ಜಲೀಲ್ ಹತ್ಯೆ ಪ್ರಕರಣ | ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮೃತದೇಹ ಮುಂದಿಟ್ಟು ಧರಣಿ

ಸುರತ್ಕಲ್, ಡಿ.25: ಕಳೆದ ರಾತ್ರಿ ದುಷ್ಕರ್ಮಿಗಳಿಂದ ಕೊಲೆಯಾದ ಕೃಷ್ಣಾಪುರ 9ನೇ ಬ್ಲಾಕ್ ನಿವಾಸಿ ಅಬ್ದುಲ್ ಜಲೀಲ್ ಹತ್ಯೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಸ್ಥಳೀಯರು ಸ್ಥಳದಲ್ಲಿ ಧರಣಿ ಆರಂಭಿಸಿದ್ದಾರೆ.
ಇಂದು ಮಧ್ಯಾಹ್ನ ವೇಳೆ 9ನೆ ಬ್ಲಾಕ್ ಜುಮಾ ಮಸೀದಿಯಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿದ ಬಳಿಕ ನೆರೆದಿದ್ದ ಸಾವಿರಾರು ಮಂದಿ ಜಲೀಲ್ ಅವರ ಮೃತದೇಹವನ್ನು ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್ ಅನ್ನು ನಿಲ್ಲಿಸಿ ಧರಣಿ ಆರಂಭಿಸಿದ್ದು, ಆರೋಪಿಗಳ ಬಂಧನವಾಗದೇ ಅಂತ್ಯ ಸಂಸ್ಕಾರ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಕಂಡುಬಂದಿದೆ.
ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಮಾಜಿ ಶಾಸಕ ಮೊಯ್ದಿನ್ ಬಾವಾ, ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ, ಮಾಜಿ ಮೇಯರ್ ಅಶ್ರಫ್ ಮತ್ತಿತರ ಮುಖಂಡರು ಆಗಮಿಸಿದ್ದು, ಆಕ್ರೋಶಿತ ಜನರನ್ನು ಸಮಾಧಾನಪಡಿಸಲು ಹರಸಾಹಸ ಪಡುತ್ತಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಧರಣಿನಿರತರು ಒತ್ತಾಯಿಸುತ್ತಿದ್ದಾರೆ.
ಕಳೆದ ರಾತ್ರಿ ಕೃಷ್ಣಾಪುರ 4ನೆ ಬ್ಲಾಕ್ ನೈತಂಗಡಿ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೃಷ್ಣಾಪುರ 9ನೇ ಬ್ಲಾಕ್ ನಿವಾಸಿ ಅಬ್ದುಲ್ ಜಲೀಲ್ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದೆ.
ಇಂದು ಬೆಳಗ್ಗೆ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನೆರವೇರಿಸಿದ ಬಳಿಕ ಜಲೀಲ್ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಅಂತಿಮ ವಿಧಿವಿಧಾನದ ಬಳಿಕ ಇಲ್ಲಿನ 9ನೇ ಬ್ಲಾಕ್ ಮಸೀದಿಯಲ್ಲಿ ಮಯ್ಯತ್ ನಮಾಝ್ ನಿರ್ವಹಿಸಲಾಯಿತು. ಆ ಬಳಿಕ ಮೃತದೇಹ ಹೊರತರುತ್ತಿದ್ದಂತೆ ಸೇರಿದ್ದ ಸಾವಿರಾರು ಮಂದಿ ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಧರಣಿ ಆರಂಭಿಸಿದ್ದಾರೆ. ಆರೋಪಿಗಳ ಬಂಧನವಾಗದೆ ದಫನ ಕಾರ್ಯ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.













