ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆಗಿಂತ ನೋಂದಣಿ ಚೀಟಿ ಪಡೆಯಲು ರೋಗಿಗಳ ಹರಸಾಹಸ
ಸುಲಭ ವ್ಯವಸ್ಥೆಗೆ ಸರಕಾರಕ್ಕೆ ಸಾರ್ವಜನಿಕರ ಒತ್ತಾಯ

ಮೈಸೂರು, ಡಿ.23: ಅನಾರೋಗ್ಯಕ್ಕೆ ಒಳಗಾಗುವ ರೋಗಿಗಳು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವುದಕ್ಕಿಂತ ನೋಂದಣಿ ಚೀಟಿ ಪಡೆಯಲು, ಒಳರೋಗಿಗಳಾಗಿ ದಾಖಲಾಗಲು ಮತ್ತು ಇತರ ರೋಗಗಳ ಪರೀಕ್ಷೆಗೆ ಹಣಕಟ್ಟಲು ಕೌಂಟರ್‌ಗಳ ಎದುರು ಗಂಟೆಗಟ್ಟಲೆ ದೊಡ್ಡದೊಡ್ಡಸಾಲಿನಲ್ಲಿ ನಿಂತು ಹೈರಾಣಾಗಿ ರೋಧನೆ ಅನುಭವಿಸುತ್ತಿರುವ ಘಟನೆ ಮೈಸೂರಿನ ದೊಡ್ಡಾಸ್ಪತ್ರೆ ಎಂದೇ ಖ್ಯಾತಿ ಪಡೆದಿರುವ ಕೆ.ಆರ್.ಆಸ್ಪತ್ರೆಯಲ್ಲಿ ದಿನ ನಿತ್ಯಕಂಡು ಬರುತ್ತಿದೆ.
ಬಡವರು, ಮಧ್ಯಮ ವರ್ಗದವರ ಪಾಲಿನ ಕೆ.ಆರ್.ಆಸ್ಪತ್ರೆಗೆ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಅವರು ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವ ಮೊದಲು ತಮ್ಮ ಹೆಸರು, ಊರು, ಯಾವ ಕಾಯಿಲೆ ಎಂಬಿತ್ಯಾದಿ ಅಂಶಗಳನ್ನು ನೋಂದಣಿ ಮಾಡಿಸಿ ಚೀಟಿ ಪಡೆಯಬೇಕು. ಹತ್ತು ಹದಿನೈದು ಕೌಂಟರ್‌ಗಳಲ್ಲಿ ಪ್ರತ್ಯೇಕ ಚೀಟಿ ನೀಡುವುದು ದಾಖಲಾತಿ ಪರೀಕ್ಷೆಗೆ ಹಣಕಟ್ಟಲು ವ್ಯವಸ್ಥೆ ಮಾಡಿದ್ದರು ಒತ್ತಡ ಮಾತ್ರ ಕಡಿಮೆಯಾಗದೆ ಜನ ಸಂಕಷ್ಟ ಅನುಭವಿಸಿ ಗಂಟೆಗಟ್ಟಲೇ ಸರತಿಸಾಲಿನಲ್ಲಿ ನಿಂತುಚೀಟಿ ಪಡೆಯಲು ಹರಸಾಹಸ ಪಡಬೇಕಾಗಿದೆ. ಚೀಟಿ ಪಡೆದು ವೈದ್ಯರ ಬಳಿ ಪರೀಕ್ಷೆ ಮಾಡಿಸಿ ಅವರ ಕಾಯಿಲೆಗೆ ಸಂಬಂಧಿಸಿದಂತೆ ಒಳರೋಗಿಗಳಾಗಿ ದಾಖಲುಗೊಳ್ಳಬೇಕು ಎಂದರೆ ಮತ್ತೆ ಅದೇ ಸರತಿ ಸಾಲಿನಲ್ಲಿ ನಿಲ್ಲಬೇಕು. ಹೊರರೋಗಿಗಳಾಗಿ ಬರುವವರು ಕಾಯಿಲೆಗೆ ಸಂಬಂಧಿಸಿದಂತೆ ಇತರ ಪರೀಕ್ಷೆಗಳನ್ನು ಮಾಡಿಸಲು ಹಣಕಟ್ಟಲು ಸಹ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆ ನಿರ್ಮಾಣಗೊಂಡು ಸಾರ್ವಜನಿಕರು ಸಂಬಂಧಪಟ್ಟವರ ವಿರುದ್ಧ ಅಸಮಧಾನ ಹೊರಹಾಕುತ್ತಿದ್ದಾರೆ.
ಕೆ.ಆರ್.ಆಸ್ಪತ್ರೆಯಲ್ಲಿ ನುರಿತ ಮತ್ತು ಅನುಭವಿ ತಜ್ಞ ವೈದ್ಯರಿದ್ದಾರೆ. ಅವರ ಬಳಿ ಚಿಕಿತ್ಸೆ ಪಡೆಯಬೇಕು ಎಂದು ಮೈಸೂರು ಜಿಲ್ಲೆಯಷ್ಟೇ ಅಲ್ಲದೆ ಪಕ್ಕದ ಚಾಮರಾಜನಗರ, ಮಂಡ್ಯ, ಕೊಡಗು ಮತ್ತು ಹಾಸನ ಜಿಲ್ಲೆಗಳಿಂದಲೂ ಸಾರ್ವಜನಿಕರು ಈ ಆಸ್ಪತ್ರೆಯನ್ನೇ ಆಶ್ರಯಿಸುತ್ತಾರೆ. ಹಾಗಾಗಿ ಚಿಕಿತ್ಸೆಗೆ ಬರುವವರ ಸಂಖ್ಯೆಕೂಡ ದಿನ ನಿತ್ಯ ಹೆಚ್ಚಾಗುತ್ತಲೇ ಇದೆ. ಆದರೆ ಅವರಿಗೆ ಸುಲಭವಾಗಿ ಸೌಲಭ್ಯಗಳು ದೊರಕದಿರುವುದು ಸಾರ್ವಜನಿಕರಿಗೆ ಬೇಸರವನ್ನುಂಟು ಮಾಡಿದೆ.
ಕೆ.ಆರ್.ಆಸ್ಪತ್ರೆ ಕಡೆಗೆ ವಾರ್ತಾಭಾರತಿ ರೌಂಡ್‌ಅಪ್ ಮಾಡಿದಾಗ ದೊಡ್ಡದೊಡ್ಡ ಸಾಲಿನಲ್ಲಿ ನಿಂತಿದ್ದ ಸಾರ್ವಜನಿಕರ ರೋಧನ ಕಣ್ಣಿಗೆ ಬಿತ್ತು. ಆಗ ಸಾರ್ವಜನಿಕರನ್ನು ಮಾತನಾಡಿಸಲು ಪ್ರಯತ್ನಿಸಿದಾಗ ಬೆಳಗ್ಗೆ 9 ಗಂಟೆಗೆಚೀಟಿ ಪಡೆಯಲು ಬಂದು ನಿಂತಿದ್ದೇವೆ. 11 ಗಂಟೆಯಾದರೂ ನಮ್ಮ ಸರದಿ ಬಂದಿಲ್ಲ, ನಾವೇನು ಮಾಡೋದು ಸ್ವಾಮಿ, ನಮ್ಮ ಸರದಿ ಬಂದಾಗ ಚೀಟಿ ಪಡೆದು ವೈದ್ಯರ ಬಳಿ ತೆರಳಬೇಕು ಎಂದು ಕೆಲವರು ಹೇಳಿದರೆ ಮತ್ತಷ್ಟು ಜನ ಒಳರೋಗಿಗಳಾಗಿ ದಾಖಲಾಗಲು ನಿಂತಿದ್ದರು. ಇನ್ನಷ್ಟು ಮಂದಿ ಇತರ ಪರೀಕ್ಷೆಗಳನ್ನು ಮಾಡಿಸಲು ಹಣಕಟ್ಟಲು ನಿಂತಿದ್ದದ್ದು ಕಂಡು ಬಂತು.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯಿಂದ ಬಂದಿದ್ದ ಶಿವಣ್ಣ ಎಂಬ ವ್ಯಕ್ತಿ ಮಾತನಾಡಿ, ರಕ್ತ ಪರೀಕ್ಷೆಗೆ ಹಣಕಟ್ಟಲು ಒಂದೂವರೆ ಗಂಟೆಯಿಂದ ನಿಂತಿದ್ದೇವೆ. ಒಂದೊಂದು ಪರೀಕ್ಷೆಗೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಯಾರು ಇದನ್ನೆಲ್ಲಾ ಸರಿಪಡಿಸೋದು, ಒಂದು ಚೀಟಿ ಕೊಡೋಕೆ ಹತ್ತು ಹದಿನೈದು ನಿಮಿಷ ಮಾಡುತ್ತಾರೆ ಎಂದು ಅಳಲು ತೋಡಿಕೊಂಡರು.
ನಂಜನಗೂಡು ತಾಲೂಕಿನ ಹೆಡಿಯಾಲ ಬಳಿಯ ಅಂಜನಾದ್ರಿ ಪುರಗ್ರಾಮದ ಮಾದಮ್ಮ ಎಂಬವವರು ಸಹ ರಕ್ತ ಪರೀಕ್ಷೆಗೆ ಹಣಕಟ್ಟಲು ನಿಂತಿದ್ದು, ನಮ್ಮ ಗೋಳನ್ನು ಯಾರಿಗೆ ಹೇಳೋದು, ಬೆಳಗ್ಗೆ 5 ಗಂಟೆಗೆ ಎದ್ದು ಬಂದಿದ್ದೇವೆ. ಇನ್ನೂ ತಿಂಡಿಯನ್ನು ತಿಂದಿಲ್ಲ. ಇಲ್ಲಿ ಯಾರೂ ಹೇಳೊರು ಇಲ್ಲ ಕೇಳೋರು ಇಲ್ಲ, ನಾವೇನಾದರೂ ಮಾತನಾಡಿದರೆ ಸೆಕ್ಯೂರಿಟಿಗಳು ಬೈಯ್ಯುತ್ತಾರೆ ಎಂದು ಮೌನಿಯಾದರು.
ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುವ ರೋಗಿಗಳಿಗೆ ಸುಲಭವಾಗಿ ಸೌಲಭ್ಯಗಳು ಸಿಕ್ಕಿ ತಮ್ಮ ರೋಗಕ್ಕೆ ಚಿಕಿತ್ಸೆ ದೊರಕಲು ಬೇಕಾದ ಎಲ್ಲ ಅನುಕೂಲಗಳನ್ನು ಮಾಡಬೇಕಿದೆ. ಹೊರರೋಗಿ, ಒಳರೋಗಿ, ಸೇರಿದಂತೆ ಇತರ ಪರೀಕ್ಷೆಗಳಿಗೆ ಹಣಕಟ್ಟಲು ಚೀಟಿ ಪಡೆಯಲು ಮತ್ತಷ್ಟು ನೋಂದಣಿ ಕೌಂಟರ್‌ಗಳನ್ನು ತೆರೆದು ಸಾರ್ವಜನಿಕರಿಗೆ ಸುಲಭವಾಗಿ ದೊರಕುವಂತೆ ಮಾಡಬೇಕು ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು ಆಸ್ಪತ್ರೆಗೆ ಸಂಬಂಧಪಟ್ಟ ಮುಖ್ಯಸ್ಥರು ಮಾಡುತ್ತಾರೆಯೇ ಕಾದು ನೋಡಬೇಕಿದೆ.
ನಮ್ಮ ಆಸ್ಪತ್ರೆಗೆ ಕುಗ್ರಾಮದಿಂದ ಬರುವ ಬಡವರೇ ಹೆಚ್ಚಾಗಿದ್ದು, ಸೋಮವಾರ, ಮಂಗಳವಾರ ಮತ್ತು ಬುಧವಾರ ಜನರ ಸಂಖ್ಯೆ ಹೆಚ್ಚಾಗೆ ಇರುತ್ತದೆ. ಅವರಿಗೆ ಸೂಕ್ತ ಸೌಲಭ್ಯ ಮತ್ತು ಸುಲಭವಾಗಿ ಅವರಿಗೆ ಎಲ್ಲ ಚಿಕಿತ್ಸೆಗಳು ದೊರಕುವಂತೆ ಮಾಡಲು ಹೊಸ ಸಾಫ್ಟ್ ವೇರ್ ಅಳವಡಿಸಿಕೊಳ್ಳಲು ಮುಂದಾಗಿದ್ದೇವೆ. ಸದ್ಯ ಪಿಆರ್‌ಒಗಳನ್ನು ನೇಮಕ ಮಾಡಿಕೊಂಡು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಲು ಮುಂದಾಗಿದ್ದೇವೆ. ಆದಷ್ಟು ಶೀಘ್ರದಲ್ಲಿ ಒತ್ತಡ ಕಡಿಮೆ ಮಾಡಲು ಯಾವೆಲ್ಲಾ ಕ್ರಮಜರುಗಿಸಬೇಕು ಅದನ್ನು ಮಾಡಲಾಗುವುದು.
► ಡಾ.ದಾಕ್ಷಾಯಿಣಿ,
ಡೀನ್, ಮೈಸೂರು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಮೈಸೂರು
ಸಾರ್ವಜನಿಕರ ಅನುಕೂಲಕ್ಕೆಂದೇ ಸಾಕಷ್ಟು ಕೌಂಟರ್‌ಗಳನ್ನು ತೆರೆದಿದ್ದೇವೆ. ಜಯದೇವ ಕಟ್ಟಡ, ಕಲ್ಲು ಕಟ್ಟದಲ್ಲೂ ಚೀಟಿಕೊಡುವುದು ಹಣ ಕಟ್ಟಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಆದರೆ ಜನ ಅಲ್ಲಿಗೆ ಹೋಗದೆ ಒಂದೇ ಕಡೆ ನಿಲ್ಲುತ್ತಾರೆ. ಸೋಮವಾರ, ಮಂಗಳವಾರ ಎಂದರೆ ಆಸ್ಪತ್ರೆಗೆ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತದೆ. ಡಿಜಟಲೀಕರಣ ಮಾಡಿ ಆಧಾರ್ ಕಾರ್ಡ್‌ಗಳಿಗೆ ಮೊಬೈಲ್ ಲಿಂಕ್ ಮಾಡಬೇಕಾಗಿರುವುದರಿಂದ ಸ್ವಲ್ಪ ಸಮಸ್ಯೆಯಾಗಿದೆ. ಆವರ ಅನುಕೂಲಕ್ಕೆ ಮತ್ತಷ್ಟು ಕೌಂಟರ್‌ಗಳನ್ನು ತೆರೆಯಲು ನಾವು ಸಿದ್ಧರಾಗಿದ್ದೇವೆ.
► ರವಿ, ಬಿಲ್ಲಿಂಗ್ ಗುತ್ತಿಗೆದಾರ







