2023ರಲ್ಲಿ ಜಾಗತಿಕ ಆರ್ಥಿಕ ಕುಸಿತ: ಸೆಂಟರ್ ಫಾರ್ ಎಕನಾಮಿಕ್ಸ್ ಆಂಡ್ ಬಿಸಿನೆಸ್ ರಿಸರ್ಚ್ ವರದಿ

ಹೊಸದಿಲ್ಲಿ: ಜಗತ್ತು 2023 ರಲ್ಲಿ ಆರ್ಥಿಕ ಹಿಂಜರಿತ ಎದುರಿಸಲಿದೆ, ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಸಾಲಗಳ ಮೇಲಿನ ಬಡ್ಡಿ ದರಗಳು ಏರಿಕೆಯಾಗಲಿರುವುದರಿಂದ ಆರ್ಥಿಕತೆಗಳು ಸಂಕುಚಿತಗೊಳ್ಳಲಿವೆ ಎಂದು ಸೆಂಟರ್ ಫಾರ್ ಇಕನಾಮಿಕ್ಸ್ ಎಂಡ್ ಬಿಸಿನೆಸ್ ರಿಸರ್ಚ್ ಹೇಳಿದೆ.
"ಜಾಗತಿಕ ಅರ್ಥವ್ಯವಸ್ಥೆ 2022 ರಲ್ಲಿ ಮೊದಲ ಬಾರಿಗೆ 100 ಟ್ರಿಲಿಯನ್ ಡಾಲರ್ ದಾಟಿದರೂ, ಹಣದುಬ್ಬರನನ್ನು ನಿಯಂತ್ರಿಸಲು ನೀತಿ ನಿರೂಪಕರು ಶ್ರಮಿಸುತ್ತಿರುವಂತೆಯೇ 2023 ರಲ್ಲಿ ಆರ್ಥಿಕ ಹಿಂಜರಿತ ಉಂಟಾಗಲಿದೆ ಎಂದು ತನ್ನ ವಾರ್ಷಿಕ ವರ್ಲ್ಡ್ ಇಕನಾಮಿಕ್ ಲೀಗ್ ಟೇಬಲ್‌ನಲ್ಲಿ ಬ್ರಿಟಿಷ್ ಕನ್ಸಲ್ಟನ್ಸಿ ಸಂಸ್ಥೆಯಾಗಿರುವ ಸೆಂಟರ್ ಫಾರ್ ಇಕನಾಮಿಕ್ಸ್ ಎಂಡ್ ಬಿಸಿನೆಸ್ ರಿಸರ್ಚ್ ಹೇಳಿದೆ.
"ಹಣದುಬ್ಬರದ ವಿರುದ್ಧದ ಹೋರಾಟ ಇನ್ನೂ ನಿಂತಿಲ್ಲ. ಹಣದುಬ್ಬರವನ್ನು ಕಡಿಮೆಗೊಳಿಸುವ ಯತ್ನಗಳು ಮುಂದಿನ ಹಲವು ವರ್ಷಗಳಲ್ಲಿ ಪ್ರಗತಿ ಪ್ರಮಾಣ ಇಳಿಕೆಗೆ ಕಾರಣವಾಗಲಿದೆ," ಎಂದು ಸಂಸ್ಥೆ ಹೇಳಿದೆ.
"ಚೀನಾ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವಿನ ಆರ್ಥಿಕ ಯುದ್ಧದ ಪರಿಣಾಮಗಳು ಉಕ್ರೇನ್ ಮೇಲಿನ ರಷ್ಯಾ ಆಕ್ರಮಣದ ಪರಿಣಾಮಕ್ಕಿಂತಲೂ ತೀವ್ರವಾಗಲಿದೆ. ತೀಕ್ಷ್ಣ ಆರ್ಥಿಕ ಹಿಂಜರಿತ ಬಹುತೇಕ ಖಚಿತ ಹಾಗೂ ಹಣದುಬ್ಬರ ಏರಿಕೆಯಾಗಲಿದೆ, ಚೀನಾಗೆ ಇದರಿಂದುಂಟಾಗಲಿರುವ ಹಾನಿ ಬಹಳಷ್ಟು ಹೆಚ್ಚು ಹಾಗೂ ಜಾಗತಿಕ ಆರ್ಥಿಕತೆಯನ್ನು ಮುನ್ನಡೆಸುವ ಅದರ ಯಾವುದೇ ಯುತ್ನ ಫಲಗೂಡದು," ಎಂದು ವರದಿ ಹೇಳಿದೆ.
ಭಾರತವು 2035 ರಲ್ಲಿ 10 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಹಾಗೂ 2032 ರಲ್ಲಿ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ ಎಂದೂ ವರದಿ ಹೇಳಿದೆ.
ಮುಂದಿನ 15 ವರ್ಷ ಅವಧಿಯಲ್ಲಿ ಇಂಗ್ಲೆಂಡ್ ಜಗತ್ತಿನ ಆರನೇ ಅತಿ ದೊಡ್ಡ ಆರ್ಥಿಕತೆ ಹಾಗೂ ಫ್ರಾನ್ಸ್ ಏಳನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ," ಎಂದು ವರದಿ ಹೇಳಿದೆ.