5, 8ನೇ ತರಗತಿಗೆ ನಡೆಸಲುದ್ದೇಶಿಸಿರುವ ಅವೈಜ್ಞಾನಿಕ ಪರೀಕ್ಷೆ ಕೈಬಿಡಲು ಒತ್ತಾಯ
ಶಾಲಾ ಶಿಕ್ಷಣ ಕ್ಷೇತ್ರದ ಜಲ್ವಂತ ಸಮಸ್ಯೆಗಳ ಕುರಿತು ಚರ್ಚಿಸಲು ನಡೆದ ಸಭೆಯಲ್ಲಿ ಹಕ್ಕೊತ್ತಾಯ

ಬೆಂಗಳೂರು, ಡಿ.23: ಶಾಲಾ ಶಿಕ್ಷಣ ಕ್ಷೇತ್ರದ ಜಲ್ವಂತ ಸಮಸ್ಯೆಗಳ ಕುರಿತು ಚರ್ಚಿಸಲು ಅಭಿವೃದ್ಧಿ ಶಿಕ್ಷಣ ತಜ್ಞ ಮತ್ತು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾ ಪೋಷಕ ಡಾ.ನಿರಂಜನಾರಾಧ್ಯ ವಿ.ಪಿ. ಅಧ್ಯಕ್ಷತೆಯಲ್ಲಿ ದುಂಡುಮೇಜಿನ ಸಭೆಯು ಬುಧವಾರ ಶಾಸಕರ ಭವನದಲ್ಲಿ ಜರುಗಿತು.
ಕಳೆದ ಮೂರು-ನಾಲ್ಕು ವರ್ಷಗಳಿಂದ ಕೇಂದ್ರ ಹಾಗು ರಾಜ್ಯ ಸರಕಾರಗಳ ಅಸಂವಿಧಾನಿಕ ಹಾಗು ಮಕ್ಕಳ-ಪಾಲಕ ವಿರೋಧಿ ನೀತಿಗಳಿಂದಾಗಿ ಶಾಲಾ ಶಿಕ್ಷಣ ಕೇತ್ರ ನಲುಗಿದ್ದು, ಶಿಕ್ಷಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಂಘಟನೆಗಳು ಒಗ್ಗಟ್ಟಿನ ಮೂಲಕ ಶಾಲಾ ಶಿಕ್ಷಣ ಕ್ಷೇತ್ರವನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಡಾ.ನಿರಂಜನಾರಾಧ್ಯ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಸಂವಿಧಾನದ ಭಾಗವಾಗಿರುವ ಶಿಕ್ಷಣದ ಮೂಲಭೂತ ಹಕ್ಕನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬದಲು ಶಿಕ್ಷಣದ ಹಕ್ಕನ್ನು ಕಸಿಯುವ ಹಾಗು ಗೌಣಗೊಳಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಕೇವಲ ಪ್ರತಿಷ್ಠೆ ಹಾಗು ತನ್ನ ಗೌಪ್ಯ ಅಜೆಂಡಾವನ್ನು ಎಳೆಯ ಮಕ್ಕಳ ಮೇಲೆ ಹೇರುವ ಭಾಗವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅವಸರದಲ್ಲಿ ಬದಲಾಯಿಸುವ ಮೂಲಕ ಕಳೆದ 75 ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಎಲ್ಲರ ಒಳಗೊಳ್ಳುವಿಕೆಗೆ ಪೂರಕವಾಗಿ ಸಾಧಿಸಿದ್ದ ಅಲ್ಪಸ್ವಲ್ಪ ಬದಲಾವಣೆಗಳನ್ನು ಇಲ್ಲವನ್ನಾಗಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದರ ಭಾಗವಾಗಿ ಇತ್ತೀಚೆಗೆ ಅನೇಕ ಆಘಾತಕಾರಿ ಬೆಳವಣಿಗೆಗಳು ನಡೆಯುತ್ತಿದ್ದು ಅವಕಾಶ ವಂಚಿತ ಮಕ್ಕಳ ಶಾಲಾ ಶಿಕ್ಷಣಕ್ಕೆ ಪೂರಕವಾಗಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮತ್ತು ಅಲ್ಪಸಂಖ್ಯಾತ ಮಕ್ಕಳಿಗೆ ನೀಡುತ್ತಿದ್ದ ಮೌಲಾನ ಆಝಾದ್ ರಾಷ್ಟ್ರೀಯ ಫೆಲೋಶಿಪ್ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದೆ. ಇದು ಅವಕಾಶ ವಂಚಿತ ಹಾಗೂ ಅಲ್ಪಸಂಖ್ಯಾತ ವರ್ಗದ ಮಕ್ಕಳ ಶಿಕ್ಷಣದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಇನ್ನು ಕರ್ನಾಟಕ ರಾಜ್ಯದ ಶಾಲಾ ಶಿಕ್ಷಣದಲ್ಲಿ, ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಾಗುತ್ತಿರುವ ಏಕಪಕ್ಷೀಯ ಬದಲಾವಣೆ, ಅವೈಜ್ಞಾನಿಕ ಬೆಳವಣಿಗೆ ಹಾಗೂ ಮೂಲ ವಾರಸುದಾರರನ್ನು ಕಡೆಗೆಣಿಸಿ ತೆಗೆದುಕೊಳ್ಳುತ್ತಿರುವ ತೀರ್ಮಾನಗಳು, ದೀರ್ಘಕಾಲದಲ್ಲಿ ನಾವು ಈ ಹಿಂದೆ ಸಾಧಿಸಿದ್ದ ಸ್ವಲ್ಪಮಟ್ಟಿನ ಬದಲಾವಣೆಗಳನ್ನು ತಿಳಿಗೊಳಿಸಿ ವ್ಯವಸ್ಥೆಯನ್ನು ಮತ್ತಷ್ಟು ದುರ್ಬಲಗೊಳಿಸುವ ಎಲ್ಲಾ ಕುರುಹುಗಳು ಕಾಣಿಸತೊಡಗಿವೆ. ಈ ಎಲ್ಲಾ ಜ್ವಲಂತ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಉಳಿಸಿ ಬೆಳೆಸಿ ಬಲವರ್ಧಿಸುವ ಕುರಿತು ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸಂಘಟನೆಗಳು ಸರ್ವಾನುಮತದಿಂದ ಈ ಕೆಳಕಂಡ ಹಕ್ಕೊತ್ತಾಯಗಳನ್ನು ಮಂಡಿಸಿ ಅಂಗೀಕರಿಸಿದವು.
1). 5 ಮತ್ತು 8ನೇ ತರಗತಿಯ ಮಕ್ಕಳಿಗೆ ನಡೆಸಲು ಉದ್ದೇಶಿಸಿರುವ ಅವೈಜ್ಞಾನಿಕ ಪರೀಕ್ಷೆಯನ್ನು ಕೈಬಿಟ್ಟು ವ್ಯಾಪಕ ಹಾಗೂ ನಿರಂತರ ಮೌಲ್ಯಮಾಪನದ ಆಧಾರದಲ್ಲಿ ಮಕ್ಕಳ ಕಲಿಕೆಯನ್ನು ಶಾಲಾ ಹಂತದಲ್ಲಿ ಸಿಸಿಇ ಅನ್ವಯ ಮೌಲ್ಯಾಂಕನ ಮಾಡಿ ಅಗತ್ಯ ಕ್ರಮ ವಹಿಸಬೇಕು
2). ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮತ್ತು ಅಲ್ಪ ಸಂಖ್ಯಾತ ಮಕ್ಕಳಿಗೆ ನೀಡುತ್ತಿದ್ದ ಮೌಲಾನ ಅಬುಲ್ ಕಲಾಂ ಆಝಾದ್ ಫೆಲೋಶಿಪ್ ಕಾರ್ಯಕ್ರಮಗಳನ್ನು ರಾಜ್ಯ ಅನುದಾನದಲ್ಲಿ ಮುಂದುವರಿಸಬೇಕು.
3). ಅಂಗವಿಕಲ ಮಕ್ಕಳು ಸೇರಿದಂತೆ ಎಲ್ಲಾ ಮಕ್ಕಳ ಕಲಿಕೆ ಒತ್ತು ನೀಡುವ ಮೂಲಕ ಶಿಕ್ಷಣ ಹಕ್ಕು ಕಾಯಿದೆಯನ್ನು ಸಮರ್ಪಕವಾಗಿ ಹಾಗು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು
4). ರಾಜ್ಯದಲ್ಲಿ ಅಪೌಷ್ಟಿಕತೆ ತೊಡೆದು ಹಾಕಲು ಅಂಗನವಾಡಿಯಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ ವಾರದಲ್ಲಿ ಕನಿಷ್ಠ ಮೂರು ಬಾರಿ ಮೊಟ್ಟೆ ವಿತರಿಸಬೇಕು.
5). ಇತರೆ ರಾಜ್ಯಗಳಲ್ಲಿರುವಂತೆ ಖಾಸಗಿ ಶಾಲೆಗಳಲ್ಲಿ ಶುಲ್ಕ ನಿಯಂತ್ರಣ ಮತ್ತು ಪಾಲಕರ ಭಾಗವಹಿಸುವಿಕೆಗೆ ಪೂರಕವಾದ ಶುಲ್ಕ ನಿಯಂತ್ರಣ ಕಾಯಿದೆ ರೂಪಿಸಿ ಜಾರಿಗೊಳಿಸಬೇಕು ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕೂಡಲೇ ಕ್ರಮ ವಹಿಸಬೇಕೆಂದು ಸಭೆಯು ಒಕ್ಕೊರಲಿನಿಂದ ತೀರ್ಮಾನಿಸಿತು.
ಈ ಎಲ್ಲಾ ವಿಷಯಗಳು ಹಾಲಿ ನಡೆಯುತ್ತಿರುವ ವಿಧಾನ ಸಭಾ ಅಧಿವೇಶನದಲ್ಲಿ ಚರ್ಚೆಯಾಗಬೇಕೆಂದು ಸಭೆ ಒತ್ತಾಯಿಸಿತು. ಈ ಬೇಡಿಕೆಗಳು ಈಡೇರದಿದ್ದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಈ ವಿಷಯಗಳನ್ನು ಪ್ರಧಾನ ವಿಷಯಗಳನ್ನಾಗಿ ಪ್ರಸ್ತಾಪಿಸುವ ಮೂಲಕ ಸರಿಸುಮಾರು ಮೂರು ಕೋಟಿಯಿರುವ ಪಾಲಕರು ಪೋಷಕರು ನಿರ್ಣಾಯಕ ರೀತಿಯಲ್ಲಿ ಮತ ಚಲಾಯಿಸಬೇಕೆಂದು ಸಭೆ ಒಮ್ಮತದಿಂದ ತೀರ್ಮಾನಿಸಿತು ಎಂದು ಡಾ.ನಿರಂಜನಾರಾಧ್ಯ ತಿಳಿಸಿದ್ದಾರೆ.
ಸಭೆಯಲ್ಲಿ ಕರ್ನಾಟಕ ರಾಜ್ಯ ಶಾಲಾ ಕಾಲೇಜುಗಳ ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆಯ ಅಧ್ಯಕ್ಷ ಬಿ.ಎಸ್.ಯೋಗಾನಂದ, ಗ್ರಾಮೀಣ ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟ(ರೂಪ್ಸ)ದ ಅಧ್ಯಕ್ಷ ಲೋಕೇಶ್ ತಾಳೀಕಟ್ಟೆ, ಮಗು ಮತ್ತು ಕಾನೂನು ಕೇಂದ್ರ ,ಎನ್ ಎಲ್ ಎಸ್ ಐ ಯು, ಬೆಂಗಳೂರು ಇದರ ಶಿಕ್ಷಣ ಮುಖ್ಯಸ್ಥ ಕುಮಾರ ಸ್ವಾಮಿ, ಎಸ್.ಐ.ಓ. ಮುಖಂಡ ನವಾಝ್, ಆದಿವಾಸಿ ಬುಡಕಟ್ಟು ಮಹಾಸಭಾದ ಅಧ್ಯಕ್ಷೆ ಮಂಜುಶ್ರೀ, ಕರ್ನಾಟಕ ಜನಶಕ್ತಿ ಮುಖಂಡರಾದ ಮಲ್ಲಿಗೆ ಸಿರಿಮನೆ, ಬೆಂಕಿ ಸರೋವರ, ಫೋರ್ತ್ ವೇವ್ ಫೌಂಡೇಶನ್ ಮುಖ್ಯಸ್ಥ ಜಿ.ರವಿ, ಕರ್ನಾಟಕ ವಿಚಾರವಾದಿ ವೇದಿಕೆಯ ಕಾರ್ಯದರ್ಶಿ ಸುರೇಶ್ ಅರಳಕುಪ್ಪೆ, ಶಿಕ್ಷಣ ತಜ್ಞರಾದ ಡಾ.ಅರ್ಚನಾ, ಸೌಮ್ಯಾ, ಉಷಾ ಮೋಹನ್ ಉಪಸ್ಥಿತರಿದ್ದರು.







