ಕೋವಿಡ್ ಕರಿಛಾಯೆ: ವಿಧಾನ ಮಂಡಲದ ಅಧಿವೇಶನ ಮೊಟಕು?
ಬೆಳಗಾವಿ, ಡಿ.24: ವಿಶ್ವದ ಅನೇಕ ದೇಶಗಳಲ್ಲಿ ಕೋವಿಡ್ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಮೊಟಕುಗೊಳ್ಳುವ ಸಾಧ್ಯತೆಯಿದೆ.
ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ರಾಜ್ಯದಲ್ಲಿಯೂ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಸಂಸತ್ನ ಅಧಿವೇಶನವು ಒಂದು ವಾರ ಮುಂಚಿತವಾಗಿ ಮುಂದೂಡಲ್ಪಟ್ಟಿರುವುದರಿಂದ, ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನವನ್ನೂ ಅನಿರ್ದಿಷ್ಟಾವಧಿಗೆ ಮುಂದೂಡಲು ಸರಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿ.26ರ ಬೆಳಗ್ಗೆ 10:30ಕ್ಕೆ ಸುವರ್ಣ ವಿಧಾನಸೌಧದಲ್ಲಿ ತುರ್ತು ಸಚಿವ ಸಂಪುಟ ಸಭೆ ಕರೆದಿರುವುದು ಈ ಅನುಮಾನಕ್ಕೆ ಪುಷ್ಠಿ ನೀಡುವಂತಾಗಿದೆ. ಅಧಿವೇಶನವು ಒಳಾಂಗಣದಲ್ಲಿ, ಹವಾನಿಯಂತ್ರಿತ ವಾತಾವರಣದಲ್ಲಿ ನಡೆಯುವುದರಿಂದ ವೈರಾಣುಗಳ ಹರಡುವಿಕೆ ತ್ರೀವವಾಗಿರುತ್ತದೆ.
ಇಂದಿನಿಂದ ವಿಧಾನಸಭೆಯ ಒಳಗೆ ಮಾಸ್ಕ್ ಧರಿಸುವುದನ್ನು ಸ್ಪೀಕರ್ ಕಡ್ಡಾಯ ಮಾಡಿದ್ದಾರೆ. ರಾಜ್ಯದಲ್ಲಿ ಶೇ.80ಕ್ಕೂ ಹೆಚ್ಚು ಮಂದಿ ಕೋವಿಡ್ ಸೋಂಕು ನಿಯಂತ್ರಿಸುವ ಬೂಸ್ಟರ್ ಡೋಸ್ ತೆಗೆದುಕೊಳ್ಳದಿರುವುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ.
ಸೋಮವಾರ ವಿಧಾನಸಭೆಯಲ್ಲಿ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧರು ನೀಡಿರುವ 2021-22ನೇ ಸಾಲಿನ ಧನವಿನಿಯೋಗ ಲೆಕ್ಕಗಳು ಮತ್ತು ಹಣಕಾಸಿನ ಲೆಕ್ಕಗಳು(ಸಂಪುಟ 1 ಮತ್ತು 2) ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡನೆ ಮಾಡಲಿದ್ದಾರೆ.
ಜೊತೆಗೆ 2022-23ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗಳು ಹಾಗೂ 2022-23ನೇ ಸಾಲಿನ ರಾಜ್ಯ ಹಣಕಾಸಿನ ಮಧ್ಯ ವಾರ್ಷಿಕ ಪರಿಶೀಲನಾ ವರದಿಯನ್ನು ಮುಖ್ಯಮಂತ್ರಿ ಮಂಡಿಸಲಿದ್ದಾರೆ. ಸಾಮಾನ್ಯವಾಗಿ ಧನ ವಿನಿಯೋಗ ವಿಧೇಯಕವನ್ನು ಅಧಿವೇಶನದ ಅಂತಿಮ ಹಂತದಲ್ಲಿ ಮಂಡನೆ ಮಾಡಿ ಅಂಗೀಕಾರ ಪಡೆಯುವುದು ವಾಡಿಕೆ. ಆದರೆ, ತರಾತುರಿಯಲ್ಲಿ ಧನ ವಿನಿಯೋಗ ವಿಧೇಯಕ ಸೇರಿದಂತೆ ಮಹತ್ವದ ವಿಧೇಯಕಗಳನ್ನು ಸೋಮವಾರ ಮಂಡಿಸಲು ಕಾರ್ಯಕಲಾಪ ಪಟ್ಟಿಯಲ್ಲಿ ಹಾಕಲಾಗಿದೆ.
ವಿಧೇಯಕಗಳು: ಎಸ್-ಎಸ್ಟಿ ಮೀಸಲಾತಿ ಹೆಚ್ಚಳ ವಿಧೇಯಕ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಸೇರಿದಂತೆ ಇನ್ನಿತರ ಪ್ರಮುಖ ವಿಧೇಯಕಗಳು ಸೋಮವಾರವೇ ಮಂಡನೆಯಾಗಿ ಅಂಗೀಕಾರ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಬೆಳಗಾವಿ ಜಿಲ್ಲೆಯು ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವುದರಿಂದ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಅಂತರ್ ರಾಜ್ಯ ಪ್ರವಾಸಿಗರ ಸಂಚಾರದ ಪ್ರಮಾಣವು ಹೆಚ್ಚಾಗಲಿದೆ. ಈ ಎಲ್ಲ ಕಾರಣಗಳಿಂದಾಗಿ ಮಂಗಳವಾರ ಅಥವಾ ಬುಧವಾರ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ಬಹುತೇಕ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ ಎಂಬ ಚರ್ಚೆಗಳು ನಡೆಯುತ್ತಿವೆ.