ದೇಶದ ಪರಿಸ್ಥಿತಿ ಸರಿಯಿಲ್ಲದಿರುವುದರಿಂದ ಮಕ್ಕಳಿಗೆ ವಿದೇಶದಲ್ಲಿ ನೆಲೆಸುವಂತೆ ಸೂಚಿಸಿದ್ದೇನೆ: ಆರ್‌ಜೆಡಿ ನಾಯಕ
'ಪಾಕಿಸ್ತಾನಕ್ಕೆ ಹೋಗಿʼ ಎಂದ ಬಿಜೆಪಿ

ಹೊಸದಿಲ್ಲಿ: ದೇಶದಲ್ಲಿ ಮುಸ್ಲಿಮರ ವಿರುದ್ಧ ತಾರತಮ್ಯವೆಸಗಲಾಗುತ್ತಿದೆ ಎಂದು ಆರೋಪಿಸಿರುವ ಆರ್‌ಜೆಡಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಬಾರಿ ಸಿದ್ದಿಕಿ, ನಾನು ನನ್ನ ಮಕ್ಕಳಿಗೆ ವಿದೇಶಗಳಲ್ಲಿ ಉದ್ಯೋಗ ಹುಡುಕಿಕೊಳ್ಳಿ ಮತ್ತು ಸಾಧ್ಯವಾದರೆ ಅಲ್ಲಿಯೇ ನೆಲೆಸಿರಿ ಎಂದು ಸಲಹೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಬಿಹಾರ ಆರ್‌ಜೆಡಿಯ ಹಿರಿಯ ನಾಯಕರಾಗಿರುವ ಅಬ್ದುಲ್ ಬಾರಿ ಸಿದ್ದಿಕಿ ಕಳೆದ ವಾರ ನಡೆದಿದ್ದ ಸಮಾರಂಭವೊಂದರಲ್ಲಿ ಭಾಗವಹಿಸಿ, "ದೇಶದ ವಾತಾವರಣ ಹೇಗಿದೆ ಎಂಬುದನ್ನು ತಿಳಿಸಲು ನನ್ನದೇ ವೈಯಕ್ತಿಕ ಉದಾಹರಣೆ ನೀಡುತ್ತೇನೆ. ನನಗೆ ಓರ್ವ ಪುತ್ರನಿದ್ದು, ಆತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾನೆ ಹಾಗೂ ಮತ್ತೊಬ್ಬ ಪುತ್ರಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಓದುತ್ತಿದ್ದಾಳೆ. ನಾನು ಅವರಿಗೆ ವಿದೇಶಗಳಲ್ಲೇ ಉದ್ಯೋಗ ಹುಡುಕಿಕೊಳ್ಳಿ ಮತ್ತು ಸಾಧ್ಯವಾದರೆ ಅಲ್ಲಿನ ನಾಗರಿಕತ್ವವನ್ನು ಪಡೆಯಿರಿ ಎಂದು ಸೂಚಿಸಿದ್ದೇನೆ" ಎಂದು ಹೇಳಿದ್ದರು.
"ನನ್ನ ಮಾತನ್ನು ಅವರು ಮೊದಲು ನಂಬಲಿಲ್ಲ ಮತ್ತು ನೀವಿನ್ನೂ ಅಲ್ಲೇ ಬದುಕುತ್ತಿದ್ದೀರಾ ಎಂಬುದರತ್ತ ಬೆಟ್ಟು ಮಾಡಿದರು. ಆದರೆ, ನಿಮಗೆ ಇಲ್ಲಿ ಹೊಂದಿಕೊಂಡು ಬದುಕಲಾಗುವುದಿಲ್ಲ ಎಂದು ನಾನು ಅವರಿಗೆ ಹೇಳಿದೆ" ಎಂದು ಬಿಹಾರ ರಾಜ್ಯದ ಮಾಜಿ ಸಚಿವರೂ ಆಗಿರುವ ಸಿದ್ದಿಕಿ ತಿಳಿಸಿದ್ದರು.
ಸಿದ್ದಿಕಿ ಅವರ ಹೇಳಿಕೆಯ ಬಗ್ಗೆ ಕಿಡಿ ಕಾರಿರುವ ಬಿಜೆಪಿ, ಅವರನ್ನು ದೇಶದ್ರೋಹಿ ಎಂದು ಟೀಕಿಸಿದೆಯಲ್ಲದೆ, ನೀವು ಪಾಕಿಸ್ತಾನಕ್ಕೆ ಹೋಗಿ ಎಂದು ಹರಿಹಾಯ್ದಿದೆ. ಆದರೆ, ಆರ್‌ಜೆಡಿ ಪಕ್ಷದ ಹಿರಿಯ ನಾಯಕರಾದ ಸಿದ್ದಿಕಿ ಅವರ ಹೇಳಿಕೆಯನ್ನು ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ ಹಾಗೂ ಮೈತ್ರಿ ಪಕ್ಷಗಳು ಸಮರ್ಥಿಸಿಕೊಂಡಿವೆ ಎಂದು ndtv.com ವರದಿ ಮಾಡಿದೆ.







