ಅಮೆರಿಕ-ರಶ್ಯ ನಡುವೆ ಘರ್ಷಣೆಯ ಅಪಾಯ ಅಧಿಕ: ರಶ್ಯ ರಾಯಭಾರಿ

ವಾಷಿಂಗ್ಟನ್, ಡಿ.23: ಅಮೆರಿಕ ಮತ್ತು ರಶ್ಯದ ನಡುವೆ ಘರ್ಷಣೆಯ ಅಪಾಯ ಹೆಚ್ಚಾಗಿದೆ ಎಂದು ಅಮೆರಿಕಕ್ಕೆ ರಶ್ಯದ ರಾಯಭಾರಿ ಅನಾಟೊಲಿ ಅಂಟೋನೋವ್ ಹೇಳಿರುವುದಾಗಿ ರಶ್ಯದ ತಾಸ್ ಸುದ್ಧಿಸಂಸ್ಥೆ ವರದಿ ಮಾಡಿದೆ. ಎರಡು ದೇಶಗಳ ನಡುವಿನ ವ್ಯೆಹಾತ್ಮಕ ಮಾತುಕತೆಗಳು ಯಾವಾಗ ಆರಂಭಗೊಳ್ಳಬಹುದು ಎಂದು ಹೇಳುವುದು ಕಷ್ಟ. ಆದರೆ ಯುದ್ಧಕೈದಿಗಳ ವಿನಿಮಯ ಪ್ರಕ್ರಿಯೆ ಪರಿಣಾಮಕಾರಿಯಾಗಿದ್ದು ಇದು ಮುಂದುವರಿಯಲಿದೆ ಎಂದವರು ಹೇಳಿದ್ದಾರೆ.
ಈ ಮಧ್ಯೆ, ಪಾಶ್ಚಿಮಾತ್ಯ ದೇಶಗಳು ರಶ್ಯದ ತೈಲಕ್ಕೆ ದರ ಮಿತಿಗೊಳಿಸಿರುವುದಕ್ಕೆ ಪ್ರತಿಯಾಗಿ, 2023ರ ಆರಂಭದಿಂದ ತೈಲ ಉತ್ಪಾದನೆಯನ್ನು 7%ದಷ್ಟು ಕಡಿಮೆಗೊಳಿಸಲು ನಿರ್ಧರಿಸಲಾಗಿದೆ ಎಂದು ರಶ್ಯದ ಇಂಧನ ಕಾರ್ಯನೀತಿಯನ್ನು ನಿರ್ವಹಿಸುತ್ತಿರುವ ಉಪಪ್ರಧಾನಿ ಅಲೆಕ್ಸಾಂಡರ್ ನೊವಾಕ್ ಹೇಳಿದ್ದಾರೆ. ಮುಂದಿನ ವರ್ಷದ ಆರಂಭದಿಂದ ಪ್ರತೀ ದಿನ 5ರಿಂದ 7 ಲಕ್ಷ ಬ್ಯಾರಲ್ಗಳಷ್ಟು ಕಡಿಮೆ ಉತ್ಪಾದನೆ ಮಾಡಬಹುದು. ಪಾಶ್ಚಿಮಾತ್ಯ ದೇಶಗಳು ನಿರ್ಧರಿಸಿರುವ ತೈಲ ದರ ಮಿತಿಯನ್ನು ಅನುಸರಿಸುವ ದೇಶಗಳಿಗೆ ನಾವು ತೈಲ ರಫ್ತು ಮಾಡುವುದಿಲ್ಲ ಎಂದವರು ಹೇಳಿದ್ದಾರೆ.