ಸುರಕ್ಷತೆ ಮುಖ್ಯ, ಕಾಶ್ಮೀರಿ ಪಂಡಿತರನ್ನು ಜಮ್ಮುಗೆ ಸ್ಥಳಾಂತರಿಸಬೇಕು: ಗುಲಾಂ ನಬಿ ಆಜಾದ್

ಹೊಸದಿಲ್ಲಿ,ಡಿ.26: ಕಾಶ್ಮೀರಿ ಪಂಡಿತರ ಸುರಕ್ಷತೆಗಾಗಿ ಸೋಮವಾರ ಕರೆ ನೀಡಿದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್(Ghulam Nabi Azad) ಅವರು,ಕಾಶ್ಮೀರ ಕಣಿವೆಯಲ್ಲಿನ ಸ್ಥಿತಿಯಲ್ಲಿ ಸುಧಾರಣೆಯಾಗುವವರೆಗೂ ಅವರನ್ನು ಜಮ್ಮುವಿಗೆ ಸ್ಥಳಾಂತರಿಸಬೇಕು ಎಂದು ಹೇಳಿದರು. ಈ ವರ್ಷ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳು ಮತ್ತು ನಾಗರಿಕರ ಹತ್ಯೆಗಳಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪಂಡಿತರ ಕುರಿತು ಈ ಹೇಳಿಕೆ ಹೊರಬಿದ್ದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆಜಾದ್,‘ನನ್ನ ಅಧಿಕಾರಾವಧಿಯಲ್ಲಿ ಪಂಡಿತರಿಗೆ ಉದ್ಯೋಗಳನ್ನು ನೀಡಲು ಪ್ರಸ್ತಾವವನ್ನು ನಾವು ಮನಮೋಹನ ಸಿಂಗ್ (Manmohan Singh) ಸರಕಾರಕ್ಕೆ ಸಲ್ಲಿಸಿದ್ದೆವು. ಸುಮಾರು 3,000 ಪಂಡಿತರಿಗೆ ಉದ್ಯೋಗಗಳನ್ನು ಒದಗಿಸಲಾಗಿತ್ತು. ಆದರೆ ಆ ಸಮಯದಲ್ಲಿ ಅವರಿಗೆ ಯಾರೂ ತೊಂದರೆಯನ್ನುಂಟು ಮಾಡಿರಲಿಲ್ಲ. ಆದರೆ ಈಗ ಹಲವಾರು ಘಟನೆಗಳು ವರದಿಯಾಗಿವೆ. ಜೀವವು ಅತ್ಯಂತ ಮುಖ್ಯವಾಗಿದೆ. ಸುರಕ್ಷತೆಗಾಗಿ ಕಾಶ್ಮೀರಿ ಪಂಡಿತರನ್ನು ಜಮ್ಮುಗೆ ಸ್ಥಳಾಂತರಿಸಬೇಕು ಎನ್ನುವುದು ನನ್ನ ಸಲಹೆ. ಪರಿಸ್ಥಿತಿಯಲ್ಲಿ ಸುಧಾರಣೆಯಾದ ಬಳಿಕ ಅವರನ್ನು ವಾಪಸ್ ಕರೆಸಬಹುದು ’ಎಂದರು.
‘ಜೀವಗಳಿಗಿಂತ ಉದ್ಯೋಗಗಳು ಹೆಚ್ಚು ಮುಖ್ಯವಲ್ಲ. ಈ ಬಗ್ಗೆ ಈಗಿನ ಆಡಳಿತವು ಏನನ್ನು ಯೋಚಿಸುತ್ತಿದೆ ಎನ್ನುವುದು ನನಗೆ ಖಚಿತವಿಲ್ಲ. ಆದರೆ ನಾವು ಅಧಿಕಾರಕ್ಕೆ ಮರಳಿದರೆ ಅದನ್ನು ಮಾಡುತ್ತೇವೆ. ಸುರಕ್ಷತಾ ಮತ್ತು ಭದ್ರತಾ ಕಳವಳಗಳ ದೃಷ್ಟಿಯಿಂದ ಕಾಶ್ಮೀರಿ ಪಂಡಿತರ ಸ್ಥಳಾಂತರಕ್ಕೆ ಮನವಿಗಳನ್ನು ಮಾಡಲಾಗಿದೆ ’ ಎಂದೂ ಆಜಾದ್ ಹೇಳಿದರು.





