Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸುನೀಲ್ ಕುಮಾರ್ ಸೋಲಿಗೆ ಕಾರಣವಾಗಲಿದೆಯೇ ...

ಸುನೀಲ್ ಕುಮಾರ್ ಸೋಲಿಗೆ ಕಾರಣವಾಗಲಿದೆಯೇ ಮುತಾಲಿಕ್ ಸವಾಲು?

ಮಹಮ್ಮದ್ ಶರೀಫ್, ಕಾರ್ಕಳಮಹಮ್ಮದ್ ಶರೀಫ್, ಕಾರ್ಕಳ23 Dec 2022 11:05 AM IST
share
ಸುನೀಲ್ ಕುಮಾರ್ ಸೋಲಿಗೆ ಕಾರಣವಾಗಲಿದೆಯೇ  ಮುತಾಲಿಕ್ ಸವಾಲು?

ಬಿಜೆಪಿ ಬಲ ಸಾಧಿಸಿರುವ ಕಾರ್ಕಳದಲ್ಲಿ ಹೇಗಿರಲಿದೆ ಈ ಸಲದ ಅಖಾಡ? ಮೂರು ಬಾರಿ ಗೆದ್ದಿರುವ ಸುನೀಲ್ ಕುಮಾರ್ ಸೋಲಿನ ಭೀತಿಯಲ್ಲಿದ್ದಾರೆಯೆ? ಶಿಷ್ಯನೆದುರು ಸಿಟ್ಟಾಗಿರುವ ಶ್ರೀರಾಮಸೇನೆಯ ಮುತಾಲಿಕ್ ಆಟವೇನು? ಒಂದು ಕಾಲದ ಭದ್ರಕೋಟೆಯ ವಶಕ್ಕೆ ತಂತ್ರ ಹೂಡುವುದೆ ಕಾಂಗ್ರೆಸ್?

ವಿ. ಸುನೀಲ್ ಕುಮಾರ್. ವಯಸ್ಸು 47. ಕಾರ್ಕಳ ಕ್ಷೇತ್ರವನ್ನು ಪ್ರತಿನಿಧಿಸುವ ಅವರು ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ. ಆರೆಸ್ಸೆಸ್‌ನ ವಿದ್ಯಾರ್ಥಿ ವಿಭಾಗದ ನಾಯಕನಾಗಿ ರಾಜಕೀಯ ಜೀವನ ಆರಂಭ. ಬಜರಂಗದಳದೊಟ್ಟಿಗೆ ಗುರುತಿಸಿಕೊಂಡು ರಾಜಕೀಯದಲ್ಲಿ ಮುನ್ನೆಲೆಗೆ ಬಂದವರು. ಮೊದಲ ಗೆಲುವಿನ ಹಿಂದೆ ಕೂಡ ಇದೇ ಪ್ರಮುಖ ಪಾತ್ರ ವಹಿಸಿತ್ತು. 2004ರಲ್ಲಿ ಬಿಜೆಪಿ ಸೇರ್ಪಡೆ. ಅದೇ ವರ್ಷವೇ ಕಾರ್ಕಳದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ. ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧಿಸಿ ಸೋಲುಂಡವರು. ಮೂರು ಬಾರಿ ಕಾರ್ಕಳ ಕ್ಷೇತ್ರದ ಶಾಸಕರಾಗಿರುವ ಅವರೆದುರಿನ ಈ ಸಲದ ಸವಾಲುಗಳೇನು ಎಂಬ ಕುತೂಹಲವಿದೆ.

ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕ್ಷೇತ್ರ ಕಾರ್ಕಳ. 1972ರ ತರುವಾಯ ಎಂ.ವೀರಪ್ಪಮೊಯ್ಲಿ 6 ಬಾರಿ ಶಾಸಕರಾಗಿ ಆಯ್ಕೆಯಾದದ್ದು ಇಲ್ಲಿಂದಲೇ. 1992ರಲ್ಲಿ ಅವರು ಮುಖ್ಯಮಂತ್ರಿಯೂ ಆಗುವುದರೊಂದಿಗೆ, ಕರಾವಳಿ ಭಾಗದಿಂದ ಮೊದಲ ಮುಖ್ಯಮಂತ್ರಿಯನ್ನು ಕೊಟ್ಟ ಕ್ಷೇತ್ರವೆಂಬ ಹೆಗ್ಗಳಿಕೆ ಕಾರ್ಕಳದ್ದಾಯಿತು. ಆನಂತರ 1999 ಮತ್ತು 2008ರಲ್ಲಿ ಎರಡು ಬಾರಿ ಕೂಡ ಕಾಂಗ್ರೆಸ್ ಇಲ್ಲಿ ಗೆಲುವು ಕಂಡಿತ್ತು. ಆಗ ಅಭ್ಯರ್ಥಿಯಾಗಿ ಕಾಂಗ್ರೆಸ್‌ನಿಂದ ಗೆದ್ದಿದ್ದವರು ಗೋಪಾಲ ಭಂಡಾರಿ. ಬಿಜೆಪಿ ಈ ಕ್ಷೇತ್ರದಲ್ಲಿ ಮೊದಲ ಸಲ ತನ್ನ ಖಾತೆ ತೆರೆದದ್ದು 2004ರಲ್ಲಿ. ಆಗ ಗೋಪಾಲ ಭಂಡಾರಿ ವಿರುದ್ಧ ಗೆದ್ದ ಸುನೀಲ್ ಕುಮಾರ್ ನಂತರದ ಚುನಾವಣೆಯಲ್ಲಿ ಅವರೆದುರೇ ಸೋತರು. ಆದರೆ 2013 ಮತ್ತು 2018ರಲ್ಲಿ ಮತ್ತೆ ಗೆಲುವು ಅವರದಾಯಿತು. ಅಲ್ಲಿಂದ ಕಾರ್ಕಳ ಸಂಪೂರ್ಣವಾಗಿ ಬಿಜೆಪಿಯ ವಶದಲ್ಲಿದೆಯೆಂಬಷ್ಟು ಒಟ್ಟಾರೆ ಸನ್ನಿವೇಶವೇ ಬದಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಕಾರ್ಕಳವೂ ಒಂದು.

ಹಾಗೆ ನೋಡಿದರೆ 2004ರಲ್ಲಿ ಸುನೀಲ್ ಕುಮಾರ್ ಗೆಲುವಿಗೆ ಕಾರಣವಾದದ್ದು ಅವರು ಹಿಂದುತ್ವವಾದಿಗಳ ಜೊತೆಗೆ, ಬಜರಂಗದಳದೊಟ್ಟಿಗೆ ಹೆಚ್ಚು ಗುರುತಿಸಿಕೊಂಡಿದ್ದರಿಂದ. ಇಲ್ಲಿನ ಜಿಎಸ್‌ಬಿ ಸಮುದಾಯ ತನ್ನ ಪೂರ್ಣ ಬೆಂಬಲವನ್ನು ಸುನೀಲ್ ಕುಮಾರ್ ಅವರಿಗೆ ನೀಡಿತ್ತು. ಆ ಗೆಲುವಿನೊಂದಿಗೆ, 1967ರಲ್ಲಿ ಭಾರತೀಯ ಜನಸಂಘವು ಗೆದ್ದಿದ್ದ ಈ ಕ್ಷೇತ್ರದಲ್ಲಿ ಮತ್ತೆ ಬಿಜೆಪಿಗೆ ನೆಲೆ ಸಿಕ್ಕಂತಾಯಿತು. 2008ರಲ್ಲಿ ಮತ್ತೆ ಕಾಂಗ್ರೆಸ್ ವಶವಾದ ಕಾರ್ಕಳದಲ್ಲಿ ನಂತರ 2013 ಮತ್ತು 2018ರ ಎರಡೂ ಚುನಾವಣೆಗಳನ್ನು ಗೆದ್ದಿದ್ದು ಬಿಜೆಪಿ. ಕಳೆದ ಚುನಾವಣೆಯಲ್ಲಿ ಸುನೀಲ್ ಕುಮಾರ್ ಗೆಲುವಿನ ಅಂತರ 42 ಸಾವಿರಕ್ಕೂ ಹೆಚ್ಚು ಮತಗಳು. ಇಷ್ಟು ದೊಡ್ಡ ಅಂತರದಿಂದ ಅವರು ಗೆಲ್ಲುವುದಕ್ಕೆ ಕಾರಣವಾದದ್ದು ಕಾಂಗ್ರೆಸ್‌ನಲ್ಲಿನ ಒಡಕು. ಕಾಂಗ್ರೆಸ್ ಮೇಲೆ, ಅದರಲ್ಲೂ ಮೊಯ್ಲಿಯವರ ಮೇಲೆ ಸಿಟ್ಟಾದ ಕಾರ್ಯಕರ್ತರು ಕಾಂಗ್ರೆಸ್‌ಗೆ ವಿರುದ್ಧವಾಗಿ ಮತಹಾಕಿದ ಪರಿಣಾಮ, ದೊಡ್ಡ ಅಂತರದ ಗೆಲುವು ಸುನೀಲ್ ಕುಮಾರ್ ಅವರದ್ದಾಯಿತು ಎಂದು ಹೇಳಲಾಗುತ್ತದೆ.

ಆದರೆ ಈ ಬಾರಿ ಸುನೀಲ್ ಕುಮಾರ್ ಅವರ ವಿಚಾರದಲ್ಲಿ ಪಕ್ಷದೊಳಗೇ ಅಸಮಾಧಾನ ಇದೆಯೆಂಬ ಮಾತುಗಳು ಕೇಳಿಬರುತ್ತಿವೆ. ಭ್ರಷ್ಟಾಚಾರ ಆರೋಪವೂ ಇರುವ ಹಿನ್ನೆಲೆಯಲ್ಲಿ ಈ ಸಲ ಅವರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿತ್ತಾದರೂ, ಅವೆಲ್ಲದರ ಹೊರತಾಗಿ ಅವರೇ ಇಲ್ಲಿನ ಬಿಜೆಪಿ ಅಭ್ಯರ್ಥಿ ಎಂಬುದು ಖಚಿತವಾಗಿದೆ. ಆದರೆ ಸುನೀಲ್ ಕುಮಾರ್‌ಗೆ ಎದುರಾಗಿರುವ ಸವಾಲೆಂದರೆ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಅವರದು. ಕಾರ್ಕಳ ಕ್ಷೇತ್ರದಿಂದ ತಾನು ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿರುವ ಮುತಾಲಿಕ್, ಗುರುವಿಗಾಗಿ ಕ್ಷೇತ್ರ ಬಿಟ್ಟುಕೊಡುವಂತೆ ಸುನೀಲ್ ಕುಮಾರ್‌ಗೆ ಆಗ್ರಹಿಸಿದ್ದಾರೆ. ‘‘ಹಿಂದುತ್ವಕ್ಕಾಗಿ ಡೋಂಗಿ ಹಿಂದುತ್ವವಾದಿಗಳ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ’’ ಎಂದು ಹೇಳುವ ಮೂಲಕ, ಆರೆಸ್ಸೆಸ್ ನಿಷ್ಠೆ ಇದ್ದರೆ ಕ್ಷೇತ್ರ ತ್ಯಾಗ ಮಾಡುವಂತೆ ಸವಾಲೆಸೆದಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಕಾರ್ಕಳ ಕ್ಷೇತ್ರದಲ್ಲಿ ಸ್ಪರ್ಧಿಸಲು ಅಡ್ಡಿಪಡಿಸಿದರೆ ಎಲ್ಲ ಕ್ಷೇತ್ರಗಳಲ್ಲಿ ಹಿಂದೂ ಒಕ್ಕೂಟ ಬಿಜೆಪಿ ವಿರುದ್ಧ ಕೆಲಸ ಮಾಡಲಿದೆ ಎಂದೂ ಅವರು ಎಚ್ಚರಿಸಿದ್ದಾರೆ. ಸುನೀಲ್ ಕುಮಾರ್ ವಿರುದ್ಧ ಅವರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತ ಮಾತನಾಡುತ್ತಿರುವುದು, ಎಲ್ಲವೂ ಸರಿಯಿಲ್ಲ ಎಂಬುದನ್ನು ಸೂಚಿಸುತ್ತಿದೆ. ಕಾರ್ಕಳದಲ್ಲಿ ತಾನು ಸ್ಪರ್ಧಿಸುವ ವಿಚಾರ ಹೇಳುತ್ತಿದ್ದಂತೆ ಹಿಂದೂ ಕಾರ್ಯಕರ್ತರನ್ನು ಬೆದರಿಸುವ, ಸುಳ್ಳು ಪ್ರಕರಣ ದಾಖಲಿಸುವ ಕೆಲಸ ನಡೆಯುತ್ತಿದೆ. ಮುಂದಿನ ಚುನಾವಣೆಯಲ್ಲಿ ಆಕ್ರೋಶಿತ ಕಾರ್ಯಕರ್ತರೇ ಬಿಜೆಪಿಯನ್ನು ಸೋಲಿಸಲಿದ್ದಾರೆ ಎಂದು ಮುತಾಲಿಕ್ ಹೇಳುತ್ತಿರುವುದು ಬಿಜೆಪಿಯೊಳಗೂ ತಲ್ಲಣ ಮೂಡಿಸಿರುವಂತಿದೆ. ಇವೆಲ್ಲದರ ಮರ್ಮವೇನು ಎಂಬುದಕ್ಕಿಂತ ಹೆಚ್ಚಾಗಿ, ಸದ್ಯಕ್ಕಂತೂ ಬಿಜೆಪಿಯೆದುರು ಸಂಘಪರಿವಾರದ್ದೇ ಒಂದು ಪಡೆ ಎದುರಾಗಿ ನಿಲ್ಲಲಿದೆಯೇ ಎಂಬ ಪ್ರಶ್ನೆಯಂತೂ ಎದ್ದಿದೆ.

ಯಾವ ತಂತ್ರವನ್ನು ಮಾಡಿ ಸುನೀಲ್ ಕುಮಾರ್ ರಾಜಕೀಯವಾಗಿ ಗೆದ್ದರೋ ಅದೇ ಪ್ರಖರ ಹಿಂದುತ್ವವನ್ನು ಮುಂದಿಟ್ಟುಕೊಂಡು ಮುತಾಲಿಕ್ ಕಾರ್ಕಳ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರಿಗೆ ಹಿಂದೂ ಕಾರ್ಯಕರ್ತರ ದೊಡ್ಡ ಬೆಂಬಲವೂ ಇದೆ. ಹಿಂದೂ ಕಾರ್ಯಕರ್ತರ ಮೇಲೆ ಸುನೀಲ್ ಕುಮಾರ್ ಸ್ವಾರ್ಥಕ್ಕಾಗಿ ಕೇಸ್ ಹಾಕಿಸಿದ್ದಾರೆ ಎಂಬ ಅಸಮಾಧಾನವೂ ಇಲ್ಲಿ ದೊಡ್ಡ ಮಟ್ಟದಲ್ಲಿಯೇ ವ್ಯಕ್ತವಾಗುತ್ತಿರುವುದರಿಂದ, ಒಂದು ಕಾಲದಲ್ಲಿ ಅವರೊಂದಿಗೆ ನಿಂತ ಕಾರ್ಯಕರ್ತರೆಲ್ಲ ಈಗ ಮುತಾಲಿಕ್ ಕಡೆ ಸೇರಿದ್ದಾರೆ. ಅಲ್ಲದೆ ಸುನೀಲ್ ಕುಮಾರ್ ಬೆಂಬಲಕ್ಕಿದ್ದ ಜಿಎಸ್‌ಬಿ ಸಮುದಾಯ ಕೂಡ ಪೂರ್ತಿಯಾಗಿ ಮುತಾಲಿಕ್ ಬೆಂಬಲಕ್ಕೆ ನಿಂತಿದ್ದು, ಆರ್ಥಿಕ ಬೆಂಬಲವನ್ನೂ ನೀಡುತ್ತಿದೆ ಎನ್ನಲಾಗುತ್ತಿದೆ. ಅಲ್ಲದೆ ಮುತಾಲಿಕ್‌ಗೆ ಬಿಎಸ್‌ವೈ ಹಾಗೂ ಅವರ ಪುತ್ರ ರಾಘವೇಂದ್ರ ಬೆಂಬಲವೂ ಇದೆಯೆಂಬ ಮಾತುಗಳು ಕೇಳಿಬರುತ್ತಿವೆ. ಒಮ್ಮೆ ಬಿಎಸ್‌ವೈ ವಿರೋಧಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಸುನೀಲ್ ಕುಮಾರ್ ಮೂಲತಃ ಅನಂತ ಕುಮಾರ್ ಬಣದವರಾಗಿದ್ದು, ಈಗ ಅವರ ವಿರುದ್ಧ ಬಿಎಸ್‌ವೈ ಮುತಾಲಿಕ್ ಉಮೇದುವಾರಿಕೆಯನ್ನು ಬೆಂಬಲಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಯಾರು ತನ್ನನ್ನು ರಾಜಕೀಯದಲ್ಲಿ ಬೆಳೆಸಿದ್ದರೋ ಅದೇ ಜಿಎಸ್‌ಬಿ ಸಮುದಾಯ ಮತ್ತು ಹಿಂದೂ ಪರ ಕಾರ್ಯಕರ್ತರನ್ನು ಎದುರುಹಾಕಿಕೊಂಡಿರುವುದು ಹಾಗೂ ಅವರು ಯಾವ ಕಾರ್ಯಕರ್ತರನ್ನೂ ಹಿರಿಯರನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎನ್ನುವುದು ಅವರ ಮೇಲೆ ಹೆಚ್ಚಿನವರು ಅಸಮಾಧಾನಗೊಳ್ಳಲು ಕಾರಣ ಎನ್ನಲಾಗುತ್ತಿದೆ. ಇವೆಲ್ಲವೂ ಸುನೀಲ್ ಕುಮಾರ್ ಅವರಿಗೆ ಈ ಬಾರಿ ಹಿನ್ನಡೆ ಉಂಟುಮಾಡಲಿದ್ದು, ಸ್ವತಃ ಸುನೀಲ್ ಕುಮಾರ್ ಸೋಲಿನ ಭೀತಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿಗೆ ಮುತಾಲಿಕ್ ಸವಾಲು ಹಾಕಿರುವುದು, ಇಬ್ಬರ ನಡುವಿನ ಈ ಜಗಳ ಮತ್ತೆ ಗೆಲುವಿಗಾಗಿ ಕಾದಿರುವ ಕಾಂಗ್ರೆಸ್‌ಗೆ ವರವಾಗಬಹುದೆ? ಆದರೆ ಕಾಂಗ್ರೆಸ್ ಪಾಲಿನ ದೊಡ್ಡ ಸಮಸ್ಯೆಯೇ ಮಾಜಿ ಸಿಎಂ ವೀರಪ್ಪಮೊಯ್ಲಿ ಎಂಬ ಅರೋಪಗಳೂ ಇವೆ. ಮೊಯ್ಲಿ ಯಾರ ಹೆಸರು ಸೂಚಿಸುತ್ತಾರೆಯೋ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಲಾಗುತ್ತದೆ ಮೊದಲಾದ ಆಕ್ಷೇಪಗಳ ಹಿನ್ನೆಲೆಯಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದ್ದ ಉದಯ ಕುಮಾರ್ ಶೆಟ್ಟಿಯಂತಹ ಒಳ್ಳೆಯ ಸಂಘಟಕರು ದೂರವಾಗಿದ್ದಾರೆ ಎಂಬ ಮಾತುಗಳಿವೆ. ಶುದ್ಧಹಸ್ತರಾಗಿದ್ದ ಮತ್ತು ಒಳ್ಳೆಯ ರಾಜಕಾರಣಿಯಾಗಿದ್ದ ಗೋಪಾಲ ಭಂಡಾರಿಯವರು ಇಲ್ಲಿನ ಕಾಂಗ್ರೆಸ್ ಪಾಲಿನ ಭರವಸೆಯಾಗಿದ್ದರು. ಆದರೆ ಭಂಡಾರಿಯವರು ಮೊಯ್ಲಿಯವರು ಹಾಕಿದ ಗೆರೆ ದಾಟುವುದಿಲ್ಲ ಎಂಬುದೊಂದೇ ಅವರ ಮೇಲೆ ಕಾರ್ಯಕರ್ತರ ಅಸಮಾಧಾನವಾಗಿತ್ತು. ಆದರೆ ಅವರ ನಿಧನದಿಂದಾಗಿ ಈ ಬಾರಿ ಯಾರು ಅಭ್ಯರ್ಥಿಯಾಗುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಂಪೂರ್ಣ ಸಜ್ಜಾಗಿದ್ದ ಉದಯ ಕುಮಾರ್ ಶೆಟ್ಟಿ ಕೊನೆ ಗಳಿಗೆಯಲ್ಲಿ ಟಿಕೆಟ್ ತಪ್ಪಿದ್ದರಿಂದ ಮುನಿಸಿಕೊಂಡಿದ್ದು ಕಾಂಗ್ರೆಸ್‌ನ ದೊಡ್ಡ ಸೋಲಿಗೆ ಕಾರಣವಾಯಿತು. ಮೊಯ್ಲಿ ಪುತ್ರನಿಗೆ ಟಿಕೆಟ್ ಕೊಡಿಸುವ ಪ್ರಯತ್ನದಲ್ಲಿ ವಿಫಲವಾದಾಗ ಉದಯ ಕುಮಾರ್ ಶೆಟ್ಟಿ ಅವರಿಗೂ ಟಿಕೆಟ್ ತಪ್ಪಿಸಿ ಭಂಡಾರಿ ಅವರನ್ನೇ ಕಣಕ್ಕಿಳಿಸಿದ್ದು ಪಕ್ಷಕ್ಕೆ ಹಿನ್ನಡೆಯಾಗಿತ್ತು.

ಜನಮನ್ನಣೆ ಹೊಂದಿದ್ದ ಭಂಡಾರಿ ನಿಧನದ ನಂತರ ಈಗ ನೀರೆ ಕೃಷ್ಣ ಶೆಟ್ಟಿ, ಡಿ.ಆರ್.ರಾಜು, ಮಂಜುನಾಥ ಪೂಜಾರಿ ಹಾಗೂ ಉದ್ಯಮಿ ಸುರೇಂದ್ರ ಶೆಟ್ಟಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ನೀರೆ ಕೃಷ್ಣ ಶೆಟ್ಟಿ ಬಂಟ ಸಮುದಾಯದವರಾಗಿದ್ದು ಮೊಯ್ಲಿಯವರಿಗೂ ಹತ್ತಿರ ಎನ್ನಲಾಗುತ್ತದೆ. ಡಿ.ಆರ್.ರಾಜು, ಬಂಗಾರಪ್ಪರಅಪ್ತರಾಗಿದ್ದವರು. ಮಂಜುನಾಥ ಪೂಜಾರಿ ತಾ.ಪಂ., ಜಿ.ಪಂ.ಸದಸ್ಯರಾಗಿದ್ದವರು ಅನುಭವಿ ರಾಜಕಾರಣಿಯೂ ಹೌದು. ಇನ್ನು, ಮೊಯ್ಲಿ ಅವರಿಗೂ ಆಪ್ತರಾಗಿರುವ ಉದ್ಯಮಿ ಸುರೇಂದ್ರ ಶೆಟ್ಟಿ ಕೂಡ ಬಂಟ ಸಮುದಾಯದವರಾಗಿದ್ದು, ಡಿ.ಕೆ. ಶಿವಕುಮಾರ್ ಅವರೊಂದಿಗೂ ವ್ಯಾವಹಾರಿಕ ಸಂಬಂಧ ಹೊಂದಿರುವವರು ಎಂಬ ಮಾತುಗಳಿವೆ.

ಕಾಂಗ್ರೆಸ್ ನಾಯಕತ್ವದ ಬಗ್ಗೆ ಕಾರ್ಯಕರ್ತರಲ್ಲಿ ಮತ್ತು ಜನರಲ್ಲಿ ಏನೇ ಅಸಮಾಧಾನವಿದ್ದರೂ ಪಕ್ಷದ್ದೇ ಆದ ಕನಿಷ್ಠ 50 ಸಾವಿರಕ್ಕೂ ಹೆಚ್ಚು ಮತಗಳು ಅನಾಯಾಸವಾಗಿಯೇ ಪಕ್ಷಕ್ಕೆ ಬರುತ್ತವೆ. ಆದರೆ ಮತ್ತಷ್ಟು ವೋಟುಗಳು ಕಾಂಗ್ರೆಸ್ ಮೇಲಿನ ಅಸಮಾಧಾನದ ಕಾರಣಕ್ಕಾಗಿಯೇ ಬೇರೆಯವರ ಪಾಲಾಗುತ್ತಿದೆ ಎಂಬುದು ಸ್ಥಳೀಯರ ಮಾತು. ಪರಿಸ್ಥಿತಿ ಹೀಗಿರುವಾಗ, ಕಾಂಗ್ರೆಸ್ ಸೂಕ್ತ ಸಮಯದೊಳಗೆ ಸೂಕ್ತ ಅಭ್ಯರ್ಥಿಯನ್ನು ಅಂತಿಮಗೊಳಿಸಿ, ತನ್ನ ಬೆಂಬಲಕ್ಕಿರುವ ಸಮುದಾಯಗಳ ಬೆಂಬಲವನ್ನು ಪೂರ್ತಿ ಪಡೆಯುವ ನಿಟ್ಟಿನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರೆ ಗೆಲುವು ನಿಶ್ಚಿತ. ಯಾಕೆಂದರೆ ಇವತ್ತಿಗೂ ಕಾರ್ಕಳವು ಬಿಜೆಪಿ, ಹಿಂದುತ್ವ ಇವೆಲ್ಲದರ ಹೊರತಾಗಿಯೂ ಕಾಂಗ್ರೆಸ್ ಪಕ್ಷದ ಪರವಾಗಿಯೇ ಇದೆ. ಆದರೆ ಕಾಂಗ್ರೆಸ್ ಪಕ್ಷ ತನ್ನ ಸೋಲನ್ನು ತಾನೇ ತಂದುಕೊಳ್ಳುತ್ತಿದೆ. ಅದು ಸರಿಯಾಗಿ ತನ್ನ ಗೆಲುವಿಗಾಗಿ ಪ್ರಯತ್ನಿಸಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ, ಬಿಜೆಪಿಯೊಳಗೆ ತಳಮಳಕ್ಕೆ ಕಾರಣವಾಗಿರುವ ಮುತಾಲಿಕ್ ನಡೆಯೇನು ಎಂಬುದು ಮತ್ತೊಂದು ಕುತೂಹಲ. ಇದೆಲ್ಲವೂ ಸೇರಿ ಕಾರ್ಕಳದ ಕಾದಾಟ ರಂಗೇರುವ ಹಾಗೆ ಕಾಣಿಸುತ್ತಿದೆ.

share
ಮಹಮ್ಮದ್ ಶರೀಫ್, ಕಾರ್ಕಳ
ಮಹಮ್ಮದ್ ಶರೀಫ್, ಕಾರ್ಕಳ
Next Story
X