ನಾಲ್ಕೈದು ಭಾರತೀಯರಲ್ಲಿ ರೂಪಾಂತರಿತ ವೈರಸ್ ಪತ್ತೆ: ಶೋಭಾ ಕರಂದ್ಲಾಜೆ

ಉಡುಪಿ: ಭಾರತದ ನಾಲ್ಕೈದು ಮಂದಿಯಲ್ಲಿ ಈಗಾಗಲೇ ರೂಪಾಂತರ ವೈರಸ್ ಪತ್ತೆಯಾಗಿದೆ ಎಂದು ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ಮತ್ತೆ ಕೋವಿಡ್ ಭೀತಿ ವಿಚಾರದಲ್ಲಿ ಮಾತನಾಡಿದ ಅವರು, ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಮತ್ತೊಮ್ಮೆ ಕೋವಿಡ್ ಬಂದಿದೆ. ಒಂದು ವರದಿಯ ಪ್ರಕಾರ ಚೀನಾದಲ್ಲಿ ಪ್ರತಿದಿನ ಐದರಿಂದ ಹತ್ತು ಸಾವಿರ ಜನ ಸಾಯುತ್ತಿದ್ದಾರೆ. ಅಲ್ಲಿ ವೈದ್ಯಕೀಯ ನೆರವು, ಆಹಾರ, ಔಷಧಿ ಸಿಗುತ್ತಿಲ್ಲ ಎಂದು ಮಾಹಿತಿ ಇದೆ. ಚೀನಾದಲ್ಲಿ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾ ಸರ್ಕಾರದ ನಿಯಂತ್ರಣದಲ್ಲಿರುವ ಕಾರಣದಿಂದ ಸತ್ಯಾಂಶ ಹೊರ ಬರುತ್ತಿಲ್ಲ. ಇಡೀ ಪ್ರಪಂಚಕ್ಕೆ ಕೊರೋನ ಕೊಟ್ಟಿರುವುದು ಚೀನಾ ಆಗಿದ್ದು ಭಾರತಕ್ಕೂ ಚೀನಾದಿಂದ ಪ್ರವಾಸಿಗರು ಬರುತ್ತಿದ್ದಾರೆ. ಈಗಾಗಾಲೇ ಪ್ರಧಾನಿ ನೇತೃತ್ವದಲ್ಲಿ ಹಲವು ಹಂತದ ಸಭೆ ಮಾಡಿದ್ದು, ದೇಶದ ವೈದ್ಯಕೀಯ ಸಚಿವರ ನೇತೃತ್ವದಲ್ಲಿ ಈ ಸಭೆ ನಡೆಸಲಾಗಿದೆ. ನಿಯಮ ಕಟ್ಟಲಿಟ್ಟು ಪಾಲಿಸುವಂತೆ ಸರ್ಕಾರ ಹೇಳಿದೆ. ಕೊರೋನ ವಿಚಾರದಲ್ಲಿ ಭಾರತದಲ್ಲಿ ಆತಂಕ ಪಡುವ ವಿಚಾರ ಇಲ್ಲ. ಜಾಗೃತರಾಗಿರಬೇಕು, ಮಾಸ್ಕ್ ಧರಿಸಬೇಕು, ನಮ್ಮ ವ್ಯಾಕ್ಸಿನ್ ದೇಶವನ್ನು ರಕ್ಷಿಸಿದ್ದು ಎಲ್ಲ ಭಾರತೀಯರಿಗೂ ಉಚಿತ ಲಸಿಕೆ ಕೊಡುವ ಕೆಲಸ ಕೇಂದ್ರ ಸರ್ಕಾರ ಮಾಡಿತ್ತು ಎಂದರು.
ಈಗ ಎಲ್ಲರೂ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು. ಮಾಸ್ಕ್ ಮತ್ತು ಲಸಿಕೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಇರುವ ಪರಿಹಾರ. ನಮ್ಮ ಮಕ್ಕಳ ಬಗ್ಗೆ ನಾವು ಜಾಗೃತಿ ವಹಿಸಬೇಕು. ನಮ್ಮ ದೇಶದಲ್ಲಿ ನೀಡಿದ ಲಸಿಕೆ ಎಲ್ಲಾ ವೈರಸ್ಸನ್ನು ತಡೆಗಟ್ಟುವ ವಿಶ್ವಾಸವಿದೆ. ಕೋವಿಡ್ ಎರಡು ಮತ್ತು ಮೂರನೇ ಅಲೆಯಲ್ಲಿ ಡಯಾಬಿಟಿಸ್ ಹಾರ್ಟ್ ಕಿಡ್ನಿ ಸಮಸ್ಯೆ ಉಳ್ಳವರು ಹೆಚ್ಚು ಮಂದಿ ಮೃತಪಟ್ಟಿದ್ದರು. ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಜಾಗೃತ ವಹಿಸಬೇಕು ಎಂದವರು ಹೇಳಿದರು.
ಇನ್ನು ಜೋಡೋ ಯಾತ್ರೆ ತಡೆಯಲು ಕೋವಿಡ್ ನೆಪ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಭಾರತ್ ಜೋಡೋ ಯಾತ್ರೆ ಇವತ್ತು ಶುರುವಾಗಿದ್ದಲ್ಲ. ಕೇರಳದಿಂದ ಆರಂಭವಾಗಿ ತಿಂಗಳುಗಟ್ಟಲೆ ಕಳೆದಿದೆ. ಭಾರತ ಜೋಡೋ ಯಾತ್ರೆ ತಡೆಗಟ್ಟುವ ಕೆಲಸ ಯಾರು ಮಾಡಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೂ ಕೂಡ ಕಾಂಗ್ರೆಸಿಗೆ ಎಲ್ಲಾ ರೀತಿಯ ರಕ್ಷಣೆ ನೀಡಲಾಗಿತ್ತು. ದಸರಾ ಸಂದರ್ಭದಲ್ಲಿ ಮೈಸೂರಿಗೆ ಯಾತ್ರೆ ಬಂದರೂ ಯಾವುದೇ ಅಡ್ಡಿಯಾಗಲಿಲ್ಲ. ಭಾರತ ಜೋಡೋ ಯಾತ್ರೆ ಬಗ್ಗೆ ಕಾಂಗ್ರೆಸ್ಸಿಗೆ ಸಂಶಯವಿದೆ. ಜೋಡೋ ಯಾತ್ರೆಯಿಂದ ಕಾಂಗ್ರೆಸ್ ಇಮೇಜ್ ಎಷ್ಟು ಬದಲಾಗಿದೆ ಎಂಬ ಬಗ್ಗೆ ರಾಹುಲ್ ಗಾಂಧಿಗೆ ಸಂಶಯವಿರಬಹುದು. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಆತಂಕದಲ್ಲಿದ್ದಾರೆ. ನಾಗರಿಕರಿಗೆ ಕೋವಿಡ್ ಸಂದರ್ಭದಲ್ಲಿ ಅನುಭವಿಸಿದ ಸಂಕಷ್ಟ ಗೊತ್ತಿದೆ. ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ಹಿಮಾಚಲ ಪ್ರದೇಶ ಸಿಎಂ ಗೆ ಕೋವಿಡ್ ಪಾಸಿಟಿವ್ ಬಂದಿತ್ತು. ದೇಶದ ಹಿತದೃಷ್ಟದಿಂದ ಕಾಂಗ್ರೆಸ್ ಜಾಗೃತಿ ವಹಿಸಬೇಕು. ಕಾಂಗ್ರೆಸ್ ಪಕ್ಷದ ನಾಯಕರಿಗೆ ನಾವ್ಯಾರು ಬುದ್ಧಿ ಹೇಳುವ ಸ್ಥಿತಿಯಲ್ಲಿ ಇಲ್ಲ ಎಂದವರು ಟೀಕಿಸಿದರು.