ಕೃಷ್ಣಾಪುರ ಜಲೀಲ್ ಹತ್ಯೆ ಪ್ರಕರಣ: 2 ದಿನ ನಿಷೇಧಾಜ್ಞೆ ಜಾರಿ, ಬಿಗಿ ಬಂದೋಬಸ್ತ್

ಸುರತ್ಕಲ್, ಡಿ.25: ಕೃಷ್ಣಾಪುರ 4ನೆ ಬ್ಲಾಕ್ ನೈತಂಗಡಿ ಬಳಿ ಶನಿವಾರ ರಾತ್ರಿ ನಡೆದ ಕೃಷ್ಣಾಪುರ 9ನೇ ಬ್ಲಾಕ್ ನಿವಾಸಿ ಅಬ್ದುಲ್ ಜಲೀಲ್ ಹತ್ಯೆಯ ಹಿನ್ನೆಲೆಯಲ್ಲಿ ಸುರತ್ಕಲ್ ಪರಿಸರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್, ಪಣಂಬೂರು, ಬಜ್ಪೆ, ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು(ಡಿ.25) ಬೆಳಗ್ಗೆ 6ರಿಂದ ಡಿ.27ರ ಬೆಳಗ್ಗೆ 6ರವರೆಗೆ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಈ ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿ ಇರುವ ಕೈಗಾರಿಕೆಗಳು, ವಾಣಿಜ್ಯ ಸಂಕೀರ್ಣಗಳು ಹಾಗೂ ಕಚೇರಿಗಳ ಕೆಲಸದ ಪಾಳಿಯನ್ನು ಸಂಜೆ 6ಕ್ಕೆ ಬದಲಾಯಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ರಾತ್ರಿ 6ರ ನಂತರದ ಪಾಳಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಅನಗತ್ಯವಾಗಿ ರಸ್ತೆಗಳಲ್ಲಿ ಅಡ್ಡಾಡದಂತೆ ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
ಅದೇರೀತಿ ಈ ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 10ರಿಂದ ಡಿ.27ರಂದು ಬೆಳಗ್ಗೆ 10ರವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರನ್ನು ನಗರ ಪೊಲೀಸ್ ಕಮಿಷನರ್ ಕೋರಿದ್ದಾರೆ.
ಸುರತ್ಕಲ್ ಜಂಕ್ಷನ್ ಸೇರಿ ಆಯಕಟ್ಟಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. 10ಕ್ಕೂ ಹೆಚ್ಚಿನ KSRP ತುಕಡಿಗಳನ್ನು ನಿಯೋಜಿಸಲಾಗಿದೆ.
ಶನಿವಾರ ರಾತ್ರಿ ಕೃಷ್ಣಾಪುರ 4ನೆ ಬ್ಲಾಕ್ ನೈತಂಗಡಿ ಬಳಿ ಜಲೀಲ್ ಅವರ ಫ್ಯಾನ್ಸಿ ಮತ್ತು ಚಪ್ಪಲಿಯ ಅಂಗಡಿಗೆ ನುಗ್ಗಿದ್ದ ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ಅವರಿಗೆ ಚೂರಿಯಿಂದ ಇರಿದಿದ್ದರು. ತಕ್ಷಣವೇ ಅಕ್ಕ ಪಕ್ಕದ ಅಂಗಡಿಯವರು ಹಾಗೂ ಸ್ಥಳೀಯರು ಜಲೀಲ್ ಅವರನ್ನು ಮುಕ್ಕದ ಶ್ರೀನಿವಾಸ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಅದಾಗಲೇ ಅವರು ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದರು.