ಉಡುಪಿ ಜಿಲ್ಲಾ ರೈತ ಸಂಘದಿಂದ ರಾಷ್ಟ್ರೀಯ ರೈತ ದಿನಾಚರಣೆ
ರೈತ ಮೂಕಪ್ರೇಕ್ಷಕನಾದರೆ ಸಮಸ್ಯೆಗಳು ಇನ್ನಷ್ಟು ಉಲ್ಭಣ: ಕೆ.ಪ್ರತಾಪಚಂದ್ರ ಶೆಟ್ಟಿ

ಕುಂದಾಪುರ, ಡಿ.23: ದೇಶದಲ್ಲಿ ಶೇ.65ರಷ್ಟು ರೈತರಿದ್ದು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ರೈತರ ಸಮಸ್ಯೆಗಳನ್ನು ಬಗೆಹರಿಸಲು ಈ ಬಗ್ಗೆ ಅರಿವು, ಅದನ್ನು ಸರಿಪಡಿಸಲು ಇಚ್ಚಾಶಕ್ತಿ ಹಾಗೂ ಕಾಳಜಿ ಅಗತ್ಯ. ಸಾರ್ವಭೌಮತ್ವ ಉಳಿಸಿಕೊಂಡು ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿರುವ ರೈತರಿಗೆ ಭವಿಷ್ಯವಿದೆ ಎಂದು ತೋಟಗಾರಿಕೆ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಹಾಗೂ ಬ್ರಹ್ಮಾವರದ ದ.ಕ.ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಎಚ್.ಜಯಶೀಲ ಶೆಟ್ಟಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ರೈತ ಸಂಘದ ವತಿಯಿಂದ ಡಿ.23ರಂದು ಕುಂದಾಪುರದ ಆರ್.ಎನ್ ಶೆಟ್ಟಿ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ರಾಜಕೀಯದ ಹೊರತಾಗಿ ಸಮಾಜದ ರೈತರ ಪರವಾಗಿ ಕೆಲಸ ಮಾಡುತ್ತಿರುವ ಉಡುಪಿ ಜಿಲ್ಲಾ ರೈತ ಸಂಘವು ಪ್ರತಾಪಚಂದ್ರ ಶೆಟ್ಟಿಯವರ ನೇತೃತ್ವದಲ್ಲಿ ಹೋರಾಟದ ಹಾದಿಯಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಮಾಜಿ ಶಾಸಕ ಹಾಗೂ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪಚಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರದಲ್ಲಿ ಯಾವುದೇ ಪಕ್ಷದ ಸರಕಾರ ಅಧಿಕಾರದಲ್ಲಿದ್ದರೂ ರೈತರ ಹಾಗೂ ಜನಪರ ಕಾಳಜಿ ಹೊಂದಿ ಹಲವು ಯೋಜನೆಗಳನ್ನು ರೂಪಿಸಿದರೂ ಕೂಡ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ ಎಂದರು.
ಕುಂಟುತ್ತಿರುವ ವಾರಾಹಿ ಯೋಜನೆ: ವಾರಾಹಿ ಯೋಜನೆ ಆರಂಭವಾಗಿ 40 ವರ್ಷಗಳಾಗುತ್ತಿದೆ. ಆದರೆ ಇನ್ನು ಶೇ.30ರಷ್ಟು ಪ್ರದೇಶಗಳಿಗೆ ನೀರು ನೀಡಿಲ್ಲ. ಬಲದಂಡೆ ಕಾಲುವೆ, ಏತನೀರಾವರಿ ಕಾಮಗಾರಿ ಇನ್ನೂ ಕೂಡ ಬಾಕಿಯಿದೆ. ರೈತರು ಮಾತನಾಡ ದಿರುವುದೇ ಇದಕ್ಕೆಲ್ಲಾ ಕಾರಣ. ಕಾಡು ಪ್ರಾಣಿಗಳ ಹಾವಳಿಯಿಂದ ಕಂಗೆಟ್ಟ ರೈತರ ಬದುಕು ದುಸ್ತರವಾಗಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ಪರಿಹಾರ ನೀಡುವಲ್ಲಿ ಸರ್ಕಾರ ಮುತುವರ್ಜಿ ವಹಿಸಬೇಕು. ಬೀಡಾಡಿ ಗೋವುಗಳನ್ನು ಸಾಕುವುದು, ಜಾನುವಾರು ರಕ್ಷಣೆಗೆ ಸರಕಾರ ಸೂಕ್ತ ಕ್ರಮ ವಹಿಸಬೇಕು ಎಂದರು.
ಇಂದು ರೈತ ಮತ್ತು ಸರ್ಕಾರದ ನಡುವೆ ಸೂಕ್ತ ವೇದಿಕೆಯಿಲ್ಲ. ಇಂತಹ ರಾಷ್ಟ್ರೀಯ ರೈತರ ದಿನಾಚರಣೆ ಸಮಯದಲ್ಲಾದರೂ ರೈತರಿಗೊಂದು ವೇದಿಕೆ ಸೃಷ್ಟಿಸಿ ಅವರ ಸಮಸ್ಯೆ ಕೇಳಿ ಸೂಕ್ತ ಪರಿಹಾರ ಕಂಡುಕೊಳ್ಳವಲ್ಲಿ ಸರ್ಕಾರ ಇಚ್ಚಾಶಕ್ತಿ ತೋರದಿರುವುದು ದುರಂತ ಎಂದರು.
ಸನ್ಮಾನ: ಅಧಿಕಾರ ವಿಕೇಂದ್ರಿಕರಣದ ಅಭಿವೃದ್ಧಿಯ ಕುರಿತು ಉತ್ತರ ಆಫ್ರಿಕಾದ ಮೊರಕ್ಕೊ ದೇಶದ ಅಂತಾರಾಷ್ಟ್ರೀಯ ಶೃಂಗ ಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಏಕೈಕ ಜನ ಪ್ರತಿನಿಧಿ ರೈತ ಸಂಘದ ವಂಡ್ಸೆ ವಲಯಾಧ್ಯಕ್ಷ ಉದಯಕುಮಾರ್ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಂಡ್ಸೆ ವಲಯದ ಸಾವಯವ ಕೃಷಿಕ ಡಾ.ಅತುಲ್ ಕುಮಾರ ಶೆಟ್ಟಿ, ಹಾಲಾಡಿ ವಲಯದ ಸಮಗ್ರ ಕೃಷಿಕರಾದ ಚಿತ್ತರಂಜನ್ ರಾವ್, ಕಾವ್ರಾಡಿ ವಲಯದ ಚಂದ್ರಶೇಖರ ಉಡುಪ, ಸಮಾಜ ಸೇವಕ ಹೆಬ್ರಿ ವಲಯದ ಪ್ರಸಾದ್ ಹೆಗ್ಡೆ, ಹೈನುಗಾರಿಕೆಯಲ್ಲಿ ಖಂಬದಕೋಣೆ ವಲಯದ ಪ್ರಕಾಶಚಂದ್ರ ಶೆಟ್ಟಿ, ಪೆರ್ಡೂರು ವಲಯದ ಸತೀಶ್ ಶೆಟ್ಟಿ, ಕಂಬಳದ ಪೋಷಕ ಬ್ರಹ್ಮಾವರ ವಲಯದ ಶೇಖರ ಪೂಜಾರಿ, ಪ್ರಗತಿಪರ ಕೃಷಿಕರಾದ ಸಿದ್ದಾಪುರ ವಲಯದ ಬಿ. ರತ್ನಾಕರ ಶೆಟ್ಟಿ, ಬೀಜಾಡಿ ವಲಯದ ಬಸವ ಪೂಜಾರಿ, ಮಂದರ್ತಿ ವಲಯದ ಜಯಕರ ಶೆಟ್ಟಿ, ಬೈಂದೂರು ವಲಯದ ಸುಕೇಶ್ ಶೆಟ್ಟಿ, ತ್ರಾಸಿ ವಲಯದ ವೆಂಕಟ ಪೂಜಾರಿ, ಮಲ್ಲಿಗೆ ಕೃಷಿಕರಾದ ಕೋಟೇಶ್ವರ ವಲಯದ ಲಲಿತಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
2023ನೇ ವರ್ಷದ ಉಡುಪಿ ಜಿಲ್ಲಾ ರೈತ ಸಂಘದ ಕ್ಯಾಲೆಂಡರನ್ನು ಬಿಡುಗಡೆಗೊಳಿಸಲಾಯಿತು.ಭಾರತೀಯ ಕಿಸಾನ್ ಸಂಘ ಕುಂದಾಪುರ ತಾಲೂಕು ಅಧ್ಯಕ್ಷ ಸೀತಾರಾಮ ಗಾಣಿಗ, ಸಹಕಾರಿ ಕ್ಷೇತ್ರದ ಪ್ರಮುಖರಾದ ಎಸ್. ರಾಜು ಪೂಜಾರಿ, ದಿನಪಾಲ್ ಶೆಟ್ಟಿ,ರೈತ ಸಂಘದ ಖಜಾಂಚಿ ಭೋಜು ಕುಲಾಲ್ ಹೆಬ್ರಿ, ಮುಖಂಡರಾದ ಪ್ರದೀಪ್ ಬಲ್ಲಾಳ್, ಸಂಜೀವ ಶೆಟ್ಟಿ ಸಂಪಿಗೇಡಿ, ಬೆಳಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.
ಗಣೇಶ್ ಗಂಗೊಳ್ಳಿ ರೈತಗೀತೆ ಹಾಡಿದರು. ರೈತಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಬೆಳ್ವೆ ಸ್ವಾಗತಿಸಿ, ವಕ್ತಾರ ವಿಕಾಸ್ ಹೆಗ್ಡೆ ಪ್ರಸ್ತಾವನೆ ಗೈದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿ, ಅಶೋಕ್ ಶೆಟ್ಟಿ ವಂದಿಸಿದರು.
ಜಿಲ್ಲೆಯ ರೈತರ ಪಾಲಿಗೆ ಅತೀದೊಡ್ಡ ದುರಂತಗಳಾದ ವಾರಾಹಿ ನೀರಾವರಿ ಯೋಜನೆ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಉಡುಪಿ ಜಿಲ್ಲಾ ರೈತ ಸಂಘದಿಂದ ಹೋರಾಟ ನಡೆಸಲಾಗಿದೆ. ರಾಜಕೀಯ ರಹಿತವಾಗಿ, ಪಕ್ಷಾತೀತವಾಗಿ ರೈತರ ಪರವಾಗಿ ಕರಾವಳಿಯ ಜ್ವಲಂತ ಸಮಸ್ಯೆಗಳಾದ ಸಿಆರ್‌ಝಡ್, ಕಸ್ತೂರಿರಂಗನ್, ಡೀಮ್ಡ್, ಅಕ್ರಮ-ಸಕ್ರಮ ಸಮಸ್ಯೆ, ಕಾಡು ಪ್ರಾಣಿಗಳ ಹಾವಳಿ ಮೊದಲಾದವುಗಳ ಬಗ್ಗೆ ಹೋರಾಟದ ಮೂಲಕ ಬಹುತೇಕ ಮಟ್ಟಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ.
-ವಿಕಾಸ್ ಹೆಗ್ಡೆ, ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ
ವರ್ಷಾನುಗಟ್ಟಲೆ ಪ್ರಯತ್ನಿಸಿದರೂ ಮಂಜೂರಾಗದ ಕಿಂಡಿ ಅಣೆಕಟ್ಟುಗಳು ಈಗ ಬೇಡದಿರುವ ಜಾಗದಲ್ಲೆಲ್ಲಾ ಆಗುತ್ತಿದೆ. ಆದರೆ ಅದರ ಕಾಮಗಾರಿ ಎಷ್ಟು ಸಮರ್ಪಕವಾಗಿ, ಉತ್ತಮವಾಗಿ ನಡೆಯುತ್ತಿದೆ ಎಂಬ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ರೈತ ಮೂಕಪ್ರೇಕ್ಷಕನಾದರೆ ಸಮಸ್ಯೆಗಳು ಇನ್ನಷ್ಟು ಉಲ್ಭಣಿಸುತ್ತವೆ. ರೈತರು ತಮ್ಮ ಮೂಲಭೂತ ಸಮಸ್ಯೆಗಳು, ಬೇಡಿಕೆಗಳಿಗಾಗಿ ತಾವೇ ಧ್ವನಿಯಾಗಬೇಕು.
ಕೆ.ಪ್ರತಾಪಚಂದ್ರ ಶೆಟ್ಟಿ,ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ








