ಬಿಜೆಪಿ ರಾಮನಿಂದ ಸೀತೆಯನ್ನು ಬೇರ್ಪಡಿಸಿದೆ: ‘ಜೈ ಶ್ರೀರಾಮ್’ ಘೋಷಣೆ ಕುರಿತು ಅಶೋಕ್ ಗೆಹ್ಲೋಟ್

ಜೈಪುರ, ಡಿ. 25: ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ ಯಾತ್ರೆ’ ಸಂದರ್ಭ ‘ಜೈ ಶ್ರೀರಾಮ್’ ಘೋಷಣೆ ಕೂಗಿದ ಬಿಜೆಪಿ ಹಾಗೂ ಆರ್ಎಸ್ಎಸ್ ಅನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ಹಾಗೂ ಆರೆಸ್ಸೆಸ್ ಅನ್ನು ಗುರಿಯಾಗಿರಿಸಿದ ಅಶೋಕ್ ಗೆಹ್ಲೋಟ್, ‘‘ಅವರು ರಾಮನಿಂದ ಸೀತೆಯನ್ನು ಪ್ರತ್ಯೇಕಿಸಿದ್ದಾರೆ. ಅದಕ್ಕಾಗಿ ನಾವು ಜೈ ಸಿಯಾ ರಾಮ್ ಎಂದು ಹೇಳುತ್ತೇವೆ. ನಾವು ಜೈ ಸಿಯಾರಾಮ್ ಎಂದು ಹೇಳಿದಾಗ, ಜನರಿಂದ ನಾವು ಅಗಾಧ ಪ್ರತಿಕ್ರಿಯೆ ಪಡೆಯುತ್ತೇವೆ’’ ಎಂದು ಅವರು ಹೇಳಿದ್ದಾರೆ.
‘‘ಜೈ ಶ್ರೀರಾಮ್ ಎಂದು ಘೋಷಣೆ ಕೂಗುವ ಮೂಲಕ ಬಿಜೆಪಿ ಭಯ ಹಾಗೂ ಭೀತಿಯನ್ನು ಪ್ರಚೋದಿಸುತ್ತದೆ. ರಾಹುಲ್ ಗಾಂಧಿ ಅವರು ಮಹಾತ್ಮಾ ಗಾಂಧಿ ಅವರ ಆದರ್ಶವನ್ನು ಅನುಸರಿಸುತ್ತಾರೆ. ಅವರು ಪ್ರೀತಿಯ ಮೂಲಕ ಭಯವನ್ನು ಜಯಿಸುತ್ತಾರೆ’’ ಎಂದು ಗೆಹ್ಲೋಟ್ ಹೇಳಿದ್ದಾರೆ.
ಜೈಪುರದಲ್ಲಿ ರವಿವಾರ 167 ನೂತನ ಬೇಸಿಕ್ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್ ಸೇವೆ 108 ಅನ್ನು ಲೋಕಾರ್ಪಣೆಗೊಳಿಸಿದ ಬಳಿಕ ಗೆಹ್ಲೋಟ್ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
ರಾಹುಲ್ ಗಾಂಧಿ ಅವರು ಯಾತ್ರೆಯ ಮೂಲಕ ಹರಡಲು ಪ್ರಯತ್ನಿಸುತ್ತಿರುವ ಪ್ರೀತಿ, ಸಾಮರಸ್ಯ ಹಾಗೂ ಸಹೋದರತ್ವದ ಸಂದೇಶದ ಬಗ್ಗೆ ಗೆಹ್ಲೋಟ್ ಗಮನ ಸೆಳೆದರು.
ಜಾತಿ, ಮತ, ಧರ್ಮಗಳ ಹೆಸರಿನಲ್ಲಿ ಬಿಜೆಪಿ ಹೇಗೆ ಚುನಾವಣೆ ಗೆಲ್ಲುತ್ತಿದೆ ಎಂದು ಜನರಿಗೆ ಸ್ಪಷ್ಟವಾಗುತ್ತಿದೆ. ಬಿಜೆಪಿ ಹಾಗೂ ಆರ್ಎಸ್ಎಸ್ ಹಿಂದೂ ಧರ್ಮದ ದೊಂದಿ ಹೊತ್ತವರು ಎಂದು ಪ್ರಚಾರ ಮಾಡುತ್ತಿವೆ ಎಂದು ಅವರು ಹೇಳಿದರು.







