ಮುಖ್ರೋದಲ್ಲಿ ಅಸ್ಸಾಂ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂದ ಸಿಎಂ ಹಿಮಂತ ಬಿಸ್ವ ಶರ್ಮಾ

ದಿಸ್ಪುರ್: ಕಳೆದ ತಿಂಗಳು ಅಸ್ಸಾಂ-ಮೇಘಾಲಯ ಗಡಿಗೆ ಹೊಂದಿಕೊಂಡಿರುವ ಗ್ರಾಮದಲ್ಲಿ ಅಸ್ಸಾಂ ಪೊಲೀಸರ ಗುಂಡಿನ ದಾಳಿಗೆ ಆರು ಮಂದಿ ಬಲಿಯಾದ ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಗುಂಡಿನ ದಾಳಿ ನಡೆಸಿದ್ದರು ಎಂದು ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ ಎಂದು The Indian Express ವರದಿ ಮಾಡಿದೆ.
ನವೆಂಬರ್ 22ರಂದು ಅಸ್ಸಾಂ ಪೊಲೀಸರು ನಡೆಸಿದ್ದ ಗುಂಡಿನ ದಾಳಿಯಲ್ಲಿ ಐವರು ಮೇಘಾಲಯ ನಿವಾಸಿಗಳು ಹಾಗೂ ಓರ್ವ ಅಸ್ಸಾ ಅರಣ್ಯ ಸಂರಕ್ಷಕ ಬಲಿಯಾಗಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ, ಗುಂಡಿನ ದಾಳಿಯು ನಮ್ಮ ರಾಜ್ಯದ ಪೂರ್ವ ಜೈಂತಿಯಾ ಪರ್ವತ ಜಿಲ್ಲೆಯ ಮುಖ್ರೊ ಗ್ರಾಮದಲ್ಲಿ ನಡೆದಿದೆ ಎಂದು ಹೇಳಿಕೆ ನೀಡಿದ್ದರು. ತಂಡವೊಂದು ಟ್ರಕ್‌ನಲ್ಲಿ ಮರದ ತುಂಡುಗಳನ್ನು ತುಂಬಿಕೊಂಡು ಪರಾರಿಯಾಗಲು ಯತ್ನಿಸಿದಾಗ ಅದನ್ನು ಹಿಂಬಾಲಿಸಿದ್ದ ಅಸ್ಸಾಂ ಪೊಲೀಸರು ಹಾಗೂ ಅಸ್ಸಾಂ ಅರಣ್ಯ ಸಂರಕ್ಷಕರು ಟ್ರಕ್ ಅನ್ನು ಮುಖ್ರೊ ಬಳಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು ಎಂದು ಅವರು ತಿಳಿಸಿದ್ದರು.
ಆದರೆ, ಮುಖ್ರೊ ಗ್ರಾಮವು ನಮ್ಮ ರಾಜ್ಯದ ವ್ಯಾಪ್ತಿಗೆ ಒಳಪಟ್ಟಿದ್ದು, ಗುಂಡಿನ ದಾಳಿಯಲ್ಲಿ ಕೇವಲ ನಾಲ್ಕು ಮಂದಿ ಬಲಿಯಾಗಿದ್ದಾರೆ ಎಂದು ಅಸ್ಸಾಂ ಅಧಿಕಾರಿಗಳು ಪ್ರತಿಪಾದಿಸಿದ್ದರು.
ಅಸ್ಸಾಂ ವಿಧಾನಸಭಾ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಖಾತೆಯನ್ನೂ ಹೊಂದಿರುವ ಶರ್ಮಾ, ಮೇಘಾಲಯದ ದುಷ್ಕರ್ಮಿಗಳು ಅಸ್ಸಾಂ ಅರಣ್ಯಾಧಿಕಾರಿಯೊಬ್ಬರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಇದಾದ ನಂತರ ಪೊಲೀಸರು ಆತ್ಮರಕ್ಷಣೆಗಾಗಿ ಮತ್ತು ರಾಜ್ಯದ ಸಂಪತ್ತನ್ನು ರಕ್ಷಿಸುವ ಸಲುವಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಶರ್ಮಾ ಅವರ ಈ ಹೇಳಿಕೆಯು ಗುಂಡಿನ ದಾಳಿ ನಡೆದ ಮರು ದಿನ ನೀಡಿದ ಹೇಳಿಕೆಗಿಂತ ಭಿನ್ನವಾಗಿದ್ದು, ಅಂದು ಅವರು ಪೊಲೀಸರ ಕ್ರಮ ಅನಗತ್ಯ ಮತ್ತು ಅಪ್ರಚೋದಿತವಾಗಿತ್ತು ಎಂದು ಹೇಳಿದ್ದರು. ಆದರೆ, ಶನಿವಾರ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯ ವರದಿಯನ್ನು ಉಲ್ಲೇಖಿಸಿದ ಅವರು, "ಮೇಘಾಲಯ ನಿವಾಸಿಗಳು ನಮ್ಮ ಅಧಿಕಾರಿಗಳನ್ನು ಸುತ್ತುವರಿದರು ಮತ್ತು ದಾಳಿ ನಡೆಸಿದರು. ಅಲ್ಲದೆ ಮೂವರು ಮರ ಕಳ್ಳ ಸಾಗಾಣಿಕೆದಾರರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು ಎಂದು ಹೇಳಿದ್ದಾರೆ ಎಂದು The Economic Times ವರದಿ ಮಾಡಿದೆ.
1971ರ ಅಸ್ಸಾಂ ಮರುವಿಂಗಡಣೆ ಕಾಯ್ದೆಯನ್ವಯ ಮೇಘಾಲಯ ರಾಜ್ಯದಿಂದ ಅಸ್ಸಾಂ ಬೇರ್ಪಟ್ಟಿದ್ದು, ಅಂದಿನಿಂದ ಉಭಯ ರಾಜ್ಯಗಳ ನಡುವೆ ಗಡಿ ವಿವಾದ ಮುಂದುವರಿದಿದೆ. ಈ ಕಾನೂನನ್ನು ಮೇಘಾಲಯ ರಾಜ್ಯ ಪ್ರಶ್ನಿಸಿರುವುದರಿಂದ ಉಭಯ ರಾಜ್ಯಗಳ ನಡುವೆ ಗಡಿ ಬಿಕ್ಕಟ್ಟು ಉದ್ಭವವಾಗಿದೆ.







