ಜಾಂಬೂರಿ ಪ್ರತಿಯೊಬ್ಬರ ನೆನಪಿನಲ್ಲಿ ಉಳಿಯಲಿದೆ: ಡಾ.ಮೋಹನ್ ಆಳ್ವ

ಮೂಡಬಿದ್ರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನೇತೃತ್ವದಲ್ಲಿ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯು ದಾಖಲೆಯನ್ನೇ ನಿರ್ಮಿಸಿದೆ. ವಿಜ್ಞಾನ, ಕಲೆ, ಕೃಷಿ, ಆಹಾರ, ಪುಸ್ತಕ ಮೇಳಗಳ ಆಯೋಜನೆ, ಊಟೋಪಚಾರ, ಅಚ್ಚುಕಟ್ಟುತನಕ್ಕೆ ಪ್ರಧಾನ ಆದ್ಯತೆ ನೀಡಿದ ಈ ಜಾಂಬೂರಿಯು ಪ್ರತಿಯೊಬ್ಬರ ನೆನಪಿನಲ್ಲಿ ಉಳಿಯಲಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ದ.ಕ.ಜಿಲ್ಲಾ ಘಟಕದ ಆಯುಕ್ತ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಯ ರೂವಾರಿ ಡಾ. ಎಂ.ಮೋಹನ ಆಳ್ವ ವಿಶ್ವಾಸ ವ್ಯಕ್ತಪಡಿಸಿದರು.
ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿದಿನ ಸುಮಾರು ಎರಡು ಲಕ್ಷದಷ್ಟು ಮಂದಿ ಜಾಂಬೂರಿ ವೀಕ್ಷಣೆಗೆ ಆಗಮಿಸಿದ್ದಾರೆ. 150 ಎಕರೆ ಪ್ರದೇಶದಲ್ಲಿ ನಡೆದ ಸಾಂಸ್ಕೃತಿಕ ಜಾಂಬೂರಿಯಲ್ಲಿ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಪ್ರಯತ್ನ ನಡೆಸಲಾಗಿದೆ. ಇಲ್ಲಿನ ವ್ಯವಸ್ಥೆಯ ಅಚ್ಚುಕಟ್ಟಿಗೆ ದೇಶ ವಿದೇಶಗಳಿಂದ ಬಂದವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದರು.
ಅತ್ಯಂತ ವೈಭವಯುತವಾಗಿ ನಡೆದ ಸಾಂಸ್ಕೃತಿಕ ಜಾಂಬೂರಿಯು ಮುಂದೆ ಇತರ ದೇಶಗಳಲ್ಲಿ ನಡೆಸುವ ಸಾಂಸ್ಕೃತಿಕ ಜಾಂಬೂರಿಗೆ ದಿಕ್ಸೂಚಿ ನೀಡಿದೆ. ದೇಶ ವಿದೇಶಗಳಿಂದ 50 ಸಾವಿರ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಅವರೊಂದಿಗೆ ಶಿಕ್ಷಕ ವರ್ಗ ಸಹಿತ 65 ಸಾವಿರದಷ್ಟು ಮಂದಿ ಆಗಮಿಸಿದ್ದು, ಅವರೆಲ್ಲರಿಗೂ ಸಕಲ ವ್ಯವಸ್ಥೆ ಕಲ್ಪಿಸಲಾಗಿತ್ತು.ಯಾವೊಂದು ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದು ಡಾ.ಮೋಹನ ಆಳ್ವ ಹೇಳಿದರು.
ಜಾಂಬೂರಿ ಕೇವಲ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದರೂ, ಸಾರ್ವಜನಿಕರ ಹಿತದೃಷ್ಟಿಯಿಂದ ಆಹಾರ ಮೇಳ, ಕಲಾ ಮೇಳ, ವಿಜ್ಞಾನ ಮೇಳ, ಕೃಷಿ ಮೇಳ, ಪುಸ್ತಕ ಮೇಳ ಹೀಗೆ ಹಲವು ಆಕರ್ಷಣೆಯ ಕೇಂದ್ರವನ್ನು ನಿರ್ಮಿಸುವ ಮೂಲಕ ಪ್ರತಿಯೊಬ್ಬರೂ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿತ್ತು. ಪ್ರತಿಯೊಬ್ಬರೂ ಕೃಷಿ ಮೇಳದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪೂನಾದಿಂದ ನರ್ಸರಿಯ ವ್ಯವಸ್ಥೆಯನ್ನೂ ಮಾಡಲಾಗಿತ್ತು. 400ಕ್ಕೂ ಅಧಿಕ ಬಗೆಯ ಪುಷ್ಪಗಳನ್ನು ಕಂಡ ಜನತೆ ಮನಸೋತಿದ್ದಾರೆ. ಫೋಟೊಗ್ರಫಿ, ಮ್ಯಾಜಿಕ್, ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದಕ್ಕೊಂದು ಭಿನ್ನವಾಗಿತ್ತು. ಸಾಂಸ್ಕೃತಿಕ ಜಾಂಬೂರಿಯ ಯಶಸ್ಸಿಗೆ ಇದೆಲ್ಲಾ ಕಾರಣವಾಗಿತ್ತು ಎಂದು ಡಾ.ಮೋಹನ ಆಳ್ವ ತಿಳಿಸಿದರು.







