ಬೆಂಗಳೂರು | ಮನೆ ಖರೀದಿಸುವ ನೆಪದಲ್ಲಿ ಬಿಜೆಪಿ ಮುಖಂಡನಿಂದ ವಂಚನೆ: ಆರೋಪ

ಬೆಂಗಳೂರು, ಡಿ.26: ತಮ್ಮ ಸ್ವಾಯಾರ್ಜಿತ ಮನೆಯನ್ನು ಖರೀದಿಸುವ ನೆಪದಲ್ಲಿ ಬಿಜೆಪಿ ಪಕ್ಷದ ಮುಖಂಡ ಎ.ಎಚ್. ಆನಂದ್ ಎಂಬಾತನು ಮೋಸ ಮಾಡಿದ್ದಾನೆ ಎಂದು ಮಾಜಿ ಸೈನಿಕನ ಪತ್ನಿ ಕೆ. ನಿರ್ಮಲ ಬಾಯಿ ಆರೋಪಿಸಿದ್ದಾರೆ.
ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ‘ನಾನು ವಾಸ ಮಾಡುತ್ತಿದ್ದ ಮನೆಯನ್ನು 2014ರಲ್ಲಿ 70 ಲಕ್ಷ ರೂ.ಗಳಿಗೆ ಕೊಂಡುಕೊಳ್ಳುವುದಾಗಿ ವ್ಯವಹಾರವನ್ನು ನಡೆಸಿದ್ದ ಎ.ಎಚ್. ಆನಂದ್, 15 ಲಕ್ಷ ರೂ.ಗಳನ್ನು ಮುಂಗಡವಾಗಿ ನೀಡಿದ್ದನು. ಬಾಕಿ ಹಣವನ್ನು ನೋಂದಣಿ ಸಮಯದಲ್ಲಿ ನೀಡುವುದಾಗಿ ಹೇಳಿದ್ದನು. ಬಳಿಕ ಬಾಕಿ 55 ಲಕ್ಷ ರೂ. ಹಣವನ್ನು ನೀಡದೆ, 13 ಲಕ್ಷ ರೂ. ಹಣವನ್ನು ನೀಡಿ ಕ್ರಯ ಮಾಡಿಸಿಕೊಂಡಿದ್ದಾನೆ. ಉಳಿದ 42 ಲಕ್ಷ ರೂ. ಹಣವನ್ನು ನೀಡದೆ ವಂಚಿಸುತ್ತಿದ್ದಾನೆ’ ಎಂದು ಆರೋಪಿಸಿದರು.
‘ಎ.ಎಚ್. ಆನಂದ್ ನನಗೆ ಅನ್ಯಾಯ ಮಾಡಿದ ಕಾರಣ, ಲೀಗಲ್ ನೋಟೀಸ್‍ಗಳನ್ನು ಜಾರಿ ಮಾಡಿದ್ದೇವೆ. ಆದುದರಿಂದ ನನ್ನ ಮೇಲೆ ದ್ವೇಷ, ಅಸೂಹೆ ಬೆಳೆಸಿಕೊಂಡು, ಪ್ರಾಣ ಬೆದರಿಕೆ ಹಾಕುತ್ತಿದ್ದಾನೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರನ್ನು ಸಂಪರ್ಕಿಸಿದರೂ, ಯಾವುದೇ ಪ್ರಯೋಜನ ಆಗಿಲ್ಲ. ಆದರೆ ಎ.ಎಚ್. ಆನಂದ್ ಬೆದರಿಕೆ ಮುಂದುವರೆಸಿದ್ದಾನೆ’ ಎಂದು ಹೇಳಿದರು.
ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ.ಎಚ್. ಆನಂದ್ ಮತ್ತು ಇತರರ ಮೇಲೆ ವೈಯಾಲಿಕಾವಲ್ ಪೋಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಎಫ್‍ಐಆರ್ ಸಹ ದಾಖಲಾಗಿದೆ. ಆದರೂ ತನ್ನ ರಾಜಕೀಯ ಪ್ರಭಾವನ್ನು ಬಳಸಿಕೊಂಡು ನನ್ನ ಮೇಲೆ ಸೇಡು ತಿರಿಸಿಕೊಳ್ಳುತ್ತಿದ್ದೇನೆ. ಮಾನಸಿಕ ಕಿರುಕುಳದಿಂದಾಗಿ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು, ಕಳೆದ ವಾರವಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇನೆ. ಈ ಅನಾಹುತಗಳಿಗೆ ಎ.ಎಚ್. ಆನಂದ್ ಮೂಲ ಕಾರಣ ಎಂದು ಅವರು ದೂರಿದರು.
ಜಮೀನು ಖರೀದಿ ವಿವಾದದ ಹಂತದಲ್ಲಿದ್ದರೂ, ಲಿಟಿಗೇಷನ್ ಅನ್ನು ಮುಚ್ಚಿ ಹಾಕಿ ನನ್ನ ಸ್ವಾಧೀನದಲ್ಲಿರುವ ನನ್ನ ಮನೆಯನ್ನು ನನ್ನ ಅನುಮತಿಯಿಲ್ಲದೆ, ರಾಜಾನುಕುಂಟೆಯಲ್ಲಿರುವ ಎಸ್.ಬಿ.ಐ. ಬ್ಯಾಂಕ್‍ನಲ್ಲಿ ಅಡವಿಟ್ಟು 50 ಲಕ್ಷ ರೂ. ಹಣ ಪಡೆದಿದ್ದಾನೆ. ಆದರೆ ನನಗೆ ಪಾವತಿ ಮಾಡಬೇಕಾದ 42 ಲಕ್ಷ ರೂ.ಗಳನ್ನು ಇನ್ನೂ ಪಾವತಿ ಮಾಡಿಲ್ಲ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ವಕೀಲ ಕೃಷ್ಣಯ್ಯ, ಸತೀಶ್ ರಾವ್ ಮತ್ತು ಶಾಂತಪ್ಪ ಉಪಸ್ಥಿತರಿದ್ದರು.







