‘ಜಾಂಬೂರಿ’ಯ ನೆನಪಲ್ಲಿ ಯುವಶಕ್ತಿ ಕೇಂದ್ರ ನಿರ್ಮಾಣ: ಡಾ.ಎಂ.ಮೋಹನ ಆಳ್ವ
ಮೂಡುಬಿದಿರೆ: ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಆಳ್ವಾಸ್ ಕ್ಯಾಂಪಸ್‌ನಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಸಾಂಸ್ಕೃತಿಕ ಜಾಂಬೂರಿಯ ನೆನಪಿಗಾಗಿ 90 ಕೋ.ರೂ. ವೆಚ್ಚದಲ್ಲಿ ಮುಂದಿನ ಒಂದು ವರ್ಷದೊಳಗೆ ಯುವಶಕ್ತಿ ಕೇಂದ್ರವನ್ನು ನಿರ್ಮಿಸುವ ಉದ್ದೇಶವಿದೆ ಎಂದು ಡಾ.ಎಂ.ಮೋಹನ ಆಳ್ವ ಹೇಳಿದರು.
ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಾರ್ಯಚಟುವಟಿಕೆಗಳಿಗಾಗಿ ಯುವಶಕ್ತಿ ಕೇಂದ್ರದ ನಿರ್ಮಾಣವಾಗಬೇಕಿದೆ. ಸಂಸದರ ಸಹಿತ ಜಿಲ್ಲೆಯ ಜನಪ್ರತಿನಿಧಿಗಳು ಯುವಶಕ್ತಿ ಕೇಂದ್ರಕ್ಕೆ ಸರಕಾರದಿಂದ ನೆರವನ್ನು ಒದಗಿಸಿಕೊಡಬೇಕು. ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಾರ್ಯಚಟುವಟಿಕೆಗಳಿಗೆ ಪ್ರತ್ಯೇಕ ಜಾಗ ಮಿಸಲಿಡುವ ಕೆಲಸ ಆಗಬೇಕಿದೆ. ಯುವಶಕ್ತಿ ಕೇಂದ್ರದ ನಿರ್ಮಾಣದ ಕುರಿತಂತೆ ಸ್ಕೌಟ್ಸ್ ಮತ್ತು ಗೈಡ್ಸ್‌ನ ೩೬ ಜಿಲ್ಲೆಗಳ ಮುಖ್ಯಸ್ಥರ ಸಭೆ ಕರೆದು ಮುಂದಿನ ಯೋಜನೆಯ ರೂಪುರೇಷೆ ತಯಾರಿಸಲಾಗುವುದು. ನಿರ್ಣಯದ ಪ್ರತಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಡಾ. ಮೋಹನ ಆಳ್ವ ನುಡಿದರು.
ವಾಮಂಜೂರು ಸಮೀಪದ ಪಿಲಿಕುಳದಲ್ಲಿ 15 ಎಕರೆ ಪ್ರದೇಶವಿದೆ. ಸದ್ಯ ಈ ಪ್ರದೇಶವನ್ನೇ ವಿಸ್ತರಿಸಿ ಸಕಲ ವ್ಯವಸ್ಥೆಯೊಂದಿಗೆ ಯುವಶಕ್ತಿ ಕೇಂದ್ರ ಆರಂಭಿಸುವ ಉದ್ದೇಶವಿದೆ. ಇದಕ್ಕೆ ಉದ್ಯಮಿಗಳು, ದಾನಿಗಳ ನೆರವಿನ ಅಗತ್ಯವಿದೆ. ಮಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮಗಳಿಗೆ ಸುಸಜ್ಜಿತವಾದ ಮೈದಾನವಿಲ್ಲ. ಪೊಲೀಸ್ ಟ್ರೈನಿಂಗ್, ಎನ್‌ಸಿಸಿ ಸಹಿತ ಯಾವುದೇ ತರಬೇತಿ ನಡೆಸಲು ಸೂಕ್ತ ಮೈದಾನವಿಲ್ಲ. ಆದ್ದರಿಂದ ಜಾಗವನ್ನು ಗುರುತಿಸಿ ಅಭಿವೃದ್ಧಿ ಪಡಿಸಲೇಬೇಕು. ಸರಕಾರ ಕೂಡ ಈ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಬೇಕು ಎಂದು ಡಾ.ಮೋಹನ್ ಆಳ್ವ ಮನವಿ ಮಾಡಿದರು.





