ಜಲೀಲ್ ಹತ್ಯೆಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ: ಯು.ಟಿ. ಖಾದರ್ ಆರೋಪ

ಮಂಗಳೂರು: ಸುರತ್ಕಲ್ ಸಮೀಪದ ಕೃಷ್ಣಾಪುರ ನಾಲ್ಕನೆ ಬ್ಲಾಕ್‌ನ ನೈತಂಗಡಿಯ ಬಳಿ ಶನಿವಾರ ರಾತ್ರಿ ನಡೆದ ಕೃಷ್ಣಾಪುರ 9ನೆ ಬ್ಲಾಕ್ ನಿವಾಸಿ ಜಲೀಲ್ ಹತ್ಯೆಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣವಾಗಿದೆ ಎಂದು ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆರೋಪಿಸಿದ್ದಾರೆ.
ಕಳೆದೊಂದು ತಿಂಗಳಲ್ಲಿ ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶದ ಅಲ್ಲಲ್ಲಿ ಅನೈತಿಕ ಪೊಲೀಸ್‌ಗಿರಿ ನಡೆದಾಗ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಿದ್ದೆವು. ಆದರೆ ಪೊಲೀಸರು ಆರೋಪಿಗಳನ್ನು ಜೈಲಿಗೆ ತಳ್ಳುವ ಬದಲು ಜಾಮೀನು ಸಿಗುವಂತಹ ಸೆಕ್ಷನ್‌ನಡಿ ಪ್ರಕರಣ ದಾಖಲಿಸಿ ಅನೈತಿಕ ಪೊಲೀಸ್‌ಗಿರಿ ಕೃತ್ಯಗಳನ್ನು ಲಘುವಾಗಿ ಪರಿಗಣಿಸಿದರು. ಪೊಲೀಸರು ಆವಾಗಲೇ ಎಚ್ಚೆತ್ತುಕೊಂಡು ಕಠಿಣ ಕ್ರಮ ಜರಗಿಸಿದ್ದರೆ ಇಂದು ಇಂತಹ ಅಮಾಯಕರು ಬಲಿಯಾಗುತ್ತಿರಲಿಲ್ಲ ಎಂದು ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ಜನತೆ ತೀವ್ರ ಭಯದ ವಾತಾವರಣದಲ್ಲಿದ್ದಾರೆ. ಚುನಾವಣೆಯ ಸಂದರ್ಭ ಇಂತಹ ಕೃತ್ಯಗಳು ಆಗದಂತೆ ಪೊಲೀಸ್ ಇಲಾಖೆ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು ಮತ್ತು ರಾಜ್ಯ ಸರಕಾರವು ಸ್ಪಷ್ಟ ನಿರ್ದೇಶನ ನೀಡಬೇಕಿತ್ತು. ಆದರೆ ರಾಜ್ಯ ಬಿಜೆಪಿ ಸರಕಾರವು ತನ್ನ ವೈಫಲ್ಯವನ್ನು ಮರೆಮಾಚಲು ಅನೈತಿಕ ಪೊಲೀಸ್‌ಗಿರಿಗೆ ಕುಮ್ಮಕ್ಕು ನೀಡುತ್ತಲೇ ಬಂದಿವೆ ಎಂದ ಯು.ಟಿ.ಖಾದರ್, ಜಲೀಲ್ ಹತ್ಯೆ ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಕೊಲೆಯಾದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರಕಾರ ಪರಿಹಾರ ಧನ ನೀಡಿದಂತೆ ಇದೀಗ ಕೊಲೆಯಾದ ಜಲೀಲ್ ಹಾಗೂ ಈ ಹಿಂದೆ ಕೊಲೆಯಾಗಿರುವ ಮಸೂದ್ ಹಾಗೂ ಫಾಝಿಲ್ ಕುಟುಂಬಕ್ಕೂ ಪರಿಹಾರ ಧನ ನೀಡಬೇಕು ಎಂದು ಆಗ್ರಹಿಸಿದ್ದಾರೆ.