ಕುಂದಾಪುರ: 200 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

ಕುಂದಾಪುರ: ರಾಜ್ಯದಲ್ಲಿ 45,000 ಸರಕಾರಿ ಹಾಗೂ 2,500 ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಂದಾಜು 1.5 ಕೋಟಿ ವಿದ್ಯಾರ್ಥಿಗಳು ಶಿಕ್ಷಣಾಭ್ಯಾಸ ಮಾಡುತ್ತಿದ್ದಾರೆ. ಬಜೆಟ್‌ನ ಶೇ.21-22ರಷ್ಟು ಹಣವನ್ನ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಸರಕಾರ ವಿನಿಯೋಗಿಸುತ್ತಿದೆ. ಸರಕಾರ ಹಾಗೂ ಖಾಸಗಿ ವ್ಯವಸ್ಥೆಗಳಿಂದ ಶಿಕ್ಷಣ ಕ್ಷೇತ್ರದ ಅಭ್ಯುದಯಕ್ಕೆ ಸಾಕಷ್ಟು ಕಾರ್ಯಕ್ರಮ ಗಳು ಅನುಷ್ಠಾನಗೊಳ್ಳುತಿದ್ದರೂ, ಇನ್ನೂ ಪರಿಪೂರ್ಣವಾಗಿಲ್ಲ ಎನ್ನುವ ಭಾವನೆಗಳು ಇದೆ ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ವತಿಯಿಂದ ಕಾಲೇಜಿನ 200 ವಿದ್ಯಾರ್ಥಿಗಳಿಗೆ ನೀಡುವ 5ನೇ ವರ್ಷದ ವಿದ್ಯಾರ್ಥಿವೇತನ ವಿತರಣಾ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ, ಧರ್ಮಕ್ಕಿಂತ ದೇಶ ಮೊದಲು ಎನ್ನುವ ಮನೋಭಾವನೆಯನ್ನು ಬೆಳೆಸಿಕೊಂಡು ರಾಷ್ಟ್ರಭಕ್ತರಾಗುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಪ್ರಥಮ ಆಯ್ಕೆಯಾಗಬೇಕು ಎಂದು ಕಿವಿಮಾತು ಹೇಳಿದ ಸಚಿವರು, ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಹೆಚ್.ಎಸ್.ಶೆಟ್ಟಿಯಂತವರ ಕೊಡುಗೆಗಳು ಉಲ್ಲೇಖನೀಯ. ಜಾತ್ಯಾತೀತ ಆಶಯಗಳನ್ನು ಹೊಂದಿರುವ ನಮ್ಮ ದೇಶದಲ್ಲಿ ಜಾತಿ-ಧರ್ಮದ ಪರಿಧಿಯನ್ನು ಮೀರಿ ಆಲೋಚಿಸಬೇಕಾದ ಅಗತ್ಯತೆಗಳು ಇದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷ ಹೆಚ್.ಎಸ್.ಶೆಟ್ಟಿ, ಶಿಕ್ಷಣ ಅಭ್ಯಾಸವನ್ನು ಮುಗಿಸಿ, ಬದುಕಿನ ದೃಷ್ಟಿಕೋನದೊಂದಿಗೆ ಸ್ಪರ್ಧಾತ್ಮಕ ಪ್ರಪಂಚವನ್ನು ಕಾಣುವ ಪ್ರತಿಯೊಬ್ಬರೂ, ಮಾರುಕಟ್ಟೆ ಕೇಂದ್ರಿತವಾಗಿರುವ ಜಗತ್ತಿನ ಪರಿಭಾಷೆಯನ್ನು ಆರ್ಥೈಯಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಮೇರಿಕಾದ ಟೆಕ್ಸಾಸ್ ಎ ಎಂಡ್ ಎಂ ಯೂನಿವರ್ಸಿಟಿಯ ಸ್ಕೂಲ್ ಆಫ್ ಮೆಡಿಸಿನ್ ಸಂಸ್ಥೆಯ ಅಸೋಸಿಯೇಟ್ ನಿರ್ದೇಶಕ ಪ್ರೊ.ಅಶೋಕ ಕೆ ಶೆಟ್ಟಿ, ಕಠಿಣ ಸವಾಲು ಹಾಗೂ ನೋವಿನ ಸವಾಲುಗಳನ್ನು ಎದುರಿಸಿ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿರುವ ಎಚ್.ಎಸ್.ಶೆಟ್ಟಿ ಅವರು. ದುಡಿಮೆಯ ಒಂದು ಭಾಗವನ್ನು ಸಮಾಜದ ಸದುದ್ದೇಶಗಳಿಗೆ ವಿನಿಯೋಗಿಸುವ ಮೂಲಕ ಯುವ ಜನತೆಗೆ ಆದರ್ಶವಾಗಿದ್ದಾರೆ ಎಂದರು.
ಭಂಡಾರ್ಕಾರ್ಸ್ ಕಾಲೇಜಿನ ಹಿರಿಯ ವಿಶ್ವಸ್ಥರಾದ ಕೆ.ಶಾಂತಾರಾಮ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಉಪಾಧ್ಯಕ್ಷ ಹೆಚ್.ನಾಗರಾಜ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಪಿ. ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಹೆಚ್.ರಾಜೀವ ಶೆಟ್ಟಿ ಸ್ವಾಗತಿಸಿದರು. ಕಾಲೇಜಿನ ಕ್ಷೇಮಪಾಲನ ಅಧಿಕಾರಿ ಡಾ.ಶುಭಕರಾಚಾರಿ ವಿದ್ಯಾರ್ಥಿ ವೇತನದ ವಿವರ ನೀಡಿದರು. ಉಪನ್ಯಾಸಕಿ ಸುಮಾ ಜಿ.ಆರ್ ಪರಿಚಯಿಸಿ, ಉಪನ್ಯಾಸಕಿ ರೋಹಿಣಿ ಕಾರ್ಯಕ್ರಮ ನಿರೂಪಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡಾ ವಂದಿಸಿದರು.