ಬೊಮ್ಮಾಯಿ ವಚನ ಭ್ರಷ್ಟರಾದರೆ ಎಚ್‍ಡಿಕೆ ಗತಿಯೇ ಆಗಲಿದೆ: ಬಿಜೆಪಿ ಶಾಸಕ ಯತ್ನಾಳ್ ಎಚ್ಚರಿಕೆ

ಬೆಳಗಾವಿ, ಡಿ.25: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ತಾಯಿ ಮೇಲೆ ಆಣೆ ಮಾಡಿದ್ದಾರೆ. ಹಾಗೊಂದು ಬಾರಿ ಅವರು ಏನಾದರೂ ವಚನಭ್ರಷ್ಟರಾದರೆ ಈ ಹಿಂದೆ ಬಿಜೆಪಿಗೆ ಅಧಿಕಾರ ಬಿಟ್ಟುಕೊಡುವುದಾಗಿ ಹೇಳಿ ವಚನಭ್ರಷ್ಟರಾದ ಎಚ್‍ಡಿಕೆ ಗೆ ಆದ ಗತಿಯೇ ಇವರಿಗೂ ಆಗಲಿದೆ ಎಂದು ಕೇಂದ್ರ ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.
ರವಿವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರು ತಾಯಿಯ ಆಣೆ ಮಾಡಿದ್ದರಿಂದ ಇದೇ ಡಿ.29ರಂದು ಮೀಸಲಾತಿ ಘೋಷಿಸುವ ವಿಶ್ವಾಸ ಇದ್ದು, ಅಲ್ಲಿಯವರೆಗೆ ಕಾಯಬೇಕಾಗಿದೆ ಎಂದು ತಿಳಿಸಿದರು.
ಇತರೆ ಸಮುದಾಯಗಳು ಮೀಸಲಾತಿ ಕೇಳುತ್ತಿರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಸರಕಾರ ಎಲ್ಲವನ್ನೂ ಪರಿಶೀಲಿಸಲಿದೆ. ಅಲ್ಲದೆ, ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಯತ್ನಾಳ, ಮೂರು ತಿಂಗಳಿಗೆ ಸಚಿವನಾಗುವ ಆಸೆ ನನಗಿಲ್ಲ. ಮೀಸಲಾತಿ ಕೊಡಿ, ಕಥೆ ಹೇಳಬೇಡಿ ಎಂದ್ದಿದ್ದೇನೆ. ಈಶ್ವರಪ್ಪ, ರಮೇಶ ಜಾರಕಿಹೊಳಿ, ಸಿ.ಪಿ.ಯೋಗೀಶ್ವರ ಅವರನ್ನು ಬೇಕಾದರೆ ಸಚಿವರನ್ನಾಗಿ ಮಾಡಲಿ ಎಂದು ಹೇಳಿದರು.





