ಜಲೀಲ್ ಹತ್ಯೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ: ಸಿಎಂ ಬಸವರಾಜ ಬೊಮ್ಮಾಯಿ
ಕ್ರಿಯೆಗೆ ಪ್ರತಿಕ್ರಿಯೆಯ ಪ್ರಶ್ನೆಯೇ ಇಲ್ಲ ಎಂದ ಮುಖ್ಯಮಂತ್ರಿ

ಮಂಗಳೂರು: ಕಾಟಿಪಳ್ಳದಲ್ಲಿ ಶನಿವಾರ ರಾತ್ರಿ ನಡೆದ ಜಲೀಲ್ ಹತ್ಯೆ ಪ್ರಕರಣದ ತನಿಖೆಯು ಪ್ರಗತಿಯಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮೂಡುಬಿದಿರೆಯಲ್ಲಿ ನಡೆಯುವ ಜಾಂಬೂರಿ ಸಮ್ಮೇಳನದಲ್ಲಿ ಭಾಗವಹಿಸಲು ರವಿವಾರ ಆಗಮಿಸಿದ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಈ ಹತ್ಯೆ ಆಗಬಾರದಿತ್ತು. ಇದು ಬಹಳ ದುರದೃಷ್ಟಕರ ಸಂಗತಿಯಾಗಿದೆ. ಪೊಲೀಸರು ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತಾರೆ. ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆ ಮತ್ತು ಅಂತ್ಯಕ್ರಿಯೆ ಕೂಡ ಶಾಂತಿಯುತವಾಗಿ ನಡೆದಿದೆ ಎಂದರು.
ಹತ್ಯೆ ತನಿಖೆಯು ಬಹಳ ಪ್ರಗತಿಯಲ್ಲಿದೆ. ಪ್ರತ್ಯಕ್ಷದರ್ಶಿ ಸಾಕ್ಷಿದಾರರ ಹೇಳಿಕೆ ಪ್ರಕಾರ ಇಬ್ಬರು ಈ ಕೊಲೆಯನ್ನು ಮಾಡಿದ್ದಾರೆ. ಆರೋಪಿಗಳನ್ನು ಆದಷ್ಟು ಬೇಗ ಪೊಲೀಸರು ಬಂಧಿಸುವ ವಿಶ್ವಾಸವೂ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಕೃತ್ಯಕ್ಕೆ ಕಾರಣ ಏನು, ಹಿನ್ನೆಲೆ ಏನು ಇತ್ಯಾದಿ ಸತ್ಯಾಸತ್ಯತೆ ಹೊರಬರುತ್ತದೆ. ಯಾವುದೇ ಊಹಾಪೋಹಗಳಿಗೆ ಅವಕಾಶ ಕೊಡದೆ ಶಾಂತಿ ಕಾಪಾಡಲು ದ.ಕ. ಮತ್ತು ಉಡುಪಿ ಜಿಲ್ಲೆ ಜನತೆ ಸಂಯಮ ಪಾಲಿಸಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.
ಕ್ರಿಯೆಗೆ ಪ್ರತಿಕ್ರಿಯೆಯ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ದ.ಕ.ಜಿಲ್ಲೆಗೆ ಭೇಟಿ ನೀಡಿದ ವೇಳೆ ‘ಕ್ರಿಯೆಗೆ ಪ್ರತಿಕ್ರಿಯೆ’ ಎಂಬ ಹೇಳಿಕೆಗೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬಸವರಾಜ ಬೊಮ್ಮಾಯಿ, ‘ಯಾರು ಕಾನೂನನ್ನು ಉಲ್ಲಂಘಿಸುತ್ತಾರೋ ಆವಾಗ ಅದನ್ನು ಹತ್ತಿಕ್ಕಲಾಗುತ್ತದೆ. ಅದು ಕ್ರಿಯೆಗೆ ಪ್ರತಿಕ್ರಿಯೆಯೇ ಅಲ್ಲ. ಅದರ ಪ್ರಶ್ನೆಯೇ ಇಲ್ಲ. ಯಾರೇ ತಪ್ಪು ಮಾಡಿದರೂ ಅದನ್ನು ಹತ್ತಿಕ್ಕಲಾಗುವುದು. ಪ್ರಕರಣಗಳ ತನಿಖೆಯ ಪ್ರಕ್ರಿಯೆಯನ್ನು ಪೊಲೀಸ್ ಇಲಾಖೆಗೆ ಬಿಟ್ಟು ಬಿಡಿ. ಅವರು ಯಾವುದೇ ಒತ್ತಡವಿಲ್ಲದೆ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಲಿದ್ದಾರೆ ಎಂದು ಹೇಳಿದರು.
ತಾವು ಮಂಗಳೂರಿಗೆ ಬಂದಾಗಲೆಲ್ಲಾ ಶಾಂತಿ ಹದಗೆಡಹುವ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರಾಕರಿಸಿದರು. ಅಂತಹ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ ಎನ್ನುತ್ತಾ ಮುಖ್ಯಮಂತ್ರಿ ಮುಂದಕ್ಕೆ ಸಾಗಿದರು.