ಉಡುಪಿ ಜಿಲ್ಲಾ ದಸಂಸ ಐಕ್ಯ ಹೋರಾಟ ಸಮಿತಿಯಿಂದ ‘ಮನುಸ್ಮೃತಿ ದಹನ’
"ಭಾರತ ಸಂವಿಧಾನವನ್ನು ಬುಡಮೇಲುಗೊಳಿಸುವ ಪ್ರಯತ್ನವನ್ನು ತಡೆಯೋಣ"

ಉಡುಪಿ: ಬಹಳ ಹಿಂದಿನಿಂದಲೂ ಬ್ರಾಹ್ಮಣಶಾಹಿ ವರ್ಗ ಭಾರತದ ಸಂವಿಧಾನವನ್ನು ಬುಡಮೇಲು ಮಾಡಿ ಅದರ ಸ್ಥಾನದಲ್ಲಿ ಮನುಧರ್ಮ ಶಾಸ್ತ್ರವನ್ನು ತರಲು ಹುನ್ನಾರ ಮಾಡುತ್ತಿದೆ. ಭಾರತದಲ್ಲಿ ಒಂದು ವರ್ಗದ ಮನಸ್ಸಲ್ಲಿ ಆಳವಾಗಿರುವ ವೇದ, ಶೃತಿ, ಸ್ಮೃತಿ ಎನ್ನುವ ರಾಕ್ಷಸೀಯ ಸಾಧನಗಳನ್ನು ನಾಶಮಾಡದೇ ಜಾತಿ ಸಮಾನತೆ ತರಲು ಸಾಧ್ಯವಿಲ್ಲ ಎಂದು ಪ್ರಗತಿಪರ ಚಿಂತಕ, ಸಾಮಾಜಿಕ ಹೋರಾಟಗಾರ ಪ್ರೊ.ಪಣಿರಾಜ್ ಹೇಳಿದ್ದಾರೆ.
ಡಾ. ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿ ದಹಿಸಿದ ದಿನವಾದ ಡಿ.25ರಂದು ಉಡುಪಿ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿಯ ವತಿಯಿಂದ ನಡೆಸಿದ ’ಮನುಸ್ಮೃತಿ ದಹನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಮನುಸ್ಮತಿ ಮಹಿಳಾ ವಿರೋಧಿ. ಅಂಬೇಡ್ಕರ್ ಅವರು ಮಹಾಡ್ ಚಳವಳಿ ಮಾದರಿಯಲ್ಲಿ ಮನುಸ್ಮತಿಯನ್ನು ಸುಡುವ ಮೂಲಕ ದೇಶದ ಬಡಜನರ ಬಿಡುಗಡೆಗೆ ಮಾದರಿಯಾದರು ಎಂದ ಪ್ರೊ.ಫಣಿರಾಜ್, ಶೋಷಣೆಗಾಗಿ ಮನುಧರ್ಮವನ್ನು ಭಾರತದ ಸಂಸತ್ ಭವನದಲ್ಲಿ ತರಲು ಉದ್ದೇಶಿಸಿದ್ದು, ಇದನ್ನು ಸಹಿಸಲ್ಲ. ಕೊನೆ ಉಸಿರಿನ ತನಕ ಹೋರಾಟ ನಿಶ್ಚಿತ ಎಂದರು.
ಹಲವಾರು ದಶಕಗಳ ಬಳಿಕ ಉಡುಪಿ ಸಹಿತ ಕರ್ನಾಟಕ ರಾಜ್ಯದಲ್ಲಿ, ಜಿಲ್ಲಾ ಕೇಂದ್ರದಲ್ಲಿ ಎಲ್ಲಾ ದಲಿತ ಸಂಘಟನೆಗಳ ಬಣಗಳು ಐಕ್ಯವಾಗಿ ಒಂದು ಶಕ್ತಿಯಾಗಿ ಕೆಲಸ ಮಾಡುತ್ತಿದ್ದು, ಚಾರಿತ್ರಿಕವಾದ ಈ ದಿನವನ್ನು ಜತನದಿಂದ ಕಾಪಾಡಿಕೊಂಡು ಮುಂದೆಯೂ ಸಂಘಟಿತವಾಗಿ ಹೋರಾಡಬೇಕು ಎಂದವರು ಕರೆ ನೀಡಿದರು.
ಮತ್ತೊಬ್ಬ ಸಾಮಾಜಿಕ ಹೋರಾಟಗಾರ ಇದ್ರಿಸ್ ಹೂಡೆ ಮಾತನಾಡಿ, ಮನುಸ್ಮೃತಿ ಮನುಷ್ಯನ ಬದುಕುವ ಹಕ್ಕು ಕಿತ್ತುಕೊಳ್ಳುತ್ತದೆ. ಸಂವಿಧಾನದ ಮೂಲ ಉದ್ದೇಶವನ್ನು ಹತ್ತಿಕ್ಕುವ ದುರುದ್ದೇಶ ಮಾಡಲಾಗುತ್ತಿದೆ. ಬೇರೆ ಬೇರೆ ಮೂಲದ ಮೂಲಕ ಸಂವಿಧಾನವನ್ನು ದುರ್ಬಲಗೊಳಿಸಲು ಷಡ್ಯಂತ್ರ ಮಾಡಲಾಗುತ್ತಿದೆ. ಅಸ್ಪ್ರಶ್ಯತೆ ಹೋಗಲಾಡಿಸಲು ಮುಂದಾದವರ ಜಯಂತಿಗೆ ಈ ಸರಕಾರ ಕಡಿವಾಣ ಹಾಕಿದೆ. ಈ ಮೂಲಕ ತಾವು ಸಂವಿಧಾನದ ವಿರೋಧಿಗಳು ಎಂದು ಸರ್ಕಾರ ಹಾಗೂ ಅದರಡಿಯಲ್ಲಿನ ಸಂಘಟನೆಗಳು ತೋರಿಸಿಕೊಂಡಿದೆ ಎಂದವರು ಆರೋಪಿಸಿದರು.
ಮನುಸ್ಮೃತಿ ದಲಿತರ ಪಾಲಿಗೆ ಶರಪಂಜರ: ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ಮನುಸ್ಮೃತಿ ದಲಿತರ ಪಾಲಿಗೆ ಶರಪಂಜರ ಇದ್ದಂತೆ. ಇಂತಹ ಬಂಧನದಲ್ಲಿ ದಲಿತ ಸಮಾಜವನ್ನು ನೋಡಲಾಗುತ್ತಿತ್ತು. ದಲಿತರು ವಿದ್ಯೆ ಕಲಿತರೆ ವಿವಿಧ ರೀತಿಯಲ್ಲಿ ಹಿಂಸೆ ನೀಡಿದ ಮನುಸ್ಮೃತಿ, ನಿಜಕ್ಕೂ ದಲಿತರಿಗೆ ಮಾತ್ರವಲ್ಲ ಇಡೀ ಮನುಕುಲಕ್ಕೆ ನಾಚಿಕೆಗೇಡಿನ ವಸ್ತುವಾಗಿದೆ. ದಲಿತರೆಂದಿಗೂ ಅಭಿವೃದ್ಧಿ ಹೊಂದದ ರೀತಿಯಲ್ಲಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ದಲಿತ ಸಮುದಾಯ ಪ್ರಗತಿ ಹೊಂದದ ರೀತಿಯಲ್ಲಿ ಈ ಮನುಸ್ಮೃತಿ ಕೆಲಸ ಮಾಡಿದ್ದು, ಆರೆಸ್ಸೆಸ್ ಸಂಘಟನೆ ಮನುಸ್ಮೃತಿಯನ್ನು ಪೋಷಿಸುತ್ತಿದೆ ಎಂದು ಆರೋಪಿಸಿದರು.
ಧರ್ಮವನ್ನೆ ಇಟ್ಟುಕೊಂಡು ಸಂಘಪರಿವಾರ ಅಂಬೇಡ್ಕರ್ ಬರೆದ ಸಂವಿಧಾನವನ್ನು ಒಪ್ಪದೆ, ಈ ಮನುಸ್ಮೃತಿಯ ಆಧಾರದಲ್ಲಿ ದಲಿತರನ್ನು ದಮನಿಸುವ ಕೆಲಸವನ್ನು ಈಗಲೂ ಮಾಡುತ್ತಿದೆ. ಇದು ಅತ್ಯಂತ ನೋವಿನ ಸಂಗತಿ. ಧರ್ಮವನ್ನೇ ಆಧಾರವಾಗಿಟ್ಟುಕೊಂಡು, ಧರ್ಮವನ್ನೇ ರಾಜಕೀಯ ಬಂಡವಾಳ ಮಾಡಿಕೊಂಡು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಬಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಎಚ್ಚರಿಸಿದ ಅವರು, ಈ ಹಿನ್ನೆಲೆ ದಲಿತ ಸಂಘಟನೆಗಳು ಒಂದಾಗಿ ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳು ಮರೆತು, ಸಾಮಾಜಿಕ ನೆಲೆಗಟ್ಟಿನಲ್ಲಿ ದಲಿತರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಹೋರಾಡಿ ಸಂವಿಧಾನದ ಉಳಿಯುವಿಗಾಗಿ ಒಗ್ಗೂಡಬೇಕು ಎಂದು ಕರೆ ನೀಡಿದರು.
‘ಮನುಸ್ಮೃತಿಯಿಂದ ದಲಿತ ಸಮಾಜದ ಉದ್ಧಾರ ಸಾಧ್ಯವಿಲ್ಲವೆಂದು ಮನಗಂಡ ಬಾಬಾ ಸಾಹೇಬ್ ಅಂಬೇಡ್ಕರ್ ಅದನ್ನು ಸುಟ್ಟು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ದಲಿತ ಸಂಘಟನೆಗಳು ಒಗ್ಗೂಡಿ ಮನುಸ್ಮೃತಿಯನ್ನು ಸುಡುತ್ತಿದ್ದೇವೆ.’ ಎಂದು ದಲಿತ ಮುಖಂಡ ಮಂಜುನಾಥ ಗಿಳಿಯಾರು ಪ್ರಸ್ತಾವನೆಯಲ್ಲಿ ತಿಳಿಸಿದರು.
ಜನಪರ ಹೋರಾಟಗಾರ ಶ್ರೀರಾಮ ದಿವಾಣ ಮಾತನಾಡಿ, ಅಸಮಾನತೆ, ತಾರತಮ್ಯದ ಸಮಾಜವನ್ನು ಕಟ್ಟುತ್ತಿರುವ ಆರೆಸ್ಸೆಸ್ ಮತ್ತು ಅದರ ನೂರೊಂದು ಮರಿ ಸಂತಾನಗಳು ಒಡಕಿಲ್ಲದೇ ಒಗ್ಗಟ್ಟಾಗಿ ದುಡಿಯುತ್ತಿವೆ. ಭಾರತದ ಸಂವಿಧಾನದ ಧ್ವಂಸವೇ ಇವುಗಳ ಉದ್ದೇಶ ಎಂಬುದನ್ನು ನಾವು ಮರೆಯಬಾರದು. ಇಂತಹ ದುಷ್ಟಶಕ್ತಿಗಳನ್ನು ವಿಜೃಂಭಿಸುವಂತೆ ಸಂಘಪರಿವಾರ ಮಾಡುತ್ತಿರುವುದರ ವಿರುದ್ಧ ಚಳವಳಿಯನ್ನು ಗಟ್ಟಿಗೊಳಿಸಬೇಕು ಎಂದರು.
ಇದೇ ವೇಳೆ ಮನುಸ್ಮೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ದಲಿತ ಸಂಘಟನೆಗಳ ಮುಖಂಡರಾದ ಶ್ಯಾಮರಾಜ್ ಬಿರ್ತಿ, ಶೇಖರ ಹೆಜಮಾಡಿ, ವಿಶ್ವನಾಥ ಬೆಳ್ಳಂಪಳ್ಳಿ, ರಮೇಶ್, ವಾಸುದೇವ ಮುದೂರು, ಸಂಜೀವ ಬಳ್ಕೂರು, ಹರೀಶ್ ಮಲ್ಪೆ, ಶ್ಯಾಮಸುಂದರ ತೆಕ್ಕಟ್ಟೆ, ಕುಮಾರ ಕೋಟ, ಪರಮೇಶ್ವರ ಉಪ್ಪೂರು, ಎನ್.ಎ.ನೇಜಾರು, ದಲಿತ ಪರ ಹೋರಾಟಗಾರರಾದ ಸಿಪಿಎಂನ ಬಾಲಕೃಷ್ಣ ಶೆಟ್ಟಿ, ಯಾಸಿನ್ ಕೋಡಿಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.
ಶ್ಯಾಮ್‌ರಾಜ್ ಬಿರ್ತಿ ಸ್ವಾಗತಿಸಿ, ವಂದಿಸಿದರು.
ಸಂಘಟಿತ ಹೋರಾಟ ಅನಿವಾರ್ಯ: ಸುಂದರ್ ಮಾಸ್ತರ್
ದೇಶದಲ್ಲಿ ಪ್ರತಿದಿನವೆಂಬಂತೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆಯುತಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಒಂದೇ ಒಂದು ಶಬ್ದ ಮಾತನಾಡಿಲ್ಲ. ಅವರು ಸಂಪೂರ್ಣವಾಗಿ ಆರೆಸ್ಸೆಸ್ ಹಿಡಿತದಲ್ಲಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ದಲಿತರ ಮೇಲೆ ನಿತ್ಯ ಅನ್ಯಾಯ, ದಬ್ಬಾಳಿಕೆ, ಶೋಷಣೆ ಆಗುತ್ತಿದೆ. ರಾಜ್ಯ ಬಿಜೆಪಿ ಸರಕಾರ ಕೂಡ ದಲಿತರ ಮೇಲೆ ಕಾಳಜಿ ತೋರುತ್ತಿಲ್ಲ. ದಲಿತರ ಪರ ಧ್ವನಿ ಎತ್ತುತ್ತಿಲ್ಲ.
ದಲಿತ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕು, ಹಾಸ್ಟೆಲ್ ಸೌಲಭ್ಯವನ್ನು ಕಡಿತ ಗೊಳಿಸಿದ್ದಾರೆ. ಸಬ್ಸಿಡಿ ಸೇರಿದಂತೆ ಸರಕಾರದ ಎಲ್ಲ ಯೋಜನೆಗಳನ್ನು ಕಡಿತ ಗೊಳಿಸಿ ದಲಿತರ ಬದುಕನ್ನು ನಿರ್ನಾಮ ಮಾಡಲಾಗುತ್ತಿದೆ. ಈ ಹಿಂದೆ ಅಂಬೇಡ್ಕರ್ ನಿಗಮ ಹಾಗೂ ದೇವರಾಜ ಅರಸು ನಿಗಮ ಮಾತ್ರ ಇತ್ತು. ಈಗ ಬ್ರಾಹ್ಮಣ ಸೇರಿದಂತೆ ಎಲ್ಲರಿಗೂ ನಿಗಮ ಮಾಡಿ ಎಲ್ಲರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ದಲಿತರು ನೆಲಕಚ್ಚುತ್ತಿದ್ದಾರೆ. ಮನುಸ್ಮೃತಿ ಈಗಾಗಲೇ ಶೇ.50ರಷ್ಟು ಜಾರಿಗೊಂಡಿದೆ. ಪೂರ್ತಿಯಾಗಿ ಜಾರಿಗೊಳಿಸಲು ಬಿಟ್ಟರೆ ದಲಿತರು ಬದುಕು ಕಳೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ದಲಿತರೆಲ್ಲರೂ ಸಂಘಟಿತರಾಗಿ ಹೋರಾಡಬೇಕು.
-ಸುಂದರ ಮಾಸ್ತರ್, ದಲಿತ ಮುಖಂಡ, ಸಂಘಟನೆ ಸಂಚಾಲಕ.








