ಜಲೀಲ್ ಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಎಸ್ಕೆಎಸ್ಸೆಸ್ಸೆಫ್ ಒತ್ತಾಯ

ಮಂಗಳೂರು, ಡಿ.25: ಸುರತ್ಕಲ್ ಪರಿಸರದ ಕೃಷ್ಣಾಪುರ 4ನೇ ಬ್ಲಾಕ್‌ನಲ್ಲಿ ನಡೆದ ಜಲೀಲ್ ಕೊಲೆ ಪ್ರಕರಣವನ್ನು ಖಂಡಿಸಿರುವ ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಅಮಾಯಕ ವರ್ತಕ ಜಲೀಲ್‌ರವರ ಕೊಲೆಯು ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್‌ಗಿರಿಯನ್ನು ಕಡೆಗಣಿಸಿದ ಪ್ರತಿಫಲವಾಗಿದೆ ಎಂದು ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಸೈಯದ್ ಅಮೀರ್ ತಂಙಳ್ ಅಭಿಪ್ರಾಯಪಟ್ಟಿದ್ದಾರೆ.
ಕೆಲ ತಿಂಗಳ ಹಿಂದೆ ನಡೆದ ಸರಣಿ ಕೊಲೆ ಪ್ರಕರಣಗಳ ನಂತರ ಕೋಮು ಸೂಕ್ಷ್ಮ ಪದೇಶವಾಗಿದ್ದ ಜಿಲ್ಲೆ ನಿಧಾನವಾಗಿ ಯಥಾ ಸ್ಥಿತಿಗೆ ಮರಳುತ್ತಿರುವುದರ ನಡುವೆಯೇ ಕೆಲ ಕಿಡಿಗೇಡಿಗಳ ನೈತಿಕ ಪೊಲೀಸ್‌ಗಿರಿ, ಗುಂಪುದಾಳಿ, ಕೋಮು ದ್ವೇಷ ಪ್ರಕರಣಗಳು ಪದೇ ಪದೇ ನಡೆಸುತ್ತಿವೆ. ಆದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ಇರುವುದರಿಂದ ಆರೋಪಿಗಳು ರಾಜಾರೋಷವಾಗಿ ತಿರುಗಾಡುವಂತಾಗಿದೆ. ಇದು ಆರೋಪಿಗಳಿಗೆ ಮಾನಸಿಕ ಬಲ ತುಂಬಿದ್ದು ಇದೀಗ ಮತ್ತೆ ಕೊಲೆಯ ಹಂತಕ್ಕೆ ಬೆಳೆದು ನಿಂತಿದೆ. ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳದೇ ಹೋದರೆ ಪ್ರಕರಣವು ರಾಜಕೀಯ ತಿರುವು ಪಡೆದುಕೊಂಡು ಅಪರಾಧಿಗಳು ತಪ್ಪಿಸಿಕೊಳ್ಳುವ ಅಪಾಯವಿದೆ. ಆದ್ದರಿಂದ ಅಪರಾಧಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
ಕೊಲೆಗಡುಕರು ಯಾರೇ ಆದರೂ, ಯಾವುದೇ ಒತ್ತಡಗಳಿಗೆ ಮಣಿಯದೆ ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ಸರಕಾರವು ಸೂಕ್ತ ಪರಿಹಾರ ಒದಗಿಸಬೇಕು ಎಂದು ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಸಹ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ ದ.ಕ. ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಬ್ದುಲ್ ಖಾದರ್ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.