ಸುಶಾಂತ್ ಸಿಂಗ್ ರಜಪೂತ್ ರದ್ದು ಆತ್ಮಹತ್ಯೆಯಲ್ಲ ಕೊಲೆ: ಮರಣೋತ್ತರ ಪರೀಕ್ಷೆ ನಡೆಸಿದ ವ್ಯಕ್ತಿ ಪ್ರತಿಪಾದನೆ

ಹೊಸದಿಲ್ಲಿ, ಡಿ. 26: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್(Sushant Singh Rajput) ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರನ್ನು ಹತ್ಯೆಗೈಯಲಾಗಿದೆ ಎಂದು ಸುಶಾಂತ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವ್ಯಕ್ತಿಯೋರ್ವರು ಹೇಳಿದ್ದಾರೆ. ಸುಶಾಂತ್ ಸಾವಿನ ಸುಮಾರು ಎರಡು ವರ್ಷಗಳ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದ ರೂಪಕುಮಾರ್ ಶಾ(Rupkumar Shah) ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸುಶಾಂತ್ ಅವರ ಮೃತದೇಹದಲ್ಲಿ ಹಲವು ಗಾಯದ ಗುರುತುಗಳಿದ್ದವು ಎಂದು ತಿಳಿಸಿದ್ದಾರೆ.
‘‘ಸುಶಾಂತ್ ಅವರು ಮೃತಪಟ್ಟ ಬಳಿಕ ‘ಕೂಪರ್ ಹಾಸ್ಟಿಟಲ್ ಫಾರ್ ಪೋಸ್ಟ್ಮಾರ್ಟಂ’ನಲ್ಲಿ ನಾವು ಐದು ಮೃತದೇಹಗಳನ್ನು ಸ್ವೀಕರಿಸಿದ್ದೆವು. ಈ ಐದು ಮೃತದೇಹಗಳಲ್ಲಿ ಒಂದು ವಿಐಪಿಯ ಮೃತದೇಹವಾಗಿತ್ತು. ನಾವು ಮರಣೋತ್ತರ ಪರೀಕ್ಷೆ ನಡೆಸಲು ಹೋದಾಗ ಅದು ಸುಶಾಂತ್ ಅವರ ಮೃತದೇಹವೆಂದು ತಿಳಿಯಿತು. ಅವರ ಮೃತದೇಹದಲ್ಲಿ ಹಲವು ಗಾಯಗಳ ಗುರುತುಗಳಿದ್ದವು. ಕುತ್ತಿಗೆಯಲ್ಲಿ ಕೂಡ ಎರಡು ಮೂರು ಗಾಯದ ಗುರುತುಗಳಿದ್ದುವು.
ಮರಣೋತ್ತರ ಪರೀಕ್ಷೆಯ ಸಂದರ್ಭ ವೀಡಿಯೊ ರೆಕಾರ್ಡ್ ಮಾಡುವುದು ಅತ್ಯಗತ್ಯ. ಆದರೆ, ಮೃತದೇಹದ ಫೋಟೊ ಮಾತ್ರ ತೆಗೆಯುವಂತೆ ಉನ್ನತ ವೈದ್ಯಾಧಿಕಾರಿಗಳು ಸೂಚಿಸಿದ್ದರು. ಆದುದರಿಂದ ಅವರ ಆದೇಶದಂತೆ ಮಾಡಲಾಯಿತು’’ ಎಂದು ಶಾ ಅವರು ತಿಳಿಸಿದ್ದಾರೆ. ‘‘ಸುಶಾಂತ್ ಅವರ ಮೃತದೇಹವನ್ನು ಮೊದಲ ಬಾರಿ ನೋಡಿದಾಗ, ನಾನು ಕೂಡಲೇ ಹಿರಿಯ ವೈದ್ಯರಿಗೆ ಮಾಹಿತಿ ನೀಡಿದೆ. ಇದು ಆತ್ಮಹತ್ಯೆ ಅಲ್ಲ. ಹತ್ಯೆ ಎಂದು ನನಗೆ ಅನಿಸುತ್ತಿದೆ ಎಂದು ತಿಳಿಸಿದ್ದೆ.
ನಾವು ನಿಯಮದಂತೆ ಕಾರ್ಯ ನಿರ್ವಹಿಸಬೇಕು ಎಂದು ಕೂಡ ಹೇಳಿದ್ದೆ. ಆದರೆ, ನನ್ನ ಹಿರಿಯ ವೈದ್ಯರು ಆದಷ್ಟು ಬೇಗ ಮೃತದೇಹದ ಫೋಟೊ ತೆಗೆದುಕೊಳ್ಳಿ ಹಾಗೂ ಮೃತದೇಹವನ್ನು ಪೊಲೀಸರಿಗೆ ಹಸ್ತಾಂತರಿಸಿ ಎಂದಿದ್ದರು. ಅನಂತರ ನಾವು ರಾತ್ರಿಯೇ ಮರಣೋತ್ತರ ಪರೀಕ್ಷೆ ನಡೆಸಿದೆವು’’ ಎಂದು ಶಾ ಹೇಳಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ಮುಂಬೈಯ ಅಪಾರ್ಟ್ಮೆಂಟ್ನಲ್ಲಿ 2020 ಜೂನ್ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.







