ನಾಟಕ ನೋಡಿದ್ರೆ ಬಿಪಿ, ಶುಗರ್ ಬರಲ್ಲ?

ಇದೇನು ನಾಟಕ ನೋಡಿದ್ರೆ ಬಿಪಿ, ಶುಗರ್ ಬರಲ್ಲ ಅಂತ ಹೇಗೆ ಹೇಳ್ತೀರಾ? ನೀವೇನು ವೈದ್ಯರಾ ಅಂತ ಕೇಳಬೇಡಿ. ರಂಗಭೂಮಿಯ ನಂಟಿರುವ ಯಾರೇ ಆದರೂ ಅವರಿಗೆ ಬಿಪಿ, ಶುಗರ್ ವಯೋಸಹಜವಾಗಿ ಬರಬಹುದೇ ಹೊರತು ಯೌವನದಲ್ಲಿದ್ದಾಗಲೇ ಬರಲ್ಲ ಅಂತ ಖಂಡಿತವಾಗಿ ಹೇಳಬಲ್ಲೆ. ಹೇಗೆಂದರೆ ಐವತ್ತಮೂರು ವಯಸ್ಸಿನ ನನಗೆ ಬಿಪಿ, ಶುಗರ್ ಎರಡೂ ಇಲ್ಲ. ಇದಕ್ಕೆ ರಂಗಭೂಮಿಯ ಸದಾ ನಂಟಿರುವ ಕಾರಣ ಎಂದು ಧೈರ್ಯವಾಗಿ ಹೇಳಬಲ್ಲೆ. ಹೇಗೆ ಹೇಳ್ತೀರಾ ಅಂತ ಗಟ್ಟಿಯಾಗಿ ನೀವು ಕೇಳಬಹುದು.
ಹೇಳುವೆ; ರಂಗಭೂಮಿಯ ಸಹವಾಸ ಇದ್ದವರಿಗೆ ಬರುವ ಸಂಕಷ್ಟಗಳನ್ನು ಎದುರಿಸುವ ಛಾತಿ ಇರುತ್ತದೆ. ಏಕೆಂದರೆ ನಾಟಕ ಆಡುವಾಗ, ಆಡಿಸುವಾಗ ಎದುರಾದ ಸಮಸ್ಯೆಗಳನ್ನು ಎದುರಿಸಿ ಗೆದ್ದ ಉದಾಹರಣೆಗಳು ಅನೇಕ ಇರುತ್ತವೆ. ಹೀಗಿರುವಾಗ ಸಣ್ಣಪುಟ್ಟ ಸಮಸ್ಯೆಗಳು ರಂಗಕರ್ಮಿಗಳಿಗೆ ಎದುರಾದಾಗ ಬಗೆಹರಿಸಿಕೊಂಡು ಮುಂದುವರಿಯುತ್ತಾರೆ. ಹೀಗೆಯೇ ರಂಗಭೂಮಿಯ ನಂಟಿರುವಾಗ, ಸದಾ ನಾಟಕ ನೋಡುವ ನನಗೆ ಸಮಸ್ಯೆಗಳು ಎದುರಾದಾಗ ಧೈರ್ಯಗುಂದದೆ ಮುಖ್ಯವಾಗಿ ಟೆನ್ಷನ್ ಮಾಡಿಕೊಳ್ಳದೆ ಎದುರಿಸುವೆ. ಇದು ಈಗಿನ ಯುವತಲೆಮಾರಿಗೆ ದೊಡ್ಡ ಸವಾಲು. ಬಿಪಿ, ಶುಗರ್ ಬರಲು ಚಟಗಳೇ ಇರಬೇಕೆಂದಿಲ್ಲ. ಟೆನ್ಷನ್ ಇದ್ದರೆ ಸಾಕು; ಹುಡುಕಿಕೊಂಡು ಬರುತ್ತವೆ.
ಯುವತಲೆಮಾರು ಕುರಿತು ಪ್ರಸ್ತಾಪಿಸಿದೆ. ಮೂವತ್ತು ಮೀರದ ಅನೇಕ ಪತ್ರಕರ್ತರಿಗೆ ಈಗೀಗ ಬಿಪಿ ಬಿಡದೆ ಕಾಡುತ್ತಿದೆ. ನಂತರ ಶುಗರ್ ಶುರುವಾಗುತ್ತದೆ. ಇದೆಲ್ಲ ಒತ್ತಡಗಳ ಕಾರಣಗಳ ಜೊತೆಗೆ ಟೆನ್ಷನ್ ಮಾಡಿಕೊಂಡ ಪರಿಣಾಮ. ಹೀಗಿದ್ದಾಗ ನಾಟಕ ನೋಡಿಕೊಂಡಿರಲು ಕಷ್ಟಸಾಧ್ಯ. ಇರುವ ಬಿಡುವಿನ ಕಡಿಮೆ ಅವಧಿಯಲ್ಲೂ ನಾಟಕ ನೋಡಲು ಸಮಯ, ವ್ಯವಧಾನ ಇರಬೇಕಲ್ಲ? ಇನ್ನು ನಾಟಕ ನೋಡಿದವರಿಗೆ ಬಿಪಿ, ಶುಗರ್ ಬರಲ್ಲ ಅಂತ ಏನು ಗ್ಯಾರಂಟಿ ಅಂತ ಕೇಳಿದರೆ ಉತ್ತರ ಹೇಳುವುದು ಕಷ್ಟಸಾಧ್ಯ. ಮುಖ್ಯವಾಗಿ ಮಾನಸಿಕ ನೆಮ್ಮದಿ, ಒತ್ತಡವಿದ್ದರೂ ಅದನ್ನು ಸಹಿಸಿಕೊಳ್ಳುವ ಬಗೆ, ಟೆನ್ಷನ್ ಮಾಡಿಕೊಳ್ಳದಿರುವ ಬಗೆ ಹೇಗೆ? ಇದಕ್ಕೆ ತಕ್ಷಣದ ಉತ್ತರವೆಂದರೆ ಯಾವುದೇ ಬಗೆಯ ಸಂಗೀತ ಕೇಳಿ. ರಂಗಗೀತೆಗಳನ್ನು ಕೇಳಿ. ಬಿಡುವು ಮಾಡಿಕೊಂಡು ನಾಟಕ ನೋಡಿ. ಇದು ಕೇವಲ ಪತ್ರಕರ್ತರಿಗೆ ಮಾತ್ರವಲ್ಲ ಐಟಿ/ಬಿಟಿ ಮೊದಲಾದ ಉದ್ಯೋಗಿಗಳಿಗೂ ಅನ್ವಯಿಸುವ ಮಾತು.
ಸದಾ ಒತ್ತಡದಲ್ಲಿರುವೆ ಎಂದು ಅನೇಕ ಗೆಳೆಯರು ಹೇಳಿದಾಗ ಒತ್ತಡದಲ್ಲೇ ಮಕ್ಕಳಾಗುವುದು ಎಂದಾಗ ಗಹಗಹಿಸಿ ನಗುತ್ತಾರೆ. ಹೀಗೆ ನಗುವುದನ್ನು ಶುರು ಮಾಡಿದರೆ ಟೆನ್ಷನ್ ಕಡಿತಗೊಳ್ಳುತ್ತದೆ. ಇದಕ್ಕೆ ಮದ್ದೆಂದರೆ ನಾಟಕ ನೋಡುವುದು. ಮನಸ್ಸು ಶಾಂತವಾಗುವುದು, ಉಲ್ಲಾಸಗೊಳ್ಳುವುದು. ಹೀಗೆಂದಾಗ ನಮ್ಮೂರಲ್ಲಿ ನಾಟಕಗಳ ಪ್ರದರ್ಶನ ಆಗುವುದಿಲ್ಲ ಎಂದು ಕಡ್ಡಿ ಮುರಿದ ಹಾಗೆ ಹೇಳಬೇಡಿ. ಜಾತ್ರೆಯಲ್ಲಿ ಆಗುವ ನಾಟಕವಲ್ಲದೆ ನೀನಾಸಂ, ಸಾಣೇಹಳ್ಳಿ, ರಂಗಾಯಣ ಜೊತೆಗೆ ಹವ್ಯಾಸಿ ತಂಡಗಳ ಯಾವುದೇ ಬಗೆಯ ನಾಟಕಗಳನ್ನಾದರೂ ನೋಡಿ. ಒಳ್ಳೆಯ ನಾಟಕ ನೋಡಿದರೆ ಒಂದು ಒಳ್ಳೆಯ ಕೃತಿ ಓದಿದ ಅನುಭವ ನನಗೆ ಅನೇಕ ಸಾರಿಯಾಗಿದೆ. ಮರಾಠಿಗರು ಒಬ್ಬರೇ ಇದ್ದರೆ ನಾಟಕ ನೋಡುತ್ತಾರೆ. ಇಬ್ಬರಿದ್ದರೆ ನಾಟಕ ಕುರಿತು ಚರ್ಚಿಸುತ್ತಾರೆ. ಮೂವರಿದ್ದರೆ ನಾಟಕವೇ ಆಡುತ್ತಾರೆ. ಇದು ಮಹಾರಾಷ್ಟ್ರದಲ್ಲಿರುವ ಜೋಕ್. ಆದರೂ ಸತ್ಯ.
ನಾಟಕ ನೋಡಿದರೆ ಬಿಪಿ, ಶುಗರ್ ಬರಲ್ಲ ಎಂದಿರಿ. ಇನ್ನು ಈಗಾಗಲೇ ಬಂದವರಿಗೆ ನಿಮ್ಮ ಉತ್ತರವೇನು ಎಂದು ಕೇಳುವವರಿಗೆ ಹೇಳುವೆ. ಅವುಗಳನ್ನು ನಿಯಂತ್ರಿಸಲು ನುಂಗುವ ಮಾತ್ರೆಗಳನ್ನು ಕಡಿಮೆ ಮಾಡುವ ಗಮ್ಮತ್ತು ನಾಟಕಗಳಿಗಿದೆ. ಇದು ನೋಡುವ ಪ್ರೇಕ್ಷಕರಿಗೂ ಆಡುವ ಕಲಾವಿದರಿಗೂ ಅನ್ವಯಿಸುವ ಮಾತು. ಈ ಕುರಿತು ನಿಮ್ಮ ವೈದ್ಯರೊಂದಿಗೆ ಚರ್ಚಿಸಬೇಡಿ. ಚರ್ಚಿಸಿದರೆ ಅವರು ನಕ್ಕು ಇನ್ನೊಂದೆರಡು ಮಾತ್ರೆಗಳನ್ನು ಹೆಚ್ಚಿಸಬಹುದು.
ಈ ಭೂಮಿಗೆ ಅಂಟಿಕೊಂಡಿರುವ, ಭೂಮಿ ಶಬ್ದವನ್ನು ಹೊತ್ತುಕೊಂಡೇ ಇರುವ ರಂಗಭೂಮಿ ಎಂದರೆ ನೈಜ, ಇದ್ದುದನ್ನು ಇದ್ದಂತೆ ತೋರಿಸುವ ಮಾಧ್ಯಮ. ಆದರೆ ಟಿವಿಯಲ್ಲಿ ಕಲಾವಿದರಿಗಿಂತ ಚಿಕ್ಕವರಾಗಿ ತೋರಿಸಲಾಗುತ್ತದೆ. ಸಿನೆಮಾದಲ್ಲಿ ಕಲಾವಿದರಿಗಿಂತ ದೊಡ್ಡವರಾಗಿ ತೋರಿಸಲಾಗುತ್ತದೆ. ಆದರೆ ಕಲಾವಿದರು ಇದ್ದ ಹಾಗೆ ತೋರೋದು ರಂಗಭೂಮಿಯಲ್ಲಿ ಮಾತ್ರ ಎಂದು ಬಿ.ವಿ.ಕಾರಂತರು ಹೇಳುತ್ತಿದ್ದ ಮಾತು ಎಷ್ಟೊಂದು ಸತ್ಯ? ರಂಗಭೂಮಿಯಲ್ಲಿ ಕಟ್, ಪೇಸ್ಟ್ ಇಲ್ಲ. ಒನ್ ಮೋರ್ ಟೇಕ್ ಇಲ್ಲ. ಕಿರುದಾರಿಗಳಿಲ್ಲ. ರಂಗದ ಮೇಲೆ ಜೀವಂತ ಪ್ರದರ್ಶನ ನಡೆಯುವಾಗ ಕಲಾವಿದರು ಕಸರತ್ತು ಮಾಡುವ ಹಾಗಿಲ್ಲ. ಪ್ರತಿಭೆ ಪ್ರದರ್ಶನ ಆಗಲೇಬೇಕು. * * *
ನಾಟಕಗಳನ್ನು ಯಾಕೆ ನೋಡಬೇಕು, ಅವುಗಳ ಮಹತ್ವ ಕುರಿತು ಅಭಿನಯ ವಿಭೂಷಣ, ನಾಟ್ಯಕಲಾವಿಶಾರದ ಮುಂಡಾಜೆ ರಂಗನಾಥ ಭಟ್ ತಾಮ್ಹನ್‌ಕರ್ (18.8.1886-2.9.1973) ಅವರ ಮಾತುಗಳು ಗಮನಾರ್ಹ ‘‘ಇಂದಿನ ಸಮಾಜ ಸುಧಾರಿಸಬೇಕಾದರೆ ಸಾಮಾಜಿಕ ನಾಟಕಗಳನ್ನು ಅಲ್ಲಲ್ಲಿ ಪ್ರದರ್ಶಿಸಬೇಕು. ಸಾಮಾಜಿಕ ನಾಟಕಗಳಿಂದ ಸಮಾಜ ಕಲ್ಯಾಣವನ್ನು ಸುಲಭವಾಗಿ ಸಾಧಿಸಬಹುದು ಎಂಬ ಸಿದ್ಧಾಂತಕ್ಕೆ ಕಟ್ಟುಬಿದ್ದು ನಾನು ವಿಶೇಷವಾಗಿ ಸಾಮಾಜಿಕ ನಾಟಕಗಳ ಕಡೆಗೇ ಮನಸ್ಸು ಕೊಡಲಾರಂಭಿಸಿದೆ’’
‘‘ಸಂಘರ್ಷಮಯ ಜೀವನದಲ್ಲಿ ಕಲಾಶಕ್ತಿಯು ನವಚೇತನವನ್ನು ತುಂಬಲಿ. ಕಲೆ ಜೀವನ ನೆಲೆಯಾಗಲಿ. ಕಲಾರಾಧಕರು ಭಾವರಸ ಪುಷ್ಪಗಳಿಂದ ಆತ್ಮಶುದ್ಧಿಯಿಂದ, ಶ್ರದ್ಧಾಭಕ್ತಿಗಳಿಂದ ಕಲಾದೇವಿಯನ್ನು ಆರಾಧಿಸುತ್ತಿರಲಿ. ಕಲಾರಾಧನೆಯಿಂದ ಪ್ರಸನ್ನಳಾದ ಕಲಾದೇವಿಯು ಸನ್ಮಂಗಳನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ’’ ಎನ್ನುವ ಅವರ ಮಾತು ನಿತ್ಯಸತ್ಯ.
ಹೀಗೆ ರಂಗ ಪ್ರಸಂಗ ಎಂಬ ಅಂಕಣದ ಮೂಲಕ ವಾರಕ್ಕೊಮ್ಮೆ ನಿಮ್ಮೆಂದಿಗೆ ಮಾತಾಡುವೆ. ರಂಗಪ್ರೀತಿ ಇರಲಿ.
ಮುಖ್ಯವಾಗಿ ಮಾನಸಿಕ ನೆಮ್ಮದಿ, ಒತ್ತಡವಿದ್ದರೂ ಅದನ್ನು ಸಹಿಸಿಕೊಳ್ಳುವ ಬಗೆ, ಟೆನ್ಷನ್ ಮಾಡಿಕೊಳ್ಳದಿರುವ ಬಗೆ ಹೇಗೆ? ಇದಕ್ಕೆ ತಕ್ಷಣದ ಉತ್ತರವೆಂದರೆ ಯಾವುದೇ ಬಗೆಯ ಸಂಗೀತ ಕೇಳಿ. ರಂಗಗೀತೆಗಳನ್ನು ಕೇಳಿ. ಬಿಡುವು ಮಾಡಿಕೊಂಡು ನಾಟಕ ನೋಡಿ. ಇದು ಕೇವಲ ಪತ್ರಕರ್ತರಿಗೆ ಮಾತ್ರವಲ್ಲ ಐಟಿ/ಬಿಟಿ ಮೊದಲಾದ ಉದ್ಯೋಗಿಗಳಿಗೂ ಅನ್ವಯಿಸುವ ಮಾತು.
ಹಿರಿಯ ಪತ್ರಕರ್ತ, ರಂಗ ನಿರ್ದೇಶಕ, ಲೇಖಕ ಗಣೇಶ ಅಮೀನಗಡ ಇವರು ರಂಗಭೂಮಿಯ ಹಿನ್ನೆಲೆ-ಮುನ್ನೆಲೆಗಳ ಬಗ್ಗೆ ಇಂದಿನಿಂದ ಪ್ರತೀ ಶುಕ್ರವಾರ ಬರೆಯಲಿದ್ದಾರೆ







