ಬೆಳ್ತಂಗಡಿ | ದಲಿತ ಮುಖಂಡ ಡೀಕಯ್ಯರ ಅಸಹಜ ಸಾವು ಪ್ರರಕಣ: ತನಿಖೆ ಆರಂಭಿಸಿದ ಸಿಐಡಿ

ಬೆಳ್ತಂಗಡಿ, ಡಿ.23: ಹಿರಿಯ ದಲಿತ ಮುಖಂಡರಾಗಿದ್ದ ಪಿ.ಡೀಕಯ್ಯ ಅವರ ಅಸಹಜ ಸಾವಿಗೆ ಸಂಬಂಧಿಸಿದಂತೆ ಸಿಐಡಿ ತನಿಖೆ ಆರಂಭಗೊಂಡಿದೆ.
ಸಿಐಡಿ ಅಧಿಕಾರಿಗಳು ಬೆಳ್ತಂಗಡಿಗೆ ಆಗಮಿಸಿದ್ದು, ಬೆಳ್ತಂಗಡಿ ಠಾಣೆಯಿಂದ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ಕಳೆದ ಜುಲೈ 6ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಡೀಕಯ್ಯ ಕುಸಿದು ಬಿದ್ದು ಗಾಯಗೊಂಡಿದ್ದರೆನ್ನಲಾಗಿದೆ. ಜುಲೈ 8ರಂದು ಅವರು ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇವರ ಅಂತ್ಯ ಸಂಸ್ಕಾರ ಪದ್ಮುಂಜದ ಮನೆಯಲ್ಲಿ ನಡೆದಿತ್ತು.
ಇದಾದ ಬಳಿಕ ಡೀಕಯ್ಯ ಅವರ ಸಹೋದರಿಯರು ಹಾಗೂ ಮನೆಯವರು ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಜು.15ರಂದು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜು.18ರಂದು ಅವರ ಮೃತದೇಹವನ್ನು ಮೇಲೆತ್ತಿ ಮತಣೋತ್ತರ ಪರೀಕ್ಷೆಯನ್ನು ನಡೆಸಲಾಗಿತ್ತು.
ಬೆಳ್ತಂಗಡಿ ಪೊಲೀಸರು ತನಿಖೆ ಆರಂಭಿಸಿದ್ದರು. ಈ ನಡುವೆ ಮನೆಯವರು ಸಿಐಡಿ ತನಿಖೆಗೆ ಆಗ್ರಹಿಸಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಸರಕಾರ ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶಿಸಿತ್ತು. ಅದರಂತೆ ಇದೀಗ ಸಿಐಡಿ ಅಧಿಕಾರಿಗಳು ಬೆಳ್ತಂಗಡಿಗೆ ಆಗಮಿಸಿದ್ದು ಪ್ರಕರಣದ ಮಾಹಿತಿಗಳನ್ನು ಪೊಲೀಸರಿಂದ ಪಡೆದುಕೊಂಡಿದ್ದಾರೆ. ಪಡಂಗಡಿಯಲ್ಲಿರುವ ಡೀಕಯ್ಯರ ಮನೆಗೆ ತೆರಳಿ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ: ಬೆಳ್ತಂಗಡಿ: ದಲಿತ ನಾಯಕ ಪಿ.ಡೀಕಯ್ಯ ಮೃತ್ಯು ಪ್ರಕರಣ; ಸಿಒಡಿ ತನಿಖೆಗೆ ಆದೇಶ







