ಚಿಕ್ಕಮಗಳೂರು: ಅಂಬೇಡ್ಕರ್ ಪ್ರತಿಮೆ ಮುಂದೆ ಮನುಸ್ಮೃತಿ ಪ್ರತಿಗಳ ದಹನ

ಚಿಕ್ಕಮಗಳೂರು,ಡಿ.25: ಮನುಸ್ಮೃತಿಯಲ್ಲಿ ದಲಿತ, ಹಿಂದುಳಿದವರನ್ನು ಪಶುಗಳಂತೆ ಕಾಣುವ ಅಂಶವನ್ನು ಕಂಡು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು 1927ರ ಡಿ.25ರಂದು ಮನುಸ್ಮೃತಿ ಸುಟ್ಟು ಹಾಕಿದ್ದರು. ಅದರ ನೆನಪಿಗಾಗಿ ರವಿವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಎದುರು ದಲಿತ ಸಂಘಟನೆಗಳ ಐಕ್ಯಾತಾ ಸಮಿತಿ ಸದಸ್ಯರು ಮನುಸ್ಮೃತಿಯ ಪ್ರತಿಗಳನ್ನು ದಹಿಸುವ ಮೂಲಕ ಅಂಬೇಡ್ಕರ್ ದಾರಿಯಲ್ಲಿ ಸಾಗುವ ಪ್ರತಿಜ್ಞೆ ಮಾಡಿದರು.
ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಅಂದು ದೇಶದಲ್ಲಿ ಮನುಸ್ಮೃತಿ ಹೇರಿಕೆಯಿಂದಾಗಿ ಮೇಲ್ವರ್ಗದ ಜನರು ಶೋಷಿತ ಸಮುದಾಯಗಳನ್ನು ಜಾತಿ ಹೆಸರಿನಲ್ಲಿ ಪ್ರಾಣಿಗಳಂತೆ ನೋಡುತ್ತಿದ್ದರು. ಶೋಷಿತರು ವಿದ್ಯೆ, ಆಸ್ತಿ ಹೊಂದುವಂತಹ ಹಕ್ಕು ಹೊಂದಿಲ್ಲ ಎಂದು ಮನುಸ್ಮೃತಿ ಕರಾಳ ನಿಯಮಗಳನ್ನು ಹೇರಿ ಶೋಷಿತರ ಹಕ್ಕುಗಳನ್ನು ಕಿತ್ತುಕೊಂಡಿದ್ದರು. ಮನುಸ್ಮೃತಿ ಯಿಂದಾಗಿ ಶೋಷಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ಅಮಾನವೀಯ ವ್ಯವಸ್ಥೆಯ ನಾಶವಾಗಬೇಕೆಂಬ ಉದ್ದೇಶದಿಂದ ಜನಜಾಗೃತಿ ಮೂಡಿಸುವ ಸಲುವಾಗಿ ಮನುಸ್ಮೃತಿ ದಹನ ಮಾಡುವ ಮೂಲಕ ಅಂಬೇಡ್ಕರ್ ಐತಿಹಾಸಿಕ ನಿರ್ಣಯಕೈ ಗೊಂಡಿದ್ದರು ಎಂದರು.
ಮೇಲ್ವರ್ಗದವರ ದೌರ್ಜನ್ಯ, ಆಡಳಿತ ವ್ಯವಸ್ಥೆಯೇ ಅವರ ಕೈಯಲ್ಲಿದ್ದ ಸಂದರ್ಭದಲ್ಲಿ ಬಾಬಾ ಸಾಹೇಬರು ಯಾವುದಕ್ಕೂ ಅಂಜದೇ ಅಳುಕದೆ ಮನುಸ್ಮೃತಿ ವಿರೋಧಿಸಿ ಅದನ್ನು ಸುಟ್ಟು ಹಾಕಿದ್ದರು. ಅಂಬೇಡ್ಕರ್ ಅವರ ಈ ನಡೆ ಇಂದಿಗೂ ಶೋಷಿತ ಸಮುದಾಯಗಳಿಗೆ ಮಾದರಿಯಾಗಿದ್ದು, ಮುನವಾದಿ ವ್ಯವಸ್ಥೆಯನ್ನು ಪ್ರತಿಯೊಬ್ಬರೂ ವಿರೋಧಿಸಬೇಕು ಎಂದ ಅವರು, ಯಾವ ಸರಕಾರ ಸಂವಿಧಾನವನ್ನು ಗೌರವಿಸುವುದಿಲ್ಲವೋ ಅಂತಹ ಸರಕಾರಗಳು ಬಹಳಷ್ಟು ದಿನ ಉಳಿಯುವುದಿಲ್ಲ. ಬಿಜೆಪಿ ಸರಕಾರ ಮನುವಾದವನ್ನು ಪೋಷಿಸಿ ಬೆಳೆಸುತ್ತಿದ್ದು, ಬಿಜೆಪಿ ಸರಕಾರದ ಈ ನಿಲುವಿನ ವಿರುದ್ಧ ಜನಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಮುಖಂಡ ದಂಟರಮಕ್ಕಿ ಶ್ರೀನಿವಾಸ್ ಮಾತನಾಡಿ, ದೇಶದಲ್ಲಿ ಪ್ರತಿಯೊಬ್ಬರು ಸಮಾನತೆ, ಸಹಬಾಳ್ವೆಯಿಂದ ಬದುಕುವಂತಾಗಲು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಹಕ್ಕು ನೀಡಿದ್ದಾರೆ. ಆದರೆ ಮನುಸ್ಮೃತಿ ಸಮಾನತೆಯ ವಿರೋಧಿಯಾಗಿದೆ. ಮನುಧರ್ಮವನ್ನು ನಾಶ ಮಾಡುವ ನಿಟ್ಟಿನಲ್ಲಿ ಎಲ್ಲರೂ ಅಂಬೇಡ್ಕರ್ ಅವರ ಆಶಯದಂತೆ ಬದುಕಬೇಕು ಎಂದರು.
ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಬಾಲಕೃಷ್ಣ ಬಿಳೇಕಲ್ಲು, ಬಿ.ಪಿ.ಚಂದ್ರಶೇಖರ್‍ಪುರ, ವಿರೂಪಾಕ್ಷ, ಮೋಹನ್‍ಕುಮಾರ್, ಶೇಖರ್, ಚಿದಾನಂದ್, ಮತ್ತಿತರರು ಉಪಸ್ಥಿತರಿದ್ದರು.







