ಪ್ರಬಲ ಜಾತಿಗೆ 2ಎ ಮೀಸಲಾತಿ ನೀಡಿದರೆ ಕಾನೂನು ಹೋರಾಟದ ಎಚ್ಚರಿಕೆ

ಬೆಂಗಳೂರು, ಡಿ.24: ರಾಜ್ಯದಲ್ಲಿ ಇಂದು 197 ಸಮುದಾಯಗಳೂ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರಬಲ ಜಾತಿಗೆ 2ಎ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಿದರೆ, ಕಾನೂನು ಹೋರಾಟ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯು ಎಚ್ಚರಿಕೆ ನೀಡಿದೆ.
ಶನಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ವೇದಿಕೆಯ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್ ಮಾತನಾಡಿ, ಬಲಿಷ್ಠರ ನ್ಯಾಯಬದ್ಧವಲ್ಲದ ಒತ್ತಾಯಕ್ಕೆ ಮಣಿದು, ಪ್ರಬಲ ಸಮುದಾಯಕ್ಕೆ ಹಿಂದುಳಿದ ಮೀಸಲಾತಿಯನ್ನು ನೀಡಿದರೆ, ಪ್ರವರ್ಗ 1 ಮತ್ತು 2ಎ ಮೀಸಲಾತಿ ಪಟ್ಟಿಯಲ್ಲಿರುವ 197 ಜಾತಿಗಳಿಗೆ ಅನ್ಯಾಯವಾಗುತ್ತದೆ. ರಾಜ್ಯದಲ್ಲಿ ಪ್ರಬಲರಿಗೆ ಮೀಸಲಾತಿ ನೀಡಲು ಮುಂದಾಗುತ್ತಿದ್ದು, ಅದು ಸಂವಿಧಾನಬಾಹಿರ ಕ್ರಮವಾಗಿದೆ ಎಂದು ಹೇಳಿದರು.
ಸರಕಾರ ಸ್ವಯಂ ಪ್ರೇರಿತವಾಗಿ ಪ್ರವರ್ಗ 3ಎ ಮತ್ತು 3ಬಿನಲ್ಲಿ ಬರುವ ಎರಡು ಬಲಿಷ್ಠ ಸಮುದಾಯಗಳಿಗೆ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ, ತಲಾ 500 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದಕ್ಕೆ ಹಿಂದುಳಿದ ಅತಿ ಸಣ್ಣ ಸಮುದಾಯಗಳು ಯಾವುದೇ ರೀತಿ ವಿರೋಧ ವ್ಯಕ್ತಪಡಿಸಿಲ್ಲ ಎಂದು ತಿಳಿಸಿದರು.
ಮೀಸಲಾತಿ ಎನ್ನುವುದು ಬಡತನ ನಿರ್ಮೂಲನ ಕಾರ್ಯಕ್ರಮವಲ್ಲ. ಪ್ರಾತಿನಿಧ್ಯವೇ ಇಲ್ಲದ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಮೂಲಕ ಪ್ರಾತಿನಿಧ್ಯ ನೀಡುವುದಷ್ಟೇ ಮೀಸಲಾತಿಯ ಮೂಲ ಆಶಯವಾಗಿದೆ. ಸಂವಿಧಾನದ ಈ ಆಶಯಕ್ಕೆ ಧಕ್ಕೆ ಬಾರದಂತೆ ಸರಕಾರ ಎಚ್ಚರವಹಿಸಬೇಕು ಎಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ, ಖಜಾಂಜಿ ಎಲ್.ಎ. ಮಂಜುನಾಥ್ ಉಪಸ್ಥಿತರಿದ್ದರು.
ಇಂದು ಅಧಿಕಾರ, ಭೂಮಿ, ಮಠಗಳು, ಮಡಿಕಲ್ ಕಾಲೇಜುಗಳು, ಇಂಜಿನಿಯರಿಂಗ್‍ನಂತಹ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಪ್ರಬಲ ಸಮುದಾಯಗಳು ಅಸಹಾಯಕ ಸಮುದಾಯಗಳ ಅನ್ನವನ್ನು ಕಸಿಯಲು ಮುಂದಾಗುತ್ತಿವೆ. ಈ ನಿಟ್ಟಿನಲ್ಲಿ ಅಸಹಾಯಕ ಸಮುದಾಯಗಳ ರಕ್ಷಣೆ ಮಾಡುವುದು ಸರಕಾರದ ಕರ್ತವ್ಯ ಆಗಬೇಕು. ಯಾವುದೇ ಮುಂದುವರೆದ ಸಮುದಾಯ ಸರಕಾರ ಮೇಲೆ ಒತ್ತಡ ಹಾಕಿದ ಮಾತ್ರಕ್ಕೆ, ಸರಕಾರ ಮಣಿದು ಆಯೋಗ ರಚನೆಗೆ ಆದೇಶ ನೀಡಬಾರದು.
- ಎಂ.ಸಿ.ವೇಣುಗೋಪಾಲ್, ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ







