ಕ್ರಿಸ್ಮಸ್ ಸಂದರ್ಭ ಮನೆಯಲ್ಲಿರಿ ಶಾಂಘೈ ನಿವಾಸಿಗಳಿಗೆ ಅಧಿಕಾರಿಗಳ ಸೂಚನೆ

ಬೀಜಿಂಗ್: ಚೀನಾದ್ಯಂತ ಕೋವಿಡ್-19(Covid-19) ಸೋಂಕು ತೀವ್ರಗತಿಯಲ್ಲಿ ಉಲ್ಬಣಗೊಳ್ಳುತ್ತಿರುವಂತೆಯೇ, ಈ ವಾರಾಂತ್ಯದ ಕ್ರಿಸ್ಮಸ್(Christmas) ಸಂದರ್ಭ ಮನೆಯಿಂದ ಹೊರತೆರಳಬಾರದು ಎಂದು ದೇಶದ ಅತ್ಯಧಿಕ ಜನಸಂಖ್ಯೆಯ ರಾಜ್ಯ ಶಾಂಘೈಯ ನಿವಾಸಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಜತೆಗೆ, ತಾಪಮಾನ ಕನಿಷ್ಟ ಮಟ್ಟಕ್ಕೆ ಇಳಿದಿರುವುದರಿಂದ ಯುವಜನತೆ ಒಂದೆಡೆ ಗುಂಪು ಸೇರಬಾರದು ಎಂದು ಶಾಂಘೈ ಪುರಸಭೆ ಆರೋಗ್ಯ ಇಲಾಖೆ ಸೂಚಿಸಿದೆ.
ಚೀನಾದಲ್ಲಿ ಕ್ರಿಸ್ಮಸ್ ಅನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುವುದಿಲ್ಲ. ಆದರೆ ಯುವಜೋಡಿಗಳು ಹಾಗೂ ಕೆಲವು ಕುಟುಂಬಗಳು ರಜಾದಿನವನ್ನು ಒಟ್ಟಿಗೆ ಕಳೆಯುವುದು ಸಾಮಾನ್ಯವಾಗಿದೆ. ಕ್ರಿಸ್ಮಸ್ ಸಂದರ್ಭ ಶಾಂಘೈಯ ನಾಂಜಿಂಗ್ ವೆಸ್ಟ್ರೋಡ್ ನ ಐಷಾರಾಮಿ ಶಾಪಿಂಗ್ ಪ್ರದೇಶದಲ್ಲಿ ಕ್ರಿಸ್ಮಸ್ ಗೆ ಸಂಬಂಧಿಸಿದ ಮಾರುಕಟ್ಟೆಯನ್ನು ಆರಂಭಿಸಲಾಗುತ್ತದೆ. ಅಲ್ಲದೆ ರೆಸ್ಟಾರೆಂಟ್ಗಳು, ಶಾಪಿಂಗ್ ಮಾಲ್ ಗಳು ಈ ಅವಧಿಯಲ್ಲಿ ಗ್ರಾಹಕರಿಂದ ತುಂಬಿರುತ್ತದೆ. ಆದರೆ ಈ ವರ್ಷ ಒಮೈಕ್ರಾನ್ ಸೋಂಕು(Omicron infection) ಈ ಎಲ್ಲಾ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದೆ.
ಚೀನಾದಲ್ಲಿ ಜನರ ಪ್ರತಿಭಟನೆಗೆ ಮಣಿದ ಆಡಳಿತ ತನ್ನ ಶೂನ್ಯ ಕೋವಿಡ್ ನೀತಿಯನ್ನು ದಿಢೀರನೆ ರದ್ದುಗೊಳಿಸಿದ ಬೆನ್ನಲ್ಲೇ ಒಮೈಕ್ರಾನ್ ರೂಪಾಂತರ ಸೋಂಕು ಉಲ್ಬಣಿಸಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯ ಜತೆಗೆ, ಅಗತ್ಯದ ಔಷಧ, ಲಸಿಕೆಯ ಕೊರತೆಯೂ ಕಾಣಿಸಿಕೊಂಡಿದೆ. ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳನ್ನು ತರಾತುರಿಯಲ್ಲಿ ಆರಂಭಿಸಲಾಗುತ್ತಿದೆ.
ಚೀನಾದಲ್ಲಿ ದಿನಕ್ಕೆ ಒಂದು ಮಿಲಿಯನ್ ಗೂ ಅಧಿಕ ಕೋವಿಡ್ ಸೋಂಕು ಪ್ರಕರಣ ಮತ್ತು ದಿನಕ್ಕೆ 5 ಸಾವಿರಕ್ಕೂ ಅಧಿಕ ಸಾವು ಸಂಭವಿಸುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ. ಆದರೆ ಸರಕಾರ ಇದಕ್ಕಿಂತ ಭಿನ್ನವಾದ ಅಂಕಿ ಅಂಶ ನೀಡುತ್ತಿದೆ ಎಂದು ಬ್ರಿಟನ್ ಮೂಲದ ಆರೋಗ್ಯ ಅಂಕಿಅಂಶ ಸಂಸ್ಥೆ ‘ಏರ್ಫಿನಿಟಿ’ ಹೇಳಿದೆ.
ಅದಾಗ್ಯೂ, ದೇಶದಲ್ಲಿ 4,128 ದೈನಂದಿನ ರೋಗಲಕ್ಷಣದ ಕೋವಿಡ್ ಸೋಂಕು ಪ್ರಕರಣ ಮತ್ತು ಸತತ 4ನೇ ದಿನವೂ ಕೋವಿಡ್ ನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಶನಿವಾರ ಮಾಹಿತಿ ನೀಡಿದೆ. ಈ ವಾರದಲ್ಲಿ ಚೀನಾದಲ್ಲಿ ಒಂದೇ ದಿನ 37 ದಶಲಕ್ಷ ಜನತೆಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಬ್ಲೂಮ್ಬರ್ಗ್ ನ್ಯೂಸ್ ವರದಿ ಮಾಡಿದೆ.
ಕ್ವಿಂಗ್ಡವೊ ನಗರದಲ್ಲಿ ದೈನಂದಿನ ಸೋಂಕಿನ ಪ್ರಕರಣ 5 ಲಕ್ಷದ ಗಡಿ ದಾಟಿದ್ದರೆ, ವುಹಾನ್ ನಲ್ಲಿಯೂ ಕೋವಿಡ್ ಪ್ರಕರಣ ಉಲ್ಬಣಿಸಿದೆ. ಸ್ಥಳೀಯ ಬ್ಲಡ್ ಬ್ಯಾಂಕ್ ನಲ್ಲಿ ಕೇವಲ 4000 ಯುನಿಟ್ ರಕ್ತದ ಸಂಗ್ರಹವಿದ್ದು, ಜನತೆ ರಕ್ತದಾನ ಮಾಡಲು ಮುಂದೆ ಬರುವಂತೆ ಅಧಿಕಾರಿಗಳು ವಿನಂತಿಸಿದ್ದಾರೆ.







