ಜಲೀಲ್ ಹತ್ಯೆ ದ.ಕ. ಜಿಲ್ಲಾ ಪೊಲೀಸ್ ಗುಪ್ತಚರ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ: ಎಸ್ ಡಿಪಿಐ

ಮಂಗಳೂರು ಡಿ.26: ಕೃಷ್ಣಾಪುರದಲ್ಲಿ ನಡೆದ ಅಬ್ದುಲ್ ಜಲೀಲ್ ಹತ್ಯೆ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮತೀಯ ಶಕ್ತಿಗಳು ನಡೆಸುತ್ತಿರುವ ಅನೈತಿಕ ಪೊಲೀಸ್ ಗಿರಿ , ಹಾಗೂ ಗೂಂಡಾಗಿರಿಗೆ ಕಡಿವಾಣ ಹಾಕದ ಪೊಲೀಸ್ ಇಲಾಖೆ ಮತ್ತು ಗುಪ್ತಚರ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು SDPI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಚುನಾವಣೆ ಹತ್ತಿರ ಬರುತ್ತಿರುವ ದಿನಗಳಲ್ಲಿ ಬಿಜೆಪಿ ಮತ್ತು ಸಂಘಪರಿವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಾಜಕತೆ ಸ್ರಷ್ಟಿಸಿ ಮತ ಬ್ಯಾಂಕ್ ಗಟ್ಟಿಗೊಳಿಸುವ ನೀಚ ರಾಜಕೀಯದ ಚಾಳಿಯನ್ನು ಮುಂದುವರಿಸುವ ಮೂಲಕ ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಕೊಳ್ಳಿ ಇಡುತ್ತಿದೆ ಎಂದು ಆರೋಪಿಸಿದರು.
ಕಳೆದ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಯನ್ನೇ ಅಣಕಿಸುವ ರೀತಿಯಲ್ಲಿ ಸಂಘ ಪರಿವಾರ ಬೇಕಾಬಿಟ್ಟಿ ಗೂಂಡಾಗಿರಿ ನಡೆಸುತ್ತಿದ್ದಾಗ ಅದರ ಗಂಭೀರತೆ ಬಗ್ಗೆ SDPI ಪೊಲೀಸ್ ಇಲಾಖೆಯನ್ನು, ಗುಪ್ತಚರ ಇಲಾಖೆಯನ್ನು ಎಚ್ಚರಿಸಿತ್ತು ಆದರೆ ಇದ್ಯಾವುದನ್ನು ಇಲಾಖೆ ಗಂಭೀರವಾಗಿ ತೆಗೆದು ಕೊಳ್ಳದೆ ಆರೋಪಿಗಳಿಗೆ ಒಂದೇ ದಿನದಲ್ಲಿ ಜಾಮೀನು ದೊರೆಯುವಂತಹ ಕೇಸುಗಳನ್ನು ದಾಖಲಿಸಿತು. ಇದರಿಂದ ಪ್ರೇರಿತವಾಗಿ ದುಷ್ಕರ್ಮಿಗಳು ಅಕ್ರಮ ಕೂಟಗಳನ್ನು ಕಟ್ಟಿಕೊಂಡು ಇಂದು ಕೊಲೆ ನಡೆಸುವ ಹಂತಕ್ಕೆ ಬಂದಿದೆ. ಈ ಎಲ್ಲಾ ಘಟನೆಗಳು ಕೇವಲ ಒಂದೋ ಎರಡೋ ವ್ಯಕ್ತಿಗಳಿಂದ ನಡೆಯಲು ಸಾದ್ಯವಿಲ್ಲ ಇದರ ಹಿಂದೆ ಸಂಘಟಿದ ಅಪರಾದದ ವ್ಯವಸ್ಥಿತ ಷಡ್ಯಂತ್ರವಿದೆ ಅದ್ದರಿಂದ , ಪೊಲೀಸ್ ಇಲಾಖೆ ಮತ್ತು ಸರಕಾರ ಕೂಡಲೇ ಈ ಘಟನೆಯನ್ನು ಯುಎಪಿಐ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅರೋಪಿಗಳನ್ನು ಮತ್ತು ಅದರ ಹಿಂದಿರುವ ಕಾಣದ ಕೈಗಳನ್ನು ಬಂಧಿಸಿ ಪೊಲೀಸ್ ಇಲಾಖೆಯ ಮೇಲೆ ಜನಸಾಮಾನ್ಯರಿಗೆ ವಿಶ್ವಾಸ ಮೂಡಿಸಬೇಕು ಎಂದವರು ಒತ್ತಾಯಿಸಿದ್ದಾರೆ.
ಸಂಘಪರಿವಾರದ ಸಂಘಟನೆಗಳಿಗೆ ಸೇರಿದ ವ್ಯಕ್ತಿಗಳ ಮೇಲೆ ಹಲ್ಲೆ, ಕೊಲೆಗಳು ನಡೆದಾಗ ಪೊಲೀಸ್ ಇಲಾಖೆ ತೋರುವ ಉತ್ಸಾಹ ಅಮಾಯಕ ಮುಸ್ಲಿಂ ಯುವಕರ ಕೊಲೆಗಳು ನಡೆದಾಗ ಪೊಲೀಸರು ಯಾಕಾಗಿ ತೋರುವುದಿಲ್ಲ ,ಸಂಘಪರಿವಾರದ ಯುವಕರ ಜೀವಕ್ಕಿರುವ ಬೆಲೆ ಇತರ ಸಮುದಾಯದ ಯುವಕರಿಗೆ ಇಲ್ಲವೇ ಎಂದು ಅವರು ಪ್ರಶ್ನಿಸಿದರು.
ಸರಕಾರ ಮತ್ತು ಪೊಲೀಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕೊಲೆಯಾದ ಜಲೀಲ್ ಕುಟುಂಬಕ್ಕೆ ಕನಿಷ್ಟ ಪಕ್ಷ ಇಪ್ಪತ್ತೈದು ಲಕ್ಷ ರೂ. ಪರಿಹಾರ ಮತ್ತು ಕುಟುಂಬದ ಸದಸ್ಯನೊಬ್ಬನಿಗೆ ಸರಕಾರಿ ಹುದ್ದೆ ನೀಡಬೇಕು ಮತ್ತು ಕರಾವಳಿಯಲ್ಲಿ ಪದೇ ಪದೇ ನಡೆಯುತ್ತಿರುವ ಇಂತಹ ಘಟನೆಗಳನ್ನು ನಿಯಂತ್ರಿಸಲು ಜಿಲ್ಲೆಗೆ ವಿಶೇಷ ಟಾಸ್ಕ್ ಫೋರ್ಸ್ ಒಂದನ್ನ ರಚಿಸಬೇಕು ಎಂದು ಅನ್ವರ್ ಸಾದತ್ ಪ್ರಕಟಣೆಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.