ಸುರತ್ಕಲ್: ಚೂರಿ ಇರಿತಕ್ಕೊಳಗಾದ ವ್ಯಕ್ತಿ ಮೃತ್ಯು

ಸುರತ್ಕಲ್: ವ್ಯಕ್ತಿಯೊಬ್ಬರಿಗೆ ದುಷ್ಕರ್ಮಿಗಳು ಚೂರಿ ಇರಿದು ಪರಾರಿಯಾಗಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ 4ನೆ ಬ್ಲಾಕ್ ನೈತಂಗಡಿ ಬಳಿ ನಡೆದಿದೆ.
ಇರಿತಕ್ಕೊಳಗಾದವರನ್ನು ಕೃಷ್ಣಾಪುರ 9ನೇ ಬ್ಲಾಕ್ ನಿವಾಸಿ ಜಲೀಲ್ ಎಂದು ಗುರುತಿಸಲಾಗಿದೆ.
ಮೃತ ಜಲೀಲ್ ಅವರು ನೈತಂಗಡಿಯಲ್ಲಿ ಫ್ಯಾನ್ಸಿ ಮತ್ತು ಚಪ್ಪಲಿಯ ಅಂಗಡಿ ನಡೆಸುತ್ತಿದ್ದಾರೆ. ಅಂಗಡಿಯಲ್ಲಿ ಕುಳಿತಿದ್ದ ಸಂದರ್ಭ ಅಂಗಡಿಯ ಪಕ್ಕದ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರಿದ್ದ ತಂಡ ಅಂಗಡಿಯ ಪಕ್ಕದ ಕತ್ತಲಿನ ಪ್ರದೇಶದಲ್ಲಿ ಸ್ಕೂಟಿ ಇಟ್ಟು ಬಂದು ಏಕಾಏಕಿ ಚೂರಿ ಇರಿದು ಪರಾರಿಯಾಗಿದ್ದಾರೆ. ಈ ವೇಳೆ ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅವರ ಅಂಗಡಿಯ ಪಕ್ಕದ ದಿನಸಿ ಅಂಗಡಿಯ ಫಾರೂಕ್ (ಉಮರಬ್ಬ) ಎಂಬವರ ಅಂಗಡಿಯ ಬಳಿಗೆ ಓಡಿ ಬಂದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ದುಷ್ಕರ್ಮಿಗಳು ಜಲೀಲ್ ಅವರ ಎದೆಯ ಭಾಗ ಮತ್ತು ಬೆನ್ನಿಗೆ ಹರಿತವಾದ ಚೂರಿಯಿಂದ ಇರಿದಿದ್ದು, ಅವರ ಬೆನ್ನಿನಲ್ಲಿದ್ದ ಚೂರಿಯನ್ನು ತೆಗೆದ ಫಾರೂಕ್ ಅವರು ತಕ್ಷಣ ಕಾರಿನಲ್ಲಿ ಮುಕ್ಕದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯಲ್ಲಿ ಜಲೀಲ್ ಮೃತಪಟ್ಟರೆಂದು ತಿಳಿದು ಬಂದಿದೆ.
ಸ್ಥಳಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಎಸಿಪಿಗಳು, ಸಿಸಿಬಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತದೇಹ ಎಜೆ ಆಸ್ಪತ್ರೆಗೆ ರವಾನೆ:
ಘಟನೆಯ ಬಳಿಕ ಜಲೀಲ್ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮರಣೋತ್ತರ ಪರೀಕ್ಷೆಗಾಗಿ ನಗರದ ಎಜೆ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
ಸೆಕ್ಷನ್ 144
ಘಟನೆಯ ಹಿನ್ನಲೆಯಲ್ಲಿ ಕಮಿಷನರೇಟ್ ವ್ಯಾಪ್ತಿಯ ಪಣಂಬೂರು, ಸುರತ್ಕಲ್, ಬಜ್ಪೆ, ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144ಅಡಿ ನಿಷೇಧಾಜ್ಞೆ ವಿಧಿಸಿ ಕಮಿಷನರ್ ಶಶಿಕುಮಾರ್ ಆದೇಶಿಸಿದ್ದಾರೆ.