ಪರಿಷತ್‌ನ ಹೊಸ ನಿಯಮ ಜಾರಿಗೆ ಆಕ್ಷೇಪ: ಅಧ್ಯಕ್ಷರ ನಡವಳಿಕೆಗೆ ಅಸಮಾಧಾನ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೇವಲ ಶೇ.25ರಷ್ಟು ಪ್ರತಿನಿಧಿಗಳ ನೋಂದಣಿ

ಬೆಂಗಳೂರು, ಡಿ.25: 2023ರ ಜನವರಿ 6, 7 ಮತ್ತು 8ರಂದು ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರಿಷತ್ ಸನ್ನದ್ಧಗೊಂಡಿರುವ ಬೆನ್ನಲ್ಲೇ, ಅಧ್ಯಕ್ಷರ ನಡವಳಿಕೆ, ಸಮ್ಮೇಳನ ಪ್ರತಿನಿಧಿ ನೋಂದಣಿ ಕುರಿತಂತೆ ಹೊಸ ನಿಯಮ ಜಾರಿಗೊಳಿಸಿರುವ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ಬರುವವರು ಕಡ್ಡಾಯವಾಗಿ ಪರಿಷತ್‌ನ ಸದಸ್ಯರಾಗಿರಬೇಕು. ಆ್ಯಪ್ ಮೂಲಕವೇ ಮೊದಲು ಸದಸ್ಯತ್ವ ಪಡೆದು, ನಂತರ ಪ್ರತಿನಿಧಿಯಾಗಿ ನೋಂದಣಿ ಮಾಡಿಕೊಳ್ಳಬೇಕು ಎಂಬುದಾಗಿ ಕಸಾಪ, ಹೊಸ ನಿಯಮ ತಂದಿರುವುದರಿಂದ ಈವರೆಗೆ ಕೇವಲ ನಾಲ್ಕೂವರೆ ಸಾವಿರ ನೋಂದಣಿಗಳಾಗಿವೆ. ಇದರಿಂದ ಆ್ಯಪ್ ಬಳಕೆ ಮತ್ತು ಕಸಾಪದ ಕಡ್ಡಾಯ ಸದಸ್ಯತ್ವದ ಕುರಿತು ಪರಿಷತ್, ಸಾರ್ವಜನಿಕರ ಮತ್ತು ಸಾಹಿತ್ಯಾಸಕ್ತರ ಕೆಂಗಣ್ಣಿಗೆ ಗುರಿಯಾಗಿದೆ.
ಇದೇ ಮೊದಲಿಗೆ ಕಸಾಪ, ಸಮ್ಮೇಳ ನಕ್ಕೆಂದೇ ಪ್ರತ್ಯೇಕ ಆ್ಯಪ್ ತಂದು ಕಳೆದ ಡಿ.1ರಿಂದ ಡಿ.18ರವರೆಗೆ ಆನ್‌ಲೈನ್ ನೋಂದಣಿಗೆ ಅವಕಾಶ ಕಲ್ಪಿಸಿತ್ತು. ಸುಮಾರು 20 ಸಾವಿರ ಸಮ್ಮೇಳನ ಪ್ರತಿನಿಧಿಗಳ ನೋಂದಣಿಗೆ ಅನುವು ಮಾಡಿಕೊಡುವ ಮುಖೇನ ಒಬ್ಬರಿಗೆ 500 ರೂ. ಶುಲ್ಕವನ್ನು ನಿಗದಿಪಡಿಸಿತ್ತು. ಆದರೆ, ಇಲ್ಲಿಯವರೆಗೆ ಶೇ.25ರಷ್ಟು ಪ್ರತಿನಿಧಿಗಳು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ.
ಗ್ರಾಮೀಣ ಭಾಗದ ಬಹುತೇಕ ಜನರಿಗೆ ಆ್ಯಪ್ ಬಳಕೆ ಮೂಲಕ ನೋಂದಣಿ ಮಾಡಲು ಬರುವುದಿಲ್ಲ. ಕೆಲವೆಡೆ ನೆಟ್‌ವರ್ಕ್ ಸಮಸ್ಯೆಗಳೂ ಎದುರಾಗುತ್ತವೆ. ಅಲ್ಲದೆ ಸಾಕಷ್ಟು ಜನರು ಸ್ಮಾರ್ಟ್‌ಫೋನ್ ಬಳಕೆ ಮಾಡುವುದಿಲ್ಲ. ಆದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರತಿನಿಧಿಗಳ ನೋಂದಣಿಯಾಗುತ್ತಿಲ್ಲ ಎಂಬ ಪ್ರತಿರೋಧಗಳು ಸಾರ್ವಜನಿಕರಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ ಕಸಾಪ, ನೋಂದಣಿ ಅವಧಿಯನ್ನು ಡಿ.25ರವರೆಗೆ ವಿಸ್ತರಿಸಿದೆ. ಅಲ್ಲದೆ ಕಸಾಪ ಕಚೇರಿಗಳಲ್ಲಿ ಶುಲ್ಕ ಭರಿತ ನೋಂದಣಿಗೂ ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರ ನೀರಸ ಪ್ರತಿಕ್ರಿ ಯೆಗೆ ಅಧ್ಯಕ್ಷರೇ ನೇರ ಕಾರಣ ಎನ್ನಲಾಗುತ್ತಿದ್ದು, ಸಾಹಿತ್ಯ ಸಮ್ಮೇಳನದ ತಯಾರಿಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲಾ ಕಸಾಪ ಅಧ್ಯಕ್ಷರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಯಾರ ಸಲಹೆ-ಸೂಚನೆಗಳನ್ನು ಪರಿಗಣಿಸದೆ ಇಡೀ ಕಸಾಪವನ್ನು ಏಕವ್ಯಕ್ತಿ ಕೇಂದ್ರಿತವಾಗಿ ಮಾಡಲಾಗಿದೆ ಎನ್ನುವ ಆರೋಪವೂ ಕೇಳಿ ಬಂದಿದೆ.
ಪ್ರತಿನಿಧಿಗಳ ನೋಂದಣಿ ವಿರಳವಾದದ್ದನ್ನು ಮನಗಂಡ ಕಸಾಪ, ಆಫ್‌ಲೈನ್ ನೋಂದಣಿಯಲ್ಲಿ ಕಸಾಪ ಸದಸ್ಯತ್ವ ಕಡ್ಡಾಯ ಎಂಬ ನಿಯಮವನ್ನು ಸಡಿಲಿಸಿದೆ. ಆನ್‌ಲೈನ್ ನೋಂದಣಿಯಲ್ಲೂ ನಿಯಮ ಸಡಿಲಿಸಬೇಕು ಎಂಬುದು ಸಾಹಿತ್ಯಾಸಕ್ತರ ಒತ್ತಾಯವಾಗಿದೆ. ಪುಸ್ತಕ ಮಾರಾಟ ಮತ್ತು ವಾಣಿಜ್ಯ ಮಳಿಗೆಗೆ ಸಂಬಂಧಿಸಿ ಸುಮಾರು 500 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಹೆಚ್ಚಿನ ಬೇಡಿಕೆಯಿಂದ 100 ಹೆಚ್ಚುವರಿ ಸ್ಟಾಲ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
‘ಸಾರ್ವಜನಿಕರಿಗೆ ಪೂರಕವಾಗಿ ಕಸಾಪ ಕಾರ್ಯನಿರ್ವಹಿಸುತ್ತದೆ’ ಎಂದು ಕಸಾಪ ಚುನಾವಣಾ ಸಂದರ್ಭದಲ್ಲಿ ಹೇಳಿದ್ದ ಅಧ್ಯಕ್ಷ ಮಹೇಶ್ ಜೋಶಿ ಅವರು, ಅಧ್ಯಕ್ಷರಾದ ಬಳಿಕ ಹೊಸ ನಿಯಮಗಳನ್ನು ತರುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.
ಈ ಕುರಿತು ಮಾತನಾಡಿರುವ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕಸಾಪ ಅಧ್ಯಕ್ಷರ ಧೋರಣೆಯೇ ಜನಪರವಾದುದ್ದಲ್ಲ. ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ವತಃ ಪ್ರಭುವಾದರೂ, ಜನಪರ ನೆಲೆಯೊಳಗೆ ಸಾಹಿತ್ಯವನ್ನು ಬೆಳೆಸಿ ಜನಮುಖಿಯಾಗಿಸಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ಪ್ರಜಾಪ್ರಭುತ್ವದ ಮಾದರಿಯೊಳಗೆ ಪರಿ ಷತ್ ಅನ್ನು ಕಟ್ಟಿದ್ದರು. ಆದ್ದರಿಂದ ಅದು ಪ್ರಜೆಗಳ ಸಾಹಿತ್ಯ ಪರಿಷತ್ ಆಗಿತ್ತು.
ಆದರೆ ಈಗಿರುವ ಅಧ್ಯಕ್ಷರು ಪ್ರಭುಶಾಹಿಯ ಮನೋಧರ್ಮವನ್ನು ಇಟ್ಟುಕೊಂಡಂತೆ ವರ್ತಿಸುತ್ತಿರುವುದು ವಿಷಾದನೀಯ. ಅಧ್ಯಕ್ಷರ ಪ್ರತಿಯೊಂದು ನಡವಳಿಕೆಯೂ ಕೂಡ ಜನರಿಂದ ಸಾಹಿತ್ಯ ಪರಿಷತ್ತನ್ನು ದೂರವಾಗಿಸುವ ನಿಟ್ಟಿನಲ್ಲಿದೆ. ಅಸಾಹಿತ್ಯಿಕ ಧೋರಣೆಯೊಳಗೆ ಸಾಹಿತ್ಯ ಪರಿಷತ್ ನಡೆಯುತ್ತಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ ವಿಫಲವಾಯಿತಲ್ಲ ಎನ್ನುವ ಕೊರಗು ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇವೆಲ್ಲದರ ನಡುವೆ ಸಾಹಿತ್ಯದೊಳಗೆ ರಾಜಕೀಯ ಪ್ರವೇಶಕ್ಕೆ ಕಡಿವಾಣ ಹಾಕಿ, ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯಾಸಕ್ತರು, ಜನರಿಂದ ದೂರ ಉಳಿಯುತ್ತಿರುವುದನ್ನು ತಪ್ಪಿಸುವ ಜವಾಬ್ದಾರಿ ಅಧ್ಯಕ್ಷರ ಮೇಲಿದೆ.
‘ಸಾರ್ವಜನಿಕರಿಗೆ ಪೂರಕವಾಗಿ ಕಸಾಪ ಕಾರ್ಯನಿರ್ವಹಿಸುತ್ತದೆ’ ಎಂದು ಕಸಾಪ ಚುನಾವಣಾ ಸಂದರ್ಭದಲ್ಲಿ ಹೇಳಿದ್ದ ಅಧ್ಯಕ್ಷ ಮಹೇಶ್ ಜೋಶಿ ಅವರು, ಅಧ್ಯಕ್ಷರಾದ ಬಳಿಕ ಹೊಸ ನಿಯಮಗಳನ್ನು ತರುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.
ಸಂಘಪರಿವಾರಕ್ಕೆ ಸಮ್ಮೇಳನದಲ್ಲಿ ವಿಶೇಷ ಆಹ್ವಾನ ?
ಬಿಜೆಪಿ, ಸಂಘ ಪರಿವಾರದೊಂದಿಗೆ ಅಧ್ಯಕ್ಷರು ನಿರಂತರ ಸಂಪರ್ಕ ಹೊಂದಿದ್ದಾರೆ ಎನ್ನುವುದಕ್ಕೆ ಕಸಾಪ ಚುನಾವಣೆಯೇ ಸಾಕ್ಷಿಯಾಗಿದೆ. ತಮ್ಮ ಚುನಾವಣಾ ಸಮಯದಲ್ಲಿ ಶ್ರಮಿಸಿದ್ದ ಕೆಲವು ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಹಾವೇರಿಯ ಸಮ್ಮೇಳನದಲ್ಲಿ ವಿಶೇಷ ಆಹ್ವಾನ ಮತ್ತು ಆತಿಥ್ಯವನ್ನು ಕಲ್ಪಿಸುವ ಸಾಧ್ಯತೆಯಿದೆ ಎಂಬ ಎಲ್ಲೆಡೆ ಸುದ್ದಿಗಳು ಹರಿದಾಡುತ್ತಿದ್ದು, ಇದಕ್ಕೆ ಅಧ್ಯಕ್ಷರು ಸ್ಪಷ್ಟನೆ ನೀಡಬೇಕಿದೆ.
► ಸದಸ್ಯತ್ವದ ಹೆಸರಿನಲ್ಲಿ ಹಣ ವಸೂಲಿ: ಆರೋಪ
ಸಮ್ಮೇಳನಗಳಿಗೆ ಸರಕಾರ ಕೋಟ್ಯಂತರ ರೂ. ಅನುದಾನ ನೀಡುತ್ತದೆ. ಆದರೂ ಜನರಿಂದ ಸದಸ್ಯತ್ವದ ಹೆಸರಿನಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಇದರಿಂದ ಸಾಹಿತ್ಯದ ಒಲವಿರುವ ಸಾಕಷ್ಟು ಜನರು ಸದಸ್ಯತ್ವ ಪಡೆಯಲಾಗದೆ ಸಮ್ಮೇಳನಗಳಿಂದ ದೂರ ಉಳಿಯುತ್ತಿದ್ದಾರೆ. ಕನ್ನಡ ಸಮ್ಮೇಳನಗಳು ರಾಜಕೀಯ ಸಮಾವೇಶಗಳಾಗದೆ ಸಾಹಿತ್ಯ ಜಾತ್ರೆಗಳಂತಾಗಬೇಕು. ಪರಿಷತ್‌ನ ಅಧ್ಯಕ್ಷರ ಆಯ್ಕೆಯೇ ಅಪ್ರಜಾಸತ್ತಾತ್ಮಕವಾಗಿದೆ. ಕಸಾಪ ಚುನಾವಣೆ ಪಕ್ಷ ರಾಜಕೀಯ ಚುನಾವಣೆಯ ರೀತಿಯಲ್ಲಿ ನಡೆದಿರುವುದು ಖಂಡನೀಯ.
- ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ