ವೃದ್ಧ ದಂಪತಿಯ ದರೋಡೆಗೈದು ಕೊಲೆ: 'ಮಾಸ್ಟರ್ ಮೈಂಡ್' 12 ವರ್ಷದ ಬಾಲಕನ ಬಂಧನ

ಗಾಝಿಯಾಬಾದ್: ಉತ್ತರ ಪ್ರದೇಶದ ಗಾಝಿಯಾಬಾದ್‌ನಲ್ಲಿ ವೃದ್ಧ ದಂಪತಿಯನ್ನು ದರೋಡೆ ಮಾಡಿ ಕೊಲೆಗೈದ ಆರೋಪದ ಮೇಲೆ 12 ವರ್ಷದ ಬಾಲಕ ಹಾಗೂ ಇತರ ಇಬ್ಬರನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 22 ರಂದು 60 ವರ್ಷದ ಇಬ್ರಾಹಿಂ ಅವರು ತಮ್ಮ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದರೆ, ಅವರ ಪತ್ನಿ ಹಝ್ರಾ ಅವರು ಶೌಚಾಲಯದ ಬಳಿ ಕುತ್ತಿಗೆಗೆ ಬಟ್ಟೆ ಸುತ್ತಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಪೊಲೀಸರ ಪ್ರಕಾರ, ವೃದ್ಧ ದಂಪತಿಯ ದರೋಡೆ ಹಾಗೂ ಕೊಲೆಯ ಹಿಂದಿನ "ಮಾಸ್ಟರ್ ಮೈಂಡ್'' 12 ವರ್ಷದ ಬಾಲಕನಾಗಿದ್ದಾನೆ. ಅಪ್ರಾಪ್ತ ವಯಸ್ಸಿನ ಬಾಲಕ, ವಯಸ್ಕ ದಂಪತಿಗೆ ಪರಿಚಿತನಾಗಿದ್ದ ಹಾಗೂ ಇಬ್ರಾಹಿಂ ಅವರ ಬಳಿ ಸಾಕಷ್ಟು ಹಣ ಇದೆ ಎಂದು ತಿಳಿದ ನಂತರ ಲೂಟಿಯ ಪ್ರಯತ್ನಕ್ಕೆ ಇತರ ಮೂವರನ್ನು ಸೇರಿಸಿಕೊಂಡಿದ್ದ ಎಂದು ವರದಿಯಾಗಿದೆ. ಆದರೆ, ದರೋಡೆ ಯತ್ನವು ದಂಪತಿಯ ಕೊಲೆಗೆ ಕಾರಣವಾಗಿತ್ತು.
ಪೊಲೀಸರು ಅಪ್ರಾಪ್ತ ಬಾಲಕನ ಜೊತೆಗೆ ಮಂಜೇಶ್ ಮತ್ತು ಶಿವಂ ಹೆಸರಿನ ಇತರ ಇಬ್ಬರನ್ನು ಬಂಧಿಸಿದ್ದಾರೆ. ನಾಲ್ಕನೇ ಆರೋಪಿ ಸಂದೀಪ್ ನಾಪತ್ತೆಯಾಗಿದ್ದಾನೆ. ಅವರ ಬಳಿಯಿಂದ 12,000 ರೂ., ಒಂದು ಮೊಬೈಲ್ ಫೋನ್ ಹಾಗೂ ಚಿನ್ನದ ಸರವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಗಾಝಿಯಾಬಾದ್ ಹಿರಿಯ ಪೊಲೀಸ್ ಅಧಿಕಾರಿ ಇರಾಜ್ ರಾಜಾ ತಿಳಿಸಿದ್ದಾರೆ.





