ನೇಪಾಳ ಪ್ರಧಾನಿಯಾಗಿ ಪುಷ್ಪಕಮಲ ‘ಪ್ರಚಂಡ’ ಪ್ರಮಾಣ ವಚನ

ಕಠ್ಮಂಡು, ಡಿ.26: ನೇಪಾಳದ ನೂತನ ಪ್ರಧಾನಿಯಾಗಿ ಪುಷ್ಪಕಮಲ ದಹಾಲ್ ‘ಪ್ರಚಂಡ’ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
169 ಸದಸ್ಯರ ಬೆಂಬಲ ಇರುವ ಪತ್ರವನ್ನು ಅಧ್ಯಕ್ಷೆ ಬಿದ್ಯಾದೇವಿ ಭಂಡಾರಿಗೆ ಹಸ್ತಾಂತರಿಸಿದ ಬಳಿಕ ‘ಪ್ರಚಂಡ’ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಚುನಾವಣಾ ಪೂರ್ವ ಮೈತ್ರಿಕೂಟದಿಂದ ನಾಟಕೀಯ ರೀತಿಯಲ್ಲಿ ಹೊರನಡೆದ ಪುಷ್ಪಕಮಲ ದಹಾಲ್ ‘‘ಪ್ರಚಂಡ’ ವಿಪಕ್ಷ ಮುಖಂಡ ಕೆ.ಪಿ. ಶರ್ಮಾ ಒಲಿ ಅವರೊಂದಿಗೆ ಕೈಜೋಡಿಸಿದ್ದರು.
ಮೈತ್ರಿಕೂಟದ ಸರಕಾರದ ಐವರು ಕ್ಯಾಬಿನೆಟ್ ಸಚಿವರೂ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ಒಲಿ ಅವರ ಸಿಪಿಎನ್-ಯುಎಂಎಲ್ ಪಕ್ಷದ ಬಿಷ್ಣು ಪಾವ್ದೆಲ್, ಸಿಪಿಎನ್- ಮಾವೋವಾದಿ ಕೇಂದ್ರ ಪಕ್ಷದ ನಾರಾಯಣ್ ಕಾಜಿ ಶ್ರೇಷ್ಟ, ಆರ್ಎಸ್ಪಿ ಪಕ್ಷದ ರಬಿ ಲ್ಯಾಮಿಚನೆ ನೂತನ ಸರಕಾರದಲ್ಲಿರುವ ಮೂವರು ಉಪಪ್ರಧಾನಿಗಳಾಗಿದ್ದಾರೆ. ಸರಕಾರ ರಚಿಸಿರುವ ‘ಪ್ರಚಂಡ’ ಇದೀಗ 30 ದಿನದೊಳಗೆ ಸಂಸತ್ನ ಕೆಳಮನೆಯಲ್ಲಿ ಬಹುಮತ ಸಾಬೀತುಪಡಿಸಬೇಕಿದೆ.
ಚೀನಾ ಪರ ನಿಲುವು ಹೊಂದಿರುವ ‘ಪ್ರಚಂಡ’ ನೇಪಾಳದ ಪ್ರಧಾನಿಯಾಗಿ ನೇಮಕಗೊಂಡಿರುವುದು ಭಾರತ-ನೇಪಾಳ ನಡುವಿನ ಸಂಬಂಧ ಸುಧಾರಣೆಗೆ ಹಿನ್ನಡೆಯಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ. ‘ನೇಪಾಳದಲ್ಲಿ ‘ಬದಲಾದ ಸನ್ನಿವೇಶದ’ ಆಧಾರದ ಮೇಲೆ ಮತ್ತು 1950ರ ಸ್ನೇಹ ಒಪ್ಪಂದದ ಪರಿಷ್ಕರಣೆ, ಕಾಲಾಪಾನಿ ಮತ್ತು ಸುಸ್ತಾ ಗಡಿವಿವಾದದ ಪರಿಹಾರದಂತಹ ಮಹೋನ್ನತ ಸಮಸ್ಯೆಗಳನ್ನು ಪರಿಹರಿಸಿದ ನಂತರ ಭಾರತದೊಂದಿಗೆ ಹೊಸ ತಿಳುವಳಿಕೆಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ’ ಎಂದು ಇತ್ತೀಚೆಗೆ ಅವರು ಹೇಳಿಕೆ ನೀಡಿದ್ದರು.
1950ರ ಭಾರತ-ನೇಪಾಳ ಶಾಂತಿ ಮತ್ತು ಸ್ನೇಹ ಒಪ್ಪಂದ ಎರಡೂ ದೇಶಗಳ ನಡುವಿನ ವಿಶೇಷ ಸಂಬಂಧದ ಅಡಿಪಾಯವಾಗಿದೆ. ಆದರೆ, ‘ಭಾರತ ಮತ್ತು ನೇಪಾಳವು ದ್ವಿಪಕ್ಷೀಯ ಸಹಕಾರದ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ‘ಇತಿಹಾಸದಿಂದ ಉಳಿದುಕೊಂಡಿರುವ’ ಕೆಲವು ವಿಷಯಗಳ ಬಗ್ಗೆ ರಾಜತಾಂತ್ರಿಕವಾಗಿ ಪರಿಹರಿಸಬೇಕಾಗಿದೆ’ ಎಂದು ‘ಪ್ರಚಂಡ’ ಪ್ರತಿಪಾದಿಸುತ್ತಿದ್ದಾರೆ.ಅವರ ಮೈತ್ರಿಕೂಟದ ಮತ್ತೋರ್ವ ಪ್ರಮುಖ ಮುಖಂಡ ಕೆ.ಪಿ.ಶರ್ಮಾ ಒಲಿ ಕೂಡಾ ಚೀನಾ ಪರ ನಿಲುವು ಹೊಂದಿದ್ದಾರೆ.