ಅಬ್ದುಲ್ ಜಲೀಲ್ ಹತ್ಯೆ ಸಿಬಿಐ ತನಿಖೆಗೆ ಶಾಫಿ ಸಅದಿ ಒತ್ತಾಯ

ಬೆಂಗಳೂರು, ಡಿ.25: ಮಂಗಳೂರು ನಗರ ಹೊರವಲಯದಲ್ಲಿ ಅಬ್ದುಲ್ ಜಲೀಲ್ ಎಂಬ ಯುವಕನ ಕೊಲೆ ನಡೆದಿರುವುದು ಅತ್ಯಂತ ಖಂಡನೀಯ. ಅಲ್ಲದೆ, ಕರಾವಳಿಯಲ್ಲಿ ನಡೆದಿರುವ ಇಂತಹ ಘಟನೆಗಳನ್ನು ಸಿಬಿಐ ತನಿಖೆಗೊಳಪಡಿಸಬೇಕು ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಆಗ್ರಹಿಸಿದ್ದಾರೆ.
"ವಾರ್ತಾಭಾರತಿ" ಪ್ರತಿನಿಧಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಇಂತಹ ಘಟನೆಗಳಿಂದ ಮೃತಪಡುವ ಸಂತ್ರಸ್ತರ ಕುಟುಂಬಗಳಿಗೆ ಸರಕಾರ ತಲಾ ಒಂದು ಕೋಟಿ ರೂ. ಪರಿಹಾರ ನೀಡಬೇಕು. ಅಬ್ದುಲ್ ಜಲೀಲ್ ಕುಟುಂಬಕ್ಕೆ ಸಾಂತ್ವನ ಹೇಳುವುದಾಗಿ ತಿಳಿಸಿದರು.
ಕರಾವಳಿ ಭಾಗದಲ್ಲಿ ಚುನಾವಣೆಗಳು ಸಮೀಪಿಸುವಾಗ ಹಾಗೂ ಚುನಾವಣೆಗಳ ನಂತರ ಕೊಲೆಗಳು ಆಗುತ್ತಿರುವುದು ದುರ್ದೈವ. ದ್ವೇಷ ಮನುಷ್ಯನ ಪ್ರಾಣ ಕಳೆಯುವಷ್ಟು ಕ್ರೂರವಾಗುತ್ತಿದೆ. ನಾಗರಿಕ ಸಮಾಜ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದು ಶಾಫಿ ಸಅದಿ ಮನವಿ ಮಾಡಿದರು.
ಮಂಗಳೂರಿನಲ್ಲಿ ಇತ್ತೀಚೆಗಷ್ಟೇ ಫಾಝಿಲ್, ಪ್ರವೀಣ್ ನೆಟ್ಟಾರ್, ಮಸೂದ್ ಕೊಲೆಗಳು ಆಗಿವೆ. ಇದೀಗ ಜಲೀಲ್ ಹತ್ಯೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.







