ಪ್ರೊ.ಎ.ವಿ.ನಾವಡರಿಗೆ ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಪ್ರದಾನ

ಕುಂದಾಪುರ: ಆರೋಗ್ಯ ಹಾಗೂ ಶಿಕ್ಷಣದ ಪ್ರಾಥಮಿಕ ಅವಶ್ಯಕತೆಗಳಿಗೆ ಮೊದಲ ಆಯ್ಕೆ ನೀಡಬೇಕು. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುವುದೆ ಹೆಚ್ಚಾಗಿರುವ ಪೊಲೀಸ್ ಇಲಾಖೆಗೆ ಕಾನೂನು ಸುವ್ಯವಸ್ಥೆ ಹೊಣೆ ನಿರ್ವಹಿಸಲು ಸಮಯ ದೊರಕದೆ ಇರುವ ಸ್ಥಿತಿ ಇದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಜಾನಪದ ವಿದ್ವಾಂಸ ಡಾ.ಬಿ.ಎ.ವಿವೇಕ ರೈ ಹೇಳಿದ್ದಾರೆ.
ಇಲ್ಲಿಗೆ ಸಮೀಪದ ಬಸ್ರೂರಿನ ಶ್ರೀಶಾರದಾ ಕಾಲೇಜಿನಲ್ಲಿ ಶನಿವಾರ ಸಂಜೆ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ನಡೆದ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ೮೮ನೇ ಹುಟ್ಟುಹಬ್ಬ ಆಚರಣೆ, ದತ್ತಿನಿಧಿ ವಿತರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ನೈತಿಕತೆಯ ಬದುಕನ್ನು ರೂಪಿಸಿಕೊಂಡು, ಅದರಂತೆ ಬದುಕು ಸಾಗಿಸುತ್ತಿರುವವರು ನಮ್ಮ ಸಮಾಜದಲ್ಲಿ ವಿರಳರಾಗುತ್ತಿರುವ ಈ ಕಾಲಘಟ್ಟದಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆಯಂಥ ಅಜಾತಶತ್ರುಗಳ ನಡುವೆ ನಾವಿದ್ದೇವೆ ಎನ್ನುವ ಹೆಮ್ಮೆ ನಮಗಿದೆ ಎಂದರು.
ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ವಿ.ನಾವಡ, ಪ್ರಕೃತಿ ಹಾಗೂ ನೆಲದ ಸಂಸ್ಕೃತಿ ಕಣ್ಮರೆ ಯಾಗುತ್ತಿದೆ. ಸಂಸ್ಕೃತಿಯೊಂದಿಗೆ ಭಾಷೆಯೂ ಬದಲಾವಣೆಯಾಗುತ್ತಿದೆ. ಶಿಕ್ಷಣದಲ್ಲಿ ನೆಲದ ಚರಿತ್ರೆಗಳೇ ಕಾಣದಂತಾಗಿದೆ. ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರು ಮಾಡುವುದಷ್ಟೇ ಕಾಯಕವಾದರೆ ಜ್ಞಾನಸಂಪತ್ತುಗಳನ್ನು ಪಡೆದು ಕೊಳ್ಳುವ ಬಗೆ ಹೇಗೆ ಎನ್ನುವ ಚಿಂತನೆ ನಡೆಯಬೇಕು. ಶಿಕ್ಷಣ ಸಂಸ್ಥೆಗಳು ಅಧ್ಯಯನಶೀಲತೆ, ಸಂಶೋಧನೆ ಹಾಗೂ ಸಾಂಸ್ಕೃತಿಕ ಕೇಂದ್ರಗಳಾಗಬೇಕು ಎಂದರು.
ಕೇಮಾರು ಸಾಂದೀಪನಿ ಮಠದ ಈಶವಿಠ್ಠಲದಾಸ ಸ್ವಾಮೀಜಿ ಮಾತನಾಡಿ, ಬ್ರಿಟಿಷರು ೨೦೦ ವರ್ಷ ಆಳಿದರೂ ನಾಶ ಮಾಡಲಾಗದ ನಮ್ಮ ಭವ್ಯ ಸಂಸ್ಕೃತಿಗಳನ್ನು ಸಾಮಾಜಿಕ ಜಾಲಾತಾಣಗಳು ನಾಶ ಮಾಡುತ್ತಿವೆ. ಮೊಬೈಲ್ ಹಾಗೂ ಇಂಟರ್ನೆಟ್‌ಗಳು ನಮ್ಮತನವನ್ನು ಕಸಿಯುತ್ತಿವೆ ಎಂದು ಅಭಿಪ್ರಾಯ ಪಟ್ಟರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ರಾಜ್ಯ ಆಹಾರ ಹಾಗೂ ನಾಗರಿಕ ಸೌಲಭ್ಯ ನಿಗಮದ ಉಪಾಧ್ಯಕ್ಷ ಕಿರಣ್‌ಕುಮಾರ ಕೊಡ್ಗಿ ಅವರು ಬಸ್ರೂರು ಅಪ್ಪಣ್ಣ ಹೆಗ್ಡೆ ಅವರನ್ನು ಅಭಿನಂದಿಸಿ ಮಾತನಾಡಿದರು.
ಪ್ರತಿಷ್ಠಾನದ ವತಿಯಿಂದ ವಿದ್ಯಾರ್ಥಿಗಳಿಗೆ, ಅಶಕ್ತರಿಗೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಹಾಯಧನ ಹಸ್ತಾಂತರಿಸಲಾಯಿತು.ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯಾ, ಸುಶಾಂತ್ ರೈ, ನಿರುಪಮಾ ಹೆಗ್ಡೆ, ಪ್ರೀತಮ್ ಎಸ್ ರೈ ಉಪಸ್ಥಿತ ರಿದ್ದರು.
ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಟ್ರಸ್ಟಿ ಅನುಪಮಾ ಎಸ್. ಶೆಟ್ಟಿ ಸ್ವಾಗತಿಸಿದರು. ಆಡಳಿತ ಟ್ರಸ್ಟಿ ರಾಮಕಿಶನ್ ಹೆಗ್ಡೆ ವರದಿ ಮಂಡಿಸಿದರು. ಸುನೀಲ್ ಪಾಂಡೇಶ್ವರ ಅಭಿನಂದನಾ ಪತ್ರ ವಾಚಿಸಿ, ರಾಜೇಶ್ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು. ಶಾರದಾ ಕಾಲೇಜಿನ ಪ್ರಾಂಶುಪಾಲೆ ಡಾ.ಚಂದ್ರಾವತಿ ಶೆಟ್ಟಿ ವಂದಿಸಿದರು.







