ಚೀನಾ ಗಡಿಯಲ್ಲಿ ಸಶಸ್ತ್ರ ಪಡೆಗಳಿಗಾಗಿ 120 ‘ಪ್ರಳಯ’ ಕ್ಷಿಪಣಿಗಳಿಗೆ ಕೇಂದ್ರದ ಅಸ್ತು

ಹೊಸದಿಲ್ಲಿ, ಡಿ.25: ಸಂಘರ್ಷದ ನಡುವೆಯೇ ಸಶಸ್ತ್ರ ಪಡೆಗಳಿಗಾಗಿ 120 ‘ಪ್ರಳಯ’ ವ್ಯೂಹಾತ್ಮಕ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಖರೀದಿ ಯೋಜನೆಗೆ ರಕ್ಷಣಾ ಸಚಿವಾಲಯವು ಹಸಿರು ನಿಶಾನೆಯನ್ನು ತೋರಿಸಿದ್ದು, ಈ ಕ್ಷಿಪಣಿಗಳನ್ನು ಚೀನಾ ಗಡಿಯಲ್ಲಿ ನಿಯೋಜಿಸಲಾಗುತ್ತದೆ. ಸಶಸ್ತ್ರ ಪಡೆಗಳ ಇತಿಹಾಸದಲ್ಲಿಯೇ ಯುದ್ಧತಂತ್ರ ಕಾರ್ಯಾಚರಣೆಗಳಲ್ಲಿ ಬಳಕೆಗಾಗಿ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗೆ ಮೊದಲ ಬಾರಿಗೆ ಸರಕಾರವು ಅನುಮತಿ ನೀಡಿದೆ.
ಉನ್ನತ ಮಟ್ಟದ ರಕ್ಷಣಾ ಸಚಿವಾಲಯದ ಸಭೆಯಲ್ಲಿ 120 ಪ್ರಳಯ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಖರೀದಿ ಪ್ರಸ್ತಾವಕ್ಕೆ ಒಪ್ಪಿಗೆ ಲಭಿಸಿರುವುದು ರಾಕೆಟ್ ಪಡೆಯನ್ನು ಸೃಷ್ಟಿಸುವ ಯೋಜನೆಗೆ ಉತ್ತೇಜನ ನೀಡಿದೆ ಎಂದು ಉನ್ನತ ಸರಕಾರಿ ಮೂಲಗಳು ತಿಳಿಸಿವೆ. ಕ್ಷಿಪಣಿಗಳನ್ನು ಈಗ ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುತ್ತಿದೆ ಮತ್ತು ಸದ್ಯೋಭವಿಷ್ಯದಲ್ಲಿ ಕಾರ್ಯಾಚರಣೆ ಸೇವೆಗಳಿಗೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಅವು ತಿಳಿಸಿದವು.
ಯೋಜನೆಯು ದಿವಂಗತ ಸಿಡಿಎಸ್ ಜ.ಬಿಪಿನ್ ರಾವತ್ ಅವರು ಪ್ರತಿಪಾದಿಸಿದ್ದ ಗಡಿಗಳಲ್ಲಿ ಶತ್ರುಗಳನ್ನು ಎದುರಿಸಲು ವ್ಯೂಹಾತ್ಮಕ ರಾಕೆಟ್ ಪಡೆಯನ್ನು ಅಭಿವೃದ್ಧಿಗೊಳಿಸುವ ಸಶಸ್ತ್ರ ಪಡೆಗಳ ಪ್ರಯತ್ನಗಳಿಗೆ ಗಣನೀಯ ಪ್ರೋತ್ಸಾಹವನ್ನು ನೀಡಲಿದೆ. ಕಳೆದ ವರ್ಷದ ಡಿಸೆಂಬರ್ನಲ್ಲಿ ಸತತ ಎರಡು ದಿನಗಳ ಕಾಲ ಪ್ರಳಯ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದ್ದು, ಅದು 150 ಕಿ.ಮೀ.ನಿಂದ 500 ಕಿ.ಮೀ.ವರೆಗೆ ವ್ಯಾಪ್ತಿಯನ್ನು ಹೊಂದಿದೆ.





