ಉಪ್ಪಿನಂಗಡಿ: ಮೀನು ಹಿಡಿಯಲು ಹೋದ ವ್ಯಕ್ತಿ ನೀರುಪಾಲು
ಜೊತೆಗಿದ್ದೂ ಮಾಹಿತಿ ನೀಡದ ವ್ಯಕ್ತಿಗೆ ಸಾರ್ವಜನಿಕರಿಂದ ಹಲ್ಲೆ: ಆರೋಪ

ಉಪ್ಪಿನಂಗಡಿ: ಮೀನು ಹಿಡಿಯಲೆಂದು ಹೋದ ವ್ಯಕ್ತಿಯೋರ್ವರು ನೇತ್ರಾವತಿ ನದಿಯಲ್ಲಿ ನೀರು ಪಾಲಾದ ಘಟನೆ ಮುಗೇರಡ್ಕದಲ್ಲಿ ಸೋಮವಾರ ಸಂಜೆ ನಡೆದಿದ್ದು, ಇದು ತಡವಾಗಿ ಬೆಳಕಿಗೆ ಬಂದ ಕಾರಣ ರಾತ್ರಿ ಶೋಧ ಕಾರ್ಯ ಆರಂಭವಾಗಿದೆ. ಮೊಗ್ರು ಗ್ರಾಮದ ದಂಡುಗ ನಿವಾಸಿ ಜನಾರ್ದನ (40) ನೀರುಪಾಲಾದ ವ್ಯಕ್ತಿ ಎಂದು ತಿಳಿದು ಬಂದಿದೆ.
ಜನಾರ್ದನ ಹಾಗೂ ಮೊಗ್ರು ಗ್ರಾಮದ ಬೋಲೋಡಿ ನಿವಾಸಿ ಮಹೇಶ್ ಎಂಬವರು ಇಂದು ಮುಗೇರಡ್ಕದ ಕಾಮಗಾರಿ ಹಂತದಲ್ಲಿರುವ ಸೇತುವೆ ಬಳಿ ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದರು. ಆ ಸಂದರ್ಭ ಜನಾರ್ದನ ಅವರು ನೀರು ಪಾಲಾಗಿದ್ದಾರೆ. ಆದರೆ ಇವರ ಜೊತೆಗಿದ್ದ ಮಹೇಶ್ ಈ ಸಂದರ್ಭ ಯಾರ ಸಹಾಯಕ್ಕೂ ಕೂಗದೇ ಅಲ್ಲಿಂದ ತೆರಳಿದ್ದಾಗಿ ಆರೋಪಿಸಲಾಗಿದೆ.
ನಂತರ ಬಾರ್ ವೊಂದಕ್ಕೆ ತೆರಳಿದ್ದ ಮಹೇಶ್ ಅಲ್ಲಿದ್ದವರಲ್ಲಿ ಜನಾರ್ದನ ನೀರುಪಾಲಾದ ವಿಷಯ ತಿಳಿಸಿದ್ದಾನೆನ್ನಲಾಗಿದ್ದು, ರಾತ್ರಿ ಮಾಹಿತಿ ಗೊತ್ತಾದ ನಂತರ ನೀರುಪಾಲಾದ ವ್ಯಕ್ತಿಯ ಶೋಧ ಕಾರ್ಯಾಚರಣೆ ಆರಂಭವಾಗಿದೆ.
ನೀರುಪಾಲಾದ ವಿಷಯ ಗೊತ್ತಿದ್ದರೂ ಯಾರಲ್ಲೂ ತಕ್ಷಣಕ್ಕೆ ವಿಷಯ ತಿಳಿಸದೇ ರಾತ್ರಿಯ ಸಮಯದಲ್ಲಿ ಹೇಳಿದ ಮಹೇಶ್ ಗೆ ಸ್ಥಳದಲ್ಲಿದ್ದ ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.