ಜಲೀಲ್ ಹತ್ಯೆ ಪ್ರಕರಣ | ಮನೆಗೆ ತಲುಪಿದ ಮೃತದೇಹ: ಪಂಜಿಮೊಗರಿನಲ್ಲಿ ಅಂತ್ಯ ಸಂಸ್ಕಾರ

ಸುರತ್ಕಲ್, ಡಿ.25: ಕಳೆದ ರಾತ್ರಿ ಕೃಷ್ಣಾಪುರ 4ನೆ ಬ್ಲಾಕ್ ನೈತಂಗಡಿ ಬಳಿ ದುಷ್ಕರ್ಮಿಗಳಿಂದ ಹತ್ಯೆಯಾದ ಕೃಷ್ಣಾಪುರ 9ನೇ ಬ್ಲಾಕ್ ನಿವಾಸಿ ಅಬ್ದುಲ್ ಜಲೀಲ್ ಅವರ ಮೃತದೇಹ ರವಿವಾರ ಬೆಳಗ್ಗೆ 10:30ರ ಸುಮಾರಿಗೆ ಅವರ ಮನೆ ತಲುಪಿದೆ.
ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನೆರವೇರಿಸಿದ ಬಳಿಕ ಮೃತದೇಹವನ್ನು ಮೃತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಆ್ಯಂಬುಲೆನ್ಸ್ ಮೂಲಕ ಮೃತದೇಹವನ್ನು ಜಲೀಲ್ ಅವರ ಮನೆಗೆ ಕರೆತರಲಾಯಿತು. ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಮೃತದೇಹದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಅಂತಿಮ ವಿಧಿವಿಧಾನದ ಬಳಿಕ ಅಂತ್ಯ ಸಂಸ್ಕಾರವು ಕೂಳೂರು ಪಂಜಿಮೊಗರಿನ ಜುಮಾ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮನೆ ಪರಿಸರದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಈ ನಡುವೆ ಮಾಧ್ಯಮದವರ ಜೊತೆ ಮಾತನಾಡಿದ ಜಲೀಲ್ ಅವರ ಸಹೋದರ ಮುಹಮ್ಮದ್, "ಯಾರೊಂದಿಗೂ ದ್ವೇಷ ಹೊಂದಿರದ ಜಲೀಲ್ ಎಲ್ಲ ಸಮುದಾಯದವರಿಗೂ ಬೇಕಾದವರಾಗಿದ್ದರು. ಯಾವುದೇ ಸಂಘಟನೆಗಳಲ್ಲಿ ಅವರು ಗುರುತಿಸಿಕೊಂಡಿರಲಿಲ್ಲ. ತಾನಾಯಿತು, ತನ್ನ ಪಾಡಾಯಿತು ಎಂಬಂತೆ ಇದ್ದರು. ರಾಜಕೀಯ ಕಾರಣಕ್ಕಾಗಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಅನಿಸುತ್ತಿದೆ. ಈ ಕೊಲೆ ಯಾರೇ ಮಾಡಿದ್ದರೂ, ನೈಜ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು" ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕೃಷ್ಣಾಪುರ ಜಲೀಲ್ ಹತ್ಯೆ ಪ್ರಕರಣ: 2 ದಿನ ನಿಷೇಧಾಜ್ಞೆ ಜಾರಿ, ಬಿಗಿ ಬಂದೋಬಸ್ತ್