ದೇವೇಗೌಡರ ಮಾತುಕೇಳಿ ಧರಂಸಿಂಗ್ ನನ್ನನ್ನು ಡಿಸ್ ಮಿಸ್ ಮಾಡಿದ್ದರು: ಸಿದ್ದರಾಮಯ್ಯ
ಧರಂಸಿಂಗ್ ಅವರ 86ನೇ ಜನ್ಮದಿನ ಕಾರ್ಯಕ್ರಮದಲ್ಲಿ ಹೇಳಿಕೆ

ಕಲಬುರಗಿ, ಡಿ.25: ಧರಂಸಿಂಗ್ ಅವರ 86 ನೆಯ ಜನ್ಮದಿನದ ಸಂದರ್ಭದಲ್ಲಿ ಅವರ ಹೆಸರಿನಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಿ 108 ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಇದೊಂದು ಬಡವರ ಪರವಾದ ಕಾರ್ಯವಾಗಿದ್ದು, ಶ್ಲಾಘನೀಯ ಎಂದರು.
ನಂತರ ಮಾತನಾಡಿದ ಅವರು "2004 ರಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಜೆಡಿಎಸ್ ಹಾಗೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ನಾನಾಗ ಜೆಡಿಎಸ್ ಅಧ್ಯಕ್ಷನಾಗಿದ್ದೆ. ಅಂದು ನಡೆದ ಮಾತುಕತೆಯಂತೆ ಧರಂಸಿಂಗ್ ಸಿಎಂ ಆದರು ನಾನು ಉಪಮುಖ್ಯಮಂತ್ರಿಯಾಗಿ ಒಂದು ವರ್ಷ ಎರಡು ತಿಂಗಳು ಅಧಿಕಾರ ನಡೆಸಿದೆ. ಆ ನಂತರ ದೇವೇಗೌಡರ ಮಾತುಕೇಳಿ ಧರಂಸಿಂಗ್ ನನ್ನನ್ನು ಡಿಸ್ ಮಿಸ್ ಮಾಡಿದರು. ಅದು ಅವರ ಸ್ವಂತ ನಿರ್ಧಾರವಾಗಿರಲಿಲ್ಲ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಜ್ಜನ ವಿನಯವಂತ ಹಾಗೂ ಕರುಣಾಮಯಿ ವ್ಯಕ್ತಿಯಾಗಿದ್ದ ಧರಂಸಿಂಗ್ ತನ್ನನ್ನು ಆತ್ಮೀಯವಾಗಿ ನೋಡುತ್ತಿದ್ದರು. ಜನಪರ ಕಾಳಜಿ ಹಾಗೂ ಅಭಿವೃದ್ದಿ ಮಾಡುವ ಆಲೋಚನೆಯಲ್ಲಿ ಇದ್ದವರು. ಎಂಟು ಬಾರಿ ಶಾಸಕ ಹಾಗೂ ಎರಡು ಬಾರಿ ಸಂಸದರಾಗಿ ಮತ್ತೆ ಸಿಎಂ ಆಗಿ ಜನರ ಕೆಲಸ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಲೇ ಇದ್ದರು. ಈ ಭಾಗದಲ್ಲಿ ಏನಾದರೂ ಅಭಿವೃದ್ದಿ ಆಗಿದ್ದರೆ ಖರ್ಗೆ ಹಾಗೂ ಧರಂಸಿಂಗ್ ಕಾರಣರಾಗಿದ್ದಾರೆ ಹಾಗಾಗಿ ಅವರನ್ನ ರಾಮ-ಲಕ್ಷ್ಮಣ ಎಂದೇ ಕರೆಯುತ್ತಿದ್ದರು ಎಂದರು.
ಚುನಾವಣೆಯಲ್ಲಿ ಸೋತಾಗಲೂ ಕೂಡಾ ಜನಪರ ಕೆಲಸ ಮಾಡುತ್ತಿದ್ದರು. ಕಲಬುರಗಿಗೆ ರಿಂಗ್ ರಸ್ತೆ ಅವರ ಕೊಡುಗೆ. ಸಂವಿಧಾನದ ತಿದ್ದುಪಡಿ ಮಾಡಿ 371 ಜಾರಿಗೆ ಆಗಿದ್ದರೆ ಖರ್ಗೆ ಹಾಗೂ ಧರಂಸಿಂಗ್ ಅವರ ಶ್ರಮದಿಂದ ಆಗಿದೆ ಎಂದರು.
ಶಾಸಕರಾದ ಪ್ರಿಯಾಂಕ್ ಖರ್ಗೆ ಮಾತನಾಡಿ, "ಹಿರಿಯ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಅನುಪಸ್ಥಿತಿಯಲ್ಲಿ ಅವರ ಪರವಾಗಿ ಧರಂ ಸಿಂಗ್ ಫೌಂಡೇಶನ್ ಅವರಿಗೆ ಹಾಗೂ ಇಂದು ವಿವಾಹವಾದ 108 ಜೋಡಿಗಳಿಗೆ ಶುಭಾಶಯ ತಿಳಿಸಿದರು.
ರಾಜಕೀಯದಲ್ಲಿ ಯಾವುದೇ ಶತ್ರುಗಳನ್ನು ಹೊಂದಿರದ ಅಜಾತಶತ್ರು ಎಂದೇ ಹೆಸರಾಗಿದ್ದ ಧರಂಸಿಂಗ್ ಅವರು ಬಸವ ತತ್ವದ ಪ್ರತಿಪಾದಕರಾಗಿದ್ದರು ಎಂದರು. ನಾನು ಮೊದಲ ಬಾರಿಗೆ ಉಪಚುನಾವಣೆಯಲ್ಲಿ ನಿಂತು ಸೋತಾಗ, ನನಗೆ ಕರೆ ಮಾಡಿ ಚುನಾವಣೆಯಲ್ಲಿ ಸೋತರೂ ಮನೆಯಲ್ಲಿ ಕೂಡಬೇಡ. ಇಂದಿರಾಗಾಂಧಿ ಕೂಡಾ ಚುನಾವಣೆಯಲ್ಲಿ ಸೋತಿದ್ದರು. ಆಮೇಲೆ ಪ್ರಧಾನಿಯಾದರು. ನೀನು ಕೂಡಾ ರಾಜಕೀಯದಲ್ಲೇ ಜನರ ಮಧ್ಯೆ ಇರು. ಮುಂದೊಂದು ದಿನ ಒಳ್ಳೆಯ ಸ್ಥಾನಕ್ಕೆ ಏರುತ್ತೀಯ ಎಂದಿದ್ದರು. ಅವರ ಮಾತು ನನಗೆ ಆಶೀರ್ವಾದದ ರೂಪದಲ್ಲಿ ಒಲಿದಿದೆ ಎಂದು ಪ್ರಿಯಾಂಕ್ ಹೇಳಿದರು.
ಈ ಮುನ್ನ ಪ್ರಾಸ್ತಾವಿಕ ಮಾತನಾಡಿದ ಶಾಸಕ ಅಜಯ್ ಸಿಂಗ್ ಬಡವರಿಗಾಗಿ ಉಚಿತ ಕಲ್ಯಾಣ ಮಂಟಪ ನಿರ್ಮಾಣ ಮಾಡುವುದು ತಮ್ಮ ತಂದೆಯ ಕನಸಾಗಿತ್ತು.ನಿಮ್ಮೆಲ್ಲರ ಆಶೀರ್ವಾದದಿಂದ ಕಲ್ಯಾಣ ಮಂಟಪ ನಿರ್ಮಾಣದ ಜೊತೆಗೆ ಇಂದು 108 ಜೋಡಿಗಳ ಉಚಿತ ಸಾಮೂಹಿಕ ವಿವಾಹ ನೆರವೇರಿಸಲಾಗಿದೆ ಎಂದರು.
ವೇದಿಕೆಯ ಮೇಲೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ಸತೀಶ್ ಜಾರಕಿಹೊಳಿ ಹಾಗೂ ರಾಮಲಿಂಗಾರೆಡ್ಡಿ, ಮುಖ್ಯ ಸಚೇತಕರಾದ ಅಜಯ್ ಸಿಂಗ್ ಶಾಸಕರಾದ ಎಂ ವೈ ಪಾಟೀಲ, ಶರಣಬಸಪ್ಪಗೌಡ ದರ್ಶನಾಪುರ, ಪ್ರಿಯಾಂಕ್ ಖರ್ಗೆ , ಮಾಜಿ ಸಿಎಂ ಧರಮ್ ಸಿಂಗ್ ಅವರ ಧರ್ಮಪತ್ನಿ ಪ್ರಭಾವತಿ, ಮಾಜಿ ಸಚಿವರಾದ ಶರಣಪ್ರಕಾಶ ಪಾಟೀಲ್, ಮಾಜಿ ಎಂಎಲ್ ಸಿ ವಿಜಯ್ ಸಿಂಗ್ ಅಲ್ಲಮಪ್ರಭು ಪಾಟೀಲ ಸೇರಿದಂತೆ ವಿವಿಧ ಮಠಗಳ ಸ್ವಾಮಿಜಿಗಳು ಉಪಸ್ಥಿತರಿದ್ದರು.







