ಬ್ಯಾರಿ ಭಾಷೆ, ಸಮುದಾಯದ ಬಗ್ಗೆ ಅಧ್ಯಯನ ನಡೆಯಲಿ: ಪ್ರೊ. ಕಿಶೋರ್ ಕುಮಾರ್

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಬದ್ರಿಯಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಮಟ್ಟದ “ಬ್ಯಾರಿ ಭಾಷಾ ವಿದ್ಯಾರ್ಥಿ ಕವಿಗೋಷ್ಠಿ”ನಡೆಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ. ಕೆ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಬ್ಯಾರಿ ಸಮುದಾಯ ಒಂದು ವಿಶಿಷ್ಟವಾದ ಸಮುದಾಯವಾಗಿದ್ದು, ಬ್ಯಾರಿ ಭಾಷೆ ಕರಾವಳಿ ಕರ್ನಾಟಕದ ಪ್ರಾದೇಶಿಕ ಭಾಷೆಗಳಲ್ಲೊಂದಾಗಿದೆ. ಬ್ಯಾರಿಗಳ ಉಡುಗೆ–ತೊಡುಗೆ, ಆಹಾರ ಪದ್ಧತಿ, ನಂಬಿಕೆಗಳು, ಆಚರಣೆಗಳು ವಿಭಿನ್ನವಾಗಿದ್ದು, ಕಲೆ, ಜಾನಪದ, ಹಾಡು – ಕುಣಿತಗಳು ಶ್ರೀಮಂತ ಸಂಸ್ಕೃತಿಯ ಒಂದು ಭಾಗವಾಗಿದೆ ಎಂದರು.
ಬ್ಯಾರಿ ಭಾಷೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಭಾಷೆ ಹಾಗೂ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ನಡೆಯಲಿ ಎಂದು ನುಡಿದರು.
ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮುಖ್ಯ ಅತಿಥಿಯಾಗಿ ಮಾತನಾಡಿ, 1400 ವರ್ಷಗಳ ಇತಿಹಾಸ ಇರುವ ಬ್ಯಾರಿ ಸಮುದಾಯದ ಹಲವಾರು ಸಂಘ ಸಂಸ್ಥೆಗಳು ಜಾತಿ – ಧರ್ಮ ನೋಡದೆ ಸಮಾಜಮುಖಿ ಕೆಲಸ ಮಾಡುತ್ತಾ ಬಂದಿದೆ ಎಂದರು.
ಬ್ಯಾರಿ ವಾರ್ತಾ ಮಾಸಿಕದ ಉಪ ಸಂಪಾದಕ ಮಹಮ್ಮದ್ ಅಲಿ ಕಮ್ಮರಡಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾರಿ ಭಾಷೆಯಲ್ಲಿ ಉತ್ತಮ ಸಾಹಿತ್ಯ ಮೂಡಿ ಬರಲಿ ಎಂದು ಹಾರೈಸಿದರು.
ಹಲವಾರು ಕಾಲೇಜುಗಳ ವಿದ್ಯಾರ್ಥಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದ್ರಿಯಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಹಮತ್ ಆಲಿ ವಹಿಸಿದ್ದರು.
ವೇದಿಕೆಯಲ್ಲಿ ಬದ್ರಿಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಯೂಸುಫ್ ಡಿ, ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾದ ಅಹಮದ್ ಬಾವ ಮೊಯ್ದೀನ್, ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಶಂಸುದ್ದೀನ್ ಮಡಿಕೇರಿ, ಬಶೀರ್ ಬೈಕಂಪಾಡಿ ಉಪಸ್ಥಿತರಿದ್ದರು.
ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದಿಕ್ ಪ್ರಸ್ತಾವಿಸಿ ಸ್ವಾಗತಿಸಿದರು. ಶಂಸುದ್ದೀನ್ ಮಡಿಕೇರಿ ವಂದಿಸಿದರು. ಶಹಲಾ ರಹಮಾನ್ ಕಾರ್ಯಕ್ರಮ ನಿರೂಪಿಸಿದರು.