ಜಲೀಲ್ ಹತ್ಯೆ ಪ್ರಕರಣ: ಬಂಧಿತ ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ

ಮಂಗಳೂರು: ಕೃಷ್ಣಾಪುರ 4ನೆ ಬ್ಲಾಕ್ ನೈತಂಗಡಿ ಬಳಿ ಶನಿವಾರ ರಾತ್ರಿ ನಡೆದ ಅಬ್ದುಲ್ ಜಲೀಲ್ (43)ರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳಿಗೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಕೃಷ್ಣಾಪುರ ನೈತಂಗಡಿ ನಿವಾಸಿ ಶೈಲೇಶ್ ಅಲಿಯಾಸ್ ಶೈಲೇಶ್ ಪೂಜಾರಿ(21), ಉಡುಪಿಯ ಹೆಜಮಾಡಿ ನಿವಾಸಿ ಸವಿನ್ ಕಾಂಚನ್ ಅಲಿಯಾಸ್ ಮುನ್ನ (24) ಹೆಜಮಾಡಿ ಉಡುಪಿ, ಕೃಷ್ಣಾಪುರ 3ನೇ ಬ್ಲಾಕ್ ನಿವಾಸಿ ಪವನ್ ಅಲಿಯಾಸ್ ಪಚ್ಚು (23) ಬಂಧಿತ ಆರೋಪಿಗಳು.
ಬಂಧಿತರ ಪೈಕಿ ಇಬ್ಬರು ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಆರೋಪಿಗಳಾಗಿದ್ದರೆ, ಇನ್ನೋರ್ವ ಆರೋಪಿಗಳಿಗೆ ಬೈಕಿನಲ್ಲಿ ಪರಾರಿಯಾಗಲು ನೆರವಾದವನು ಎಂದು ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಆರೋಪಿಗಳನ್ನು ರವಿವಾರ ರಾತ್ರಿ ಬಂಧಿಸಲಾಗಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಸದ್ಯದ ವಿಚಾರಣೆಯಲ್ಲಿ ಬಂಧಿತ ಮೂವರು ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಯಾವ ಕಾರಣಕ್ಕೆ ಈ ಕೊಲೆ ಮಾಡಲಾಗಿದೆ, ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲಾಗುವುದು ಎಂದು ಶಶಿಕುಮಾರ್ ಅವರು ತಿಳಿಸಿದ್ದಾರೆ.
ಬಂಧಿತರ ಪೈಕಿ ಇಬ್ಬರ ವಿರುದ್ಧ ಸುರತ್ಕಲ್ ಠಾಣೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. 2021ರಲ್ಲಿ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಇವರು ಭಾಗಿಯಾಗಿರುವುದು ತಿಳಿದುಬಂದಿದೆ ಎಂದವರು ಹೇಳಿದರು.
ಜಲೀಲ್ ಕೊಲೆ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಬಂಧನಕ್ಕೆ ಕ್ರಮ ಕೈಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಅಬ್ದುಲ್ ಜಲೀಲ್ ಅವರನ್ನು ಶನಿವಾರ ರಾತ್ರಿ ಕೃಷ್ಣಾಪುರ 4ನೆ ಬ್ಲಾಕ್ ನೈತಂಗಡಿ ಬಳಿಯಿರುವ ಅವರ ಫ್ಯಾನ್ಸಿ ಮತ್ತು ಚಪ್ಪಲಿಯ ಅಂಗಡಿಯಲ್ಲಿ ಕೊಲೆಗೈಯಲಾಗಿದೆ. ಅಂಗಡಿಗೆ ನುಗ್ಗಿದ ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ಜಲೀಲ್ ಅವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು. ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಅವರು ಕೊನೆಯುಸಿರೆಳೆದಿದ್ದರು.
ಇದನ್ನೂ ಓದಿ: ಡಿ.29ರ ವರೆಗೆ ಸೆಕ್ಷನ್ 144 ಮುಂದುವರಿಕೆ: ಮಂಗಳೂರು ಪೊಲೀಸ್ ಆಯುಕ್ತ