ಉಡುಪಿ: 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಮುಂಜಾಗ್ರತಾ ಡೋಸ್ ಲಸಿಕೆ ಪಡೆಯಲು ಸೂಚನೆ

ಉಡುಪಿ: ಚೀನಾ, ರಿಪಬ್ಲಿಕ್ ಆಫ್ ಕೊರಿಯಾ, ಜಪಾನ್, ಅಮೆರಿಕ ಹಾಗೂ ಬ್ರೆಝಿಲ್ ದೇಶಗಳಲ್ಲಿ ಈಗಾಗಲೇ ಕೋವಿಡ್-19ರ 4ನೇ ಅಲೆ ಪ್ರಕರಣಗಳು ಹೆಚ್ಚುತ್ತಿದ್ದು, ಇದರಿಂದ ಸಂಭವಿಸಬಹುದಾದ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ದೇಶದ 18 ವರ್ಷ ಮೇಲ್ಪಟ್ಟ ಎಲ್ಲರೂ ಮುಂಜಾಗ್ರತಾ ಡೋಸ್ ಲಸಿಕೆ ಪಡೆಯಲು ಸೂಚಿಸಲಾಗಿದೆ.
ಜಿಲ್ಲೆಯಲ್ಲಿರುವ 18 ವರ್ಷ ಮೇಲ್ಪಟ್ಟವರಲ್ಲಿ 2ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದು 6 ತಿಂಗಳು ದಾಟಿದವರು ಸಮೀಪದ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ದಿನಾಂಕ ಮತ್ತು ಸಮಯವನ್ನು ನಿಗದಿ ಪಡಿಸಿ ಲಸಿಕೆ ಪಡೆಯಬಹುದಾಗಿದೆ.
ಅದೇ ರೀತಿ ಜಿಲ್ಲೆಯಲ್ಲಿರುವ 15ರಿಂದ 17 ವರ್ಷ ಪ್ರಾಯದ ಶಾಲಾ ಮಕ್ಕಳಲ್ಲಿ ಕೋವ್ಯಾಕ್ಸಿನ್ ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಇದ್ದಲ್ಲಿ ಶಾಲೆಗಳು ಸಂಬಂಧಪಟ್ಟ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯ ಬಗ್ಗೆ ಖಚಿತಪಡಿಸಿಕೊಂಡು ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ ಲಸಿಕೆ ಪಡೆಯಬೇಕು.
ಪ್ರಸ್ತುತ ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಮಾತ್ರ ಲಭ್ಯವಿದ್ದು, ಕೋವಿಶೀಲ್ಡ್ ಲಸಿಕೆಯು ಲಭ್ಯವಿರುವುದಿಲ್ಲ. ಕೋವಿಶೀಲ್ಡ್ ಲಸಿಕೆ ಜಿಲ್ಲೆಗೆ ಸರಬರಾಜಾದ ತಕ್ಷಣ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
3 ಲಕ್ಷ ಮಂದಿಗೆ ಬೂಸ್ಟರ್ ಡೋಸ್: ಜಿಲ್ಲೆಯಲ್ಲಿ ಈವರೆಗೆ 12ರಿಂದ 14 ವರ್ಷದೊಳಗಿನ ಮಕ್ಕಳಲ್ಲಿ 35,901 ಮಂದಿಗೆ ಮೊದಲ ಡೋಸ್, 35,876 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 15ರಿಂದ 18 ವರ್ಷದೊಳಗಿನ 49,357 ಮಂದಿ ಮೊದಲ ಡೋಸ್, 48,949 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.
18ರಿಂದ 44 ವರ್ಷದೊಳಗಿನವರಲ್ಲಿ 5,06,791 ಮಂದಿ ಮೊದಲ ಡೋಸ್, 5,06,791 ಮಂದಿ ಎರಡನೇ ಡೋಸ್ ಹಾಗೂ 71,569 ಮಂದಿ ಬೂಸ್ಟರ್ ಡೋಸ್‌ನ್ನು ಪಡೆದುಕೊಂಡಿದ್ದಾರೆ. 45 ವರ್ಷ ಮೇಲಿನವರಲ್ಲಿ 4,63,451 ಮಂದಿ ಮೊದಲ ಡೋಸ್, 4,63,221 ಮಂದಿ ಎರಡನೇ ಡೋಸ್ ಹಾಗೂ 2,03,510 ಮಂದಿ ಬೂಸ್ಟರ್ ಡೋಸ್ ಪಡೆದಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 10,90,872 ಮಂದಿ ಮೊದಲ ಡೋಸ್, 10,86,741 ಮಂದಿ ಎರಡನೇ ಡೋಸ್ ಹಾಗೂ 3,00,768 ಮಂದಿ ಬೂಸ್ಟರ್ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆಯ ಮಾಹಿತಿ ತಿಳಿಸಿದೆ.