈಲುಗಳ ಸಮಯ ಪರಿಪಾಲನೆ ಮತ್ತು ಸಂಚಾರ ತಡೆಗಳ ದೊಡ್ಡ ಸವಾಲಾಗಿ ಪರಿಣಮಿಸಿವೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ಹೇಳುತ್ತವೆ.
2019ರ ಫೆಬ್ರುವರಿಯಲ್ಲಿ ನಡೆದ ಸೀಮಾಂಚಲ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿದ ಘಟನೆಗೆ ಸಂಬಂಧಿಸಿದ ತನಿಖಾ ವರದಿಯನ್ನು ಸಿಎಜಿ ವರದಿ ಉಲ್ಲೇಖಿಸಿದ್ದು, ಈ ವಿಭಾಗದಲ್ಲಿ ಟಿಆರ್‌ಸಿ ಪರಿಶೀಲನೆ ನಾಲ್ಕು ತಿಂಗಳಿಂದ ಬಾಕಿ ಇತ್ತು ಎಂದು ಈ ವರದಿಯಲ್ಲಿ ಹೇಳಲಾಗಿತ್ತು.







