180 ರೊಹಿಂಗ್ಯಾ ನಿರಾಶ್ರಿತರು ಸಮುದ್ರದಲ್ಲಿ ಮೃತಪಟ್ಟಿರುವ ಶಂಕೆ: ವಿಶ್ವಸಂಸ್ಥೆ

ಢಾಕ, ಡಿ.26: ಹಲವು ವಾರಗಳಿಂದ ಹಿಂದೂ ಮಹಾಸಾಗರದಲ್ಲಿ ದೋಣಿಯೊಂದರಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ಸುಮಾರು 180 ರೊಹಿಂಗ್ಯಾ ನಿರಾಶ್ರಿತರು ಮೃತಪಟ್ಟಿರುವ ಸಾಧ್ಯತೆಯಿರುವುದಾಗಿ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ(United Nations)ಯ ಸಮಿತಿ ಹೇಳಿದೆ. ಮ್ಯಾನ್ಮಾರ್ನಲ್ಲಿ ಅತೀವ ಕಿರುಕುಳಕ್ಕೆ ಒಳಗಾಗು ಸಾವಿರಾರು ಮುಸ್ಲಿಮ್ ರೊಹಿಂಗ್ಯಾಗಳು ಮ್ಯಾನ್ಮಾರ್ ನಿಂದ ಹಾಗೂ ಬಾಂಗ್ಲಾದೇಶದ ನಿರಾಶ್ರಿತರ ಶಿಬಿರದಿಂದ ತಪ್ಪಿಸಿಕೊಂಡು ಮಲೇಶ್ಯಾ ಅಥವಾ ಇಂಡೋನೇಶ್ಯಾ ತಲುಪುವ ಪ್ರಯತ್ನದಲ್ಲಿ ಅಪಾಯಕಾರಿ ಸಮುದ್ರ ಪ್ರಯಾಣ ಕೈಗೊಳ್ಳುತ್ತಾರೆ.
ಇದೀಗ ಮುಳುಗಿರುವ ದೋಣಿ ಕಳೆದ ತಿಂಗಳಾಂತ್ಯಕ್ಕೆ ಪ್ರಯಾಣ ಆರಂಭಿಸಿದ ಬಳಿಕ ಥೈಲ್ಯಾಂಡ್, ಮಲೇಶ್ಯಾ, ಇಂಡೊನೇಶ್ಯಾ, ಮಲಕ್ಕ ಜಲಸಂಧಿ ಹಾಗೂ ಭಾರತದ ಅಂಡಮಾನ್ ದ್ವೀಪದ ಸುತ್ತಮುತ್ತ ಅಲೆಯುತ್ತಿತ್ತು ಎಂದು ವರದಿಯಾಗಿದೆ.ದೋಣಿಯಲ್ಲಿದ್ದವರೊಂದಿಗೆ ಅವರ ಸಂಬಂಧಿಕರು ಸಂಪರ್ಕ ಕಡಿದುಕೊಂಡಿದ್ದು ಅಂತಿಮ ಬಾರಿ ಸಂಪರ್ಕದಲ್ಲಿದ್ದ ದೋಣಿಯಲ್ಲಿದ್ದ ವ್ಯಕ್ತಿ ‘ದೋಣಿಯಲ್ಲಿದ್ದವರು ಎಲ್ಲರೂ ಮೃತಪಟ್ಟಿರುವ ಸಾಧ್ಯತೆಯಿದೆ’ ಎಂದು ಯುಎನ್ಎಚ್ಸಿಆರ್(ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಹೈಕಮಿಷನ್) ಹೇಳಿದೆ.
ಒಂದು ಇದು ನಿಜವಾದರೆ, ಇದು ವಿನಾಶಕಾರಿ ಸುದ್ಧಿಯಾಗುತ್ತದೆ. ಈ ಆಘಾತಕಾರಿ ದುರಂತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಎಲ್ಲಾ ಕುಟುಂಬಗಳ ದುಖದಲ್ಲಿ ನಾವೂ ಪಾಲ್ಗೊಳ್ಳುತ್ತೇವೆ. ಜೀವಗಳನ್ನು ಉಳಿಸುವ ಕಾರ್ಯದಲ್ಲಿ ನೆರವಾಗುವಂತೆ ಈ ವಲಯದ ದೇಶಗಳಿಗೆ ನಮ್ಮ ಮನವಿಯನ್ನು ಪುನರಾವರ್ತಿಸುತ್ತೇವೆ. ಇದು ಆದ್ಯತೆಯಾಗಿರಬೇಕು ಎಂದು ಯುಎನ್ಎಚ್ಸಿಆರ್ ಟ್ವೀಟ್ ಮಾಡಿದೆ.
ಈ ದೋಣಿಯಲ್ಲಿದ್ದ ತನ್ನ 23 ವರ್ಷದ ಪುತ್ರಿ ಮುನುವರಾ ಬೇಗಂ(Munuwara Begum) ಕಳೆದ ವಾರ ವಾಕಿಟಾಕಿಯ ಮೂಲಕ ತನ್ನೊಂದಿಗೆ ಮಾತನಾಡಿದ್ದು ‘ತಾವು ಅಪಾಯದಲ್ಲಿದ್ದು ದಯವಿಟ್ಟು ರಕ್ಷಿಸಿ. ನಮ್ಮ ಬಳಿ ಆಹಾರ ಅಥವಾ ನೀರು ಕೂಡಾ ಇಲ್ಲ. ಮುಳುಗುತ್ತಿರುವ ದೋಣಿಯಿಂದ ತಮ್ಮನ್ನು ರಕ್ಷಿಸಲು ಯಾರೂ ಇಲ್ಲಿಲ್ಲ ’ ಎಂದು ಮನವಿ ಮಾಡಿದ್ದಳು ಎಂದು ಬಾಂಗ್ಲಾದೇಶದ ನಿರಾಶ್ರಿತರ ಶಿಬಿರದ ನಿವಾಸಿ ನೂರ್ ಹಬಿ ಹೇಳಿರುವುದಾಗಿ ವರದಿಯಾಗಿದೆ.
ಈ ಮಧ್ಯೆ, 57 ರೊಹಿಂಗ್ಯಾ ನಿರಾಶ್ರಿತರಿದ್ದ ಮತ್ತೊಂದು ದೋಣಿಯು ಒಂದು ತಿಂಗಳು ಸಮುದ್ರದಲ್ಲಿ ಗೊತ್ತುಗುರಿಯಿಲ್ಲದೆ ಅಲೆದಾಡಿದ ಬಳಿಕ ರವಿವಾರ ಇಂಡೋನೇಶ್ಯಾದ ಪಶ್ಚಿಮ ಕರಾವಳಿ ತಲುಪಿದೆ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ವಾರ ಬಂಗಾಳ ಕೊಲ್ಲಿಯ ಮತ್ತೊಂದು ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ದೋಣಿಯಿಂದ 104 ರೊಹಿಂಗ್ಯಾ ನಿರಾಶ್ರಿತರನ್ನು ಶ್ರೀಲಂಕಾದ ದೋಣಿ ರಕ್ಷಣೆ ಮಾಡಿತ್ತು.
2015ರಲ್ಲಿ ಸಾವಿರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳು ಜೀವರಕ್ಷಕ ಆರೈಕೆ ಮತ್ತು ಬೆಂಬಲವನ್ನು ಪಡೆಯಲು ಭಾರೀ ಸವಾಲುಗಳನ್ನು ಎದುರಿಸಿದ ಸ್ಥಿತಿ ಮರುಕಳಿಸದಂತೆ ಈ ವಲಯದ ದೇಶಗಳು ತುರ್ತಾಗಿ ಮತ್ತು ಸಾಮೂಹಿಕವಾಗಿ ಕೆಲಸ ಮಾಡುವಂತೆ ವಲಸೆಗಾಗಿನ ಅಂತರಾಷ್ಟ್ರೀಯ ಸಂಸ್ಥೆ(ಐಒಎಮ್) ಆಗ್ರಹಿಸಿದೆ.
ಪ್ರಾದೇಶಿಕ ಮಟ್ಟದಲ್ಲಿ ಇದನ್ನು ಪರಿಹರಿಸಲು ಸರಕಾರಗಳು ಮತ್ತು ಪಾಲುದಾರರು ಈ ಹಿಂದೆಯೂ ಒಗ್ಗೂಡಿದ್ದಾರೆ. ಕಳ್ಳ ಸಾಗಣೆದಾರರ ಕೈಯಲ್ಲಿ ನಿರಾಶ್ರಿತರ ಬದುಕು ಮತ್ತು ಸುರಕ್ಷತೆ ತೂಗುಯ್ಯಾಲೆಯಲ್ಲಿ ಇರುವ ಈ ಸಂದರ್ಭ ಮತ್ತೊಮ್ಮೆ ತುರ್ತು ಪ್ರಾದೇಶಿಕ ಕ್ರಮದ ಅಗತ್ಯವಿದೆ ಎಂದು ಐಒಎಮ್ ಹೇಳಿದೆ.